

ನವದೆಹಲಿ: ಬಿಸಿಸಿಐ ಈ ಬಾರಿ ಐಪಿಎಲ್ ತಂಡಗಳಿಗೆ ಗರಿಷ್ಠ 5 ಆಟಗಾರರ ರಿಟೇನ್ಗೆ ಅನುವು ಮಾಡಿಕೊಡುವ ಜತೆಗೆ ಮೆಗಾ ಹರಾಜಿನಲ್ಲಿ ರೈಟ್ ಟು ಮ್ಯಾಚ್ (ಆರ್ಟಿಎಂ) ಬಳಸಿಕೊಳ್ಳುವ ಅವಕಾಶವನ್ನೂ ಕಲ್ಪಿಸಿದೆ. ಆದರೆ ಇದರೊಂದಿಗೆ ಒಂದು ಟ್ವಿಸ್ಟ್ ಕೂಡ ಇಟ್ಟಿದೆ. ಇದರಿಂದಾಗಿ ಈಗ ಕೆಲ ಐಪಿಎಲ್ ಫ್ರಾಂಚೈಸಿಗಳ ಮಾಲೀಕರು ಬಿಸಿಸಿಐ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಆರ್ಟಿಎಂ ನಿಯಮಾವಳಿಯನ್ನು ಪ್ರಶ್ನಿಸಿ ಕೆಲ ಫ್ರಾಂಚೈಸಿಗಳು ಬಿಸಿಸಿಐಗೆ ಪತ್ರವನ್ನೂ ಬರೆದಿವೆ ಎನ್ನಲಾಗಿದೆ.
ಆರ್ಟಿಎಂ ಪ್ರಕಾರ, ತಂಡವೊಂದು ಹರಾಜಿನಲ್ಲಿ ತನ್ನ ಮೂಲ ಆಟಗಾರ ಬೇರೆ ತಂಡಕ್ಕೆ ಗರಿಷ್ಠ ಮೊತ್ತಕ್ಕೆ ಬಿಡ್ ಆದಾಗ ಆತನನ್ನು ಅದೇ ಮೊತ್ತಕ್ಕೆ ತನ್ನಲ್ಲಿಯೇ ಉಳಿಸಿಕೊಳ್ಳುವ ಅವಕಾಶ ಕಲ್ಪಿಸುತ್ತದೆ. ಆದರೆ ಈ ಬಾರಿ 2018ರ ಬಳಿಕ ಮತ್ತೆ ಐಪಿಎಲ್ ಹರಾಜಿನಲ್ಲಿ ಆರ್ಟಿಎಂ ಬಳಕೆಯಾಗುತ್ತಿದ್ದರೂ, ಈ ನಿಯಮಕ್ಕೆ ಸ್ವಲ್ಪ ತಿದ್ದುಪಡಿ ತಂದಿದೆ. ಇದರನ್ವಯ, ಹರಾಜಿನಲ್ಲಿ ಎ ತಂಡ ಆಟಗಾರನೊಬ್ಬನಿಗೆ 6 ಕೋಟಿ ರೂ. ಬಿಡ್ ಸಲ್ಲಿಸಿದಾಗ, ಬಿ ತಂಡ ಆರ್ಟಿಎಂ ಬಳಸಿ ತನ್ನಲ್ಲಿ ಉಳಿಸಿಕೊಳ್ಳಲು ಮುಂದಾದರೆ, ಎ ತಂಡಕ್ಕೆ ಬಿಡ್ ಮೊತ್ತ ಏರಿಸುವ ಅವಕಾಶ ನೀಡಲಾಗುತ್ತದೆ. ಆಗ ಎ ತಂಡ 12 ಕೋಟಿ ರೂ. ಬಿಡ್ ಸಲ್ಲಿಸಿದರೆ, ಬಿ ತಂಡ ಆರ್ಟಿಎಂನಲ್ಲಿ ಆ ಮೊತ್ತಕ್ಕೇ ಆಟಗಾರನನ್ನು ಮರಳಿ ಗಳಿಸಬಹುದಾಗಿರುತ್ತದೆ. ಎ ತಂಡ ಎಷ್ಟೇ ಮೊತ್ತದ ಬಿಡ್ ಏರಿಕೆಯ ಮೂಲಕ ಆಟಗಾರನನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸಬಹುದು ಎಂದು ಬಿಸಿಸಿಐ ತಿಳಿಸಿದೆ.
