

IPL Franchise: ಅ.19ರಿಂದ ಆರಂಭಗೊಳ್ಳಲಿರುವ ಭಾರತ ವಿರುದ್ಧದ ಟಿ20, ಏಕದಿನ ಸರಣಿಗೆ ಆಸ್ಟ್ರೇಲಿಯಾ ತಂಡ ಸಜ್ಜಾಗಿದೆ. ಪ್ಯಾಟ್ ಕಮ್ಮಿನ್ಸ್, ಟ್ರಾವಿಡ್ ಹೆಡ್ರಂತಹ ಸ್ಟಾರ್ ಆಟಗಾರರು ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಪ್ರದರ್ಶನ ಕೊಡಲು ಮೈದಾನದಲ್ಲಿ ಬೆವರಿಳಿಸುತ್ತಿದ್ದಾರೆ. ಈ ಸಮಯದಲ್ಲೇ ಈ ಇಬ್ಬರು ಆಟಗಾರರಿಗೆ ಐಪಿಎಲ್ ಫ್ರಾಂಚೈಸಿಯಿಂದ ಭರ್ಜರಿ ಆಫರ್ವೊಂದು ಒಲಿದುಬಂದಿದೆ.
ಇತರೆ ಫಾರ್ಮೆಟ್ಗಳಿಗಿಂತ ಟಿ20 ಲೀಗ್‌ಗಳು ಪ್ರಪಂಚದಾದ್ಯಂತ ವ್ಯಾಪಕ ಗಮನ ಸೆಳೆದಿವೆ. ಕ್ರಿಕೆಟ್ ಪ್ರಿಯರು ಸಹ ಇಂತಹ ಲೀಗ್ಗಳನ್ನು ಹೆಚ್ಚು ಆನಂದಿಸುತ್ತಾರೆ. ಅದರಲ್ಲೂ ಐಪಿಎಲ್ ಫ್ರಾಂಚೈಸಿಗಳ ಪರ ಆಡುವ ವಿದೇಶಿ ಕ್ರಿಕೆಟಿಗರು, ತಮ್ಮ ರಾಷ್ಟ್ರೀಯ ತಂಡಕ್ಕಿಂತ ಹೆಚ್ಚಿನ ಆದಾಯವನ್ನು ಇಲ್ಲಿ ನೋಡುತ್ತಾರೆ. ಕೇವಲ ಹಣ ಮಾತ್ರವಲ್ಲದೇ ಭಾರೀ ಜನಪ್ರಿಯತೆಯನ್ನು ಗಳಿಸುತ್ತಾರೆ. ಈ ಪ್ರಕ್ರಿಯೆಯಲ್ಲಿ, ಒಂದಷ್ಟು ಆಟಗಾರರು ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ವರ್ಷಕ್ಕೊಮ್ಮೆ ಬರುವ ಇಂತಹ ಟಿ20 ಲೀಗ್ಗಳಲ್ಲಿ ಆಡುತ್ತಾರೆ. ನಿಕೋಲಸ್ ಪೂರನ್, ಹೆನ್ರಿಕ್ ಕ್ಲಾಸೆನ್‌ರಂತಹ ಆಟಗಾರರು ಈ ವರ್ಗಕ್ಕೆ ಸೇರಿರುವುದು ಗಮನಾರ್ಹ.
ಇದೆಲ್ಲದರ ಮಧ್ಯೆ ಜಾಲತಾಣದಲ್ಲಿ ಒಂದು ಸುದ್ದಿ ನೆಟ್ಟಿಗರ ಹುಬ್ಬೇರಿಸಿದ್ದು, ಆಸ್ಟ್ರೇಲಿಯಾ ಕ್ಯಾಪ್ಟನ್ ಪ್ಯಾಟ್ ಕಮ್ಮಿನ್ಸ್ ಮತ್ತು ಸ್ಟಾರ್ ಓಪನರ್ ಟ್ರಾವಿಸ್ ಹೆಡ್‌ಗೆ ಬರೋಬ್ಬರಿ 58 ಕೋಟಿ ರೂ. ಕೊಡುತ್ತೇವೆ. ನಿಮ್ಮ ಅಂತಾರಾಷ್ಟ್ರೀಯ ತಂಡಕ್ಕೆ ಗುಡ್ಬೈ ಹೇಳಿ ಬನ್ನಿ ಎಂದು ಐಪಿಎಲ್ ಫ್ರಾಂಚೈಸಿ ಬಂಪರ್ ಆಫರ್ ನೀಡಿದ್ದಾಗಿ ವರದಿಯಾಗಿದೆ. ಇಬ್ಬರಿಗೂ ತಲಾ 10 ಮಿಲಿಯನ್ ಅಂದರೆ 58 ಕೋಟಿ ರೂ. ನೀಡುವುದಾಗಿ ಫ್ರಾಂಚೈಸಿ ಹೇಳಿಕೊಂಡಿದೆ. ಈ ಆಫರ್ ನೀಡಿರುವ ಫ್ರಾಂಚೈಸಿ, ಹೆಡ್ ಮತ್ತು ಕಮ್ಮಿನ್ಸ್ ಇಬ್ಬರು ಪ್ರಸ್ತುತ ಪ್ರತಿನಿಧಿಸುತ್ತಿರುವ ತಮ್ಮ ಆಸ್ಟ್ರೇಲಿಯಾ ತಂಡಕ್ಕೆ ವಿದಾಯ ಹೇಳಬೇಕು ಎಂಬ ಷರತ್ತು ವಿಧಿಸಿದೆ. ಆದಾಗ್ಯೂ, ಕಮ್ಮಿನ್ಸ್ ಅಥವಾ ಹೆಡ್ ಈ ಬಗ್ಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯಿಸಿಲ್ಲ ಮತ್ತು ನಿರ್ಧಾರ ತೆಗೆದುಕೊಂಡಿಲ್ಲ ಎಂದು ವರದಿಗಳು ತಿಳಿಸಿವೆ.
