

ನವದೆಹಲಿ: ಐಪಿಎಲ್ ಟೂರ್ನಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿದ್ದಾರೆ. ಹೀಗಾಗಿ ವಿದೇಶಿ ಆಟಗಾರರಿಲ್ಲದೆ ಐಪಿಎಲ್ ನಡೆಸಲಾಗದು ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಸಹ-ಮಾಲೀಕ ನೆಸ್ ವಾಡಿಯಾ ಹೇಳಿದ್ದಾರೆ. ಕರೊನಾ ಹಾವಳಿಯಿಂದಾಗಿ ಟೂರ್ನಿಯ ಭವಿಷ್ಯವನ್ನು ಇಷ್ಟು ಬೇಗ ನಿರ್ಧರಿಸುವುದು ಕೂಡ ಬಿಸಿಸಿಐಗೆ ಸಾಧ್ಯವಾಗದು ಎಂದವರು ಅಭಿಪ್ರಾಯಪಟ್ಟಿದ್ದಾರೆ.
‘ಭಾರತೀಯರು ರೂಪಿಸಿರುವ ಅಂತಾರಾಷ್ಟ್ರೀಯ ಟೂರ್ನಿ ಐಪಿಎಲ್. ಇದು ವಿಶ್ವದ ಪ್ರಮುಖ ಕ್ರಿಕೆಟ್ ಟೂರ್ನಿಯಾಗಿದೆ. ಹೀಗಾಗಿ ಇದಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟಿಗರು ಅಗತ್ಯ. ಆದರೆ ಅವರ ಪ್ರಯಾಣಕ್ಕೆ ಅವಕಾಶ ದೊರೆಯುವುದೇ ಎಂಬುದನ್ನು ಕಾದು ನೋಡಬೇಕಾಗಿದೆ’ ಎಂದು ನೆಸ್ ವಾಡಿಯಾ ಹೇಳಿದ್ದಾರೆ. ಇದಕ್ಕೆ ಮುನ್ನ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ, ಭಾರತೀಯರನ್ನು ಮಾತ್ರ ಒಳಗೊಂಡ ಐಪಿಎಲ್ನಲ್ಲಿ ಆಡಲು ಸಿದ್ಧ ಎಂದಿತ್ತು. ಆದರೆ 3 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ಕಿಂಗ್ಸ್ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು.
‘ಹಾಲಿ ಪರಿಸ್ಥಿತಿಯಲ್ಲಿ ಕೋವಿಡ್-19 ಹೊರತಾಗಿ ಬೇರೆನನ್ನೂ ಚಿಂತಿಸಲು ಸಾಧ್ಯವಿಲ್ಲ. ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತ ಸಾಗಿದರೆ ಏನು ಮಾಡುವುದು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಜುಲೈ-ಆಗಸ್ಟ್ನಲ್ಲಿ ಭಾರತದಲ್ಲಿ ಕರೊನಾ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಪ್ರಕರಣಗಳ ಸಂಖ್ಯೆ ಕಡಿಮೆಯಾದ ಬಳಿಕವಷ್ಟೇ ಐಪಿಎಲ್ ದಿನಾಂಕ ನಿರ್ಧರಿಸಲು ಸಾಧ್ಯ’ ಎಂದು ವಾಡಿಯಾ ಹೇಳಿದ್ದಾರೆ. ಬಾಲಿವುಡ್ ನಟಿ ಪ್ರೀತಿ ಝಿಂಟಾ ಕೂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸಹ-ಮಾಲೀಕರಾಗಿದ್ದಾರೆ. ಕನ್ನಡಿಗ ಅನಿಲ್ ಕುಂಬ್ಳೆ ತಂಡಕ್ಕೆ ಕೋಚ್ ಆಗಿದ್ದರೆ, ಕೆಎಲ್ ರಾಹುಲ್ ನಾಯಕರಾಗಿದ್ದಾರೆ.
‘ಹಾಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬಂದ ಬಳಿಕ ಭಾರತೀಯ ಕ್ರಿಕೆಟ್ ಪ್ರೇಮಿಗಳು ಖಂಡಿತವಾಗಿಯೂ ಐಪಿಎಲ್ ನೋಡಲು ತುದಿಗಾಲಲ್ಲಿ ನಿಂತಿರುತ್ತಾರೆ. ಜರ್ಮನಿಯಲ್ಲಿ ಈಗಾಗಲೆ ಫುಟ್ಬಾಲ್ ಆರಂಭಗೊಂಡಿದ್ದರೆ, ಇಂಗ್ಲೆಂಡ್ನಲ್ಲಿ ಇಪಿಎಲ್ ಶೀಘ್ರದಲ್ಲೇ ಶುರುವಾಗಲಿದೆ. ಆದರೆ ಅವರೆಲ್ಲರೂ ಈಗಾಗಲೆ ಕರೊನಾ ಪ್ರಕರಣಗಳ ಉತ್ತುಂಗವನ್ನು ನೋಡಿದ್ದಾರೆ. ನಮ್ಮಲ್ಲಿ ಇನ್ನೂ ಅದು ಬಂದಿಲ್ಲ. ಐಪಿಎಲ್ ನಡೆಯಬೇಕೆಂಬುದು ನಮ್ಮಾಸೆ. ಆದರೆ ಅದು ಸಾಧ್ಯವಾಗಬೇಕಾದರೆ ಮುಂದಿನ 2 ತಿಂಗಳಲ್ಲಿ ಕರೊನಾ ಸಂಪೂರ್ಣ ನಿಯಂತ