ಆರ್ಟಿಎಂನ ಈ ಹೊಸ ನಿಯಮಾವಳಿ ಫ್ರಾಂಚೈಸಿಗಳ ಪಾಲಿಗೆ ತಲೆನೋವಾಗಿದೆ. ಈ ಹೊಸ ನಿಯಮದಿಂದಾಗಿ ಆರ್ಟಿಎಂ ತನ್ನ ತರ್ಕವನ್ನೇ ಕಳೆದುಕೊಂಡಿದೆ. ಹಿಂದಿನ ಆರ್ಟಿಎಂ ಪ್ರಕಾರ ಆಟಗಾರನೊಬ್ಬ ಹರಾಜಿನಲ್ಲಿ ತನ್ನ ಮಾರುಕಟ್ಟೆ ಮೌಲ್ಯದೊಂದಿಗೆ ಮೂಲ ತಂಡಕ್ಕೆ ಮರಳಬಹುದಾಗಿತ್ತು. ಆದರೆ ಈಗಿನ ಬದಲಾವಣೆಯಿಂದಾಗಿ ಆಟಗಾರನ ಮೊತ್ತ ನಿರಂಕುಶವಾಗಿ ಏರಿಕೆಯಾಗುತ್ತದೆ. ಇದು ಮೂಲ ತಂಡಕ್ಕೆ ಆತನನ್ನು ಉಳಿಸಿಕೊಳ್ಳಲು ಕಷ್ಟವಾಗಿಸುತ್ತದೆ ಎಂದು ಫ್ರಾಂಚೈಸಿಗಳ ಬೇಸರವಾಗಿದೆ.
ಆದರೆ ಬಿಸಿಸಿಐ, ಹೆಚ್ಚಿನ ಸ್ಟಾರ್ ಆಟಗಾರರ ಮೆಗಾ ಹರಾಜಿನಲ್ಲಿ ಕಾಣಿಸಿಕೊಳ್ಳಬೇಕು ಎಂಬ ಉದ್ದೇಶದಿಂದಲೇ ಈ ನಿಯಮಾವಳಿ ರೂಪಿಸಿದೆ ಎನ್ನಲಾಗುತ್ತಿದೆ.
ರಿಟೇನ್ ಕೂಡ ಬಲು ಕಠಿಣ
ಐಪಿಎಲ್ ರಿಟೇನ್ ನಿಯಮಾವಳಿ ಪ್ರಕಾರ ಮೊದಲ 3 ಆಟಗಾರರ ರಿಟೇನ್ಗೆ 18, 14, 11 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಇದು ಸಾಧ್ಯವೆನಿಸಿದರೂ, ಇನ್ನಿಬ್ಬರು ಆಟಗಾರರ ರಿಟೇನ್ಗೆ ಮತ್ತೆ 18, 14 ಕೋಟಿ ರೂ. ವ್ಯಯಿಸಬೇಕಾಗಿರುವುದು ತಾಪತ್ರಯ ತಂದಿಟ್ಟಿದೆ. 4, 5ನೇ ಆದ್ಯತೆಯ ಆಟಗಾರರನ್ನು ಹರಾಜಿಗೆ ಬಿಟ್ಟು ಆರ್ಟಿಎಂ ಮೂಲಕ ಉಳಿಸಿಕೊಳ್ಳಲು ಪ್ರಯತ್ನಿಸಬಹುದಾದರೂ, ಅದರ ಹೊಸ ನಿಯಮಾವಳಿಯಿಂದಾಗಿ ಅದು ಕೂಡ ಕಷ್ಟಕರವೆನಿಸಿದೆ. ಯಾಕೆಂದರೆ, ಒಂದು ವೇಳೆ 4, 5ನೇ ಆದ್ಯತೆಯ ಆಟಗಾರರನ್ನು ರಿಟೇನ್ ಮಾಡಿಕೊಳ್ಳದಿದ್ದರೆ ಮೆಗಾ ಹರಾಜಿನಲ್ಲಿ ಅವರು ಇನ್ನಷ್ಟು ಅಧಿಕ ಮೊತ್ತದ ಬಿಡ್ ಪಡೆದುಕೊಳ್ಳುವ ಭೀತಿಯೂ ಫ್ರಾಂಚೈಸಿಗಳಲ್ಲಿ ಮನೆಮಾಡಿದೆ.