ಪ್ರಸ್ತುತ ಕಮ್ಮಿನ್ಸ್, ಕ್ರಿಕೆಟ್ ಆಸ್ಟ್ರೇಲಿಯಾ ಕೇಂದ್ರ ಒಪ್ಪಂದದಲ್ಲಿದ್ದಾರೆ. ಈ ಒಪ್ಪಂದದಡಿಯಲ್ಲಿ, ಅವರು ವರ್ಷಕ್ಕೆ 8.74 ಕೋಟಿ ರೂ. ಗಳಿಸುತ್ತಾರೆ. ಪಂದ್ಯ ಶುಲ್ಕ ಮತ್ತು ಉಳಿದಂತೆ, ಅವರು ಕ್ರಿಕೆಟ್ ಆಸ್ಟ್ರೇಲಿಯಾದಿಂದ ವರ್ಷಕ್ಕೆ ಒಟ್ಟು 17.50 ಕೋಟಿ ರೂ. ಪಡೆಯುತ್ತಾರೆ. ಇನ್ನು ಐಪಿಎಲ್‌ನಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಕಮ್ಮಿನ್ಸ್ರನ್ನು 18 ಕೋಟಿ ರೂ.ಗೆ ತಂಡದಲ್ಲೇ ಉಳಿಸಿಕೊಂಡಿದೆ. ಒಟ್ಟಾರೆ ನೋಡುವುದಾದರೆ, ಕಮ್ಮಿನ್ಸ್ ವರ್ಷಕ್ಕೆ 35ರಿಂದ 40 ಕೋಟಿ ರೂ. ಆದಾಯ ಗಳಿಸುತ್ತಾರೆ.
ಆಸೀಸ್ ಪರ ಸ್ಫೋಟಕ ಆರಂಭಿಕ ಬ್ಯಾಟರ್ ಟ್ರಾವಿಸ್ ಹೆಡ್ ಕೇಂದ್ರ ಒಪ್ಪಂದದ ಮೂಲಕ 8.70 ಕೋಟಿ ರೂ. ಪಡೆಯುತ್ತಾರೆ. ಸನ್‌ರೈಸರ್ಸ್ ಫ್ರಾಂಚೈಸಿ ಅವರನ್ನು ಐಪಿಎಲ್‌ನಲ್ಲಿ 14 ಕೋಟಿ ರೂ.ಗೆ ಉಳಿಸಿಕೊಂಡಿದೆ. ಒಟ್ಟಾರೆಯಾಗಿ, ಹೆಡ್ ವರ್ಷಕ್ಕೆ 25ರಿಂದ 30 ಕೋಟಿ ರೂ. ಸ್ವೀಕರಿಸುತ್ತಾರೆ. ಹೀಗಿರುವಾಗ ಐಪಿಎಲ್ ಫ್ರಾಂಚೈಸಿಯೊಂದು 58 ಕೋಟಿ ರೂ. ಆಫರ್ ನೀಡಿರುವುದು ನಿಜಕ್ಕೂ ದೊಡ್ಡ ಮೊತ್ತವೇ ಸರಿ. ಆದರೆ, ಈ ಬಗ್ಗೆ ಸ್ಟಾರ್ ಆಟಗಾರರ ನಿರ್ಧಾರ ಅಥವಾ ಪ್ರತಿಕ್ರಿಯೆ ಏನಿರಲಿದೆ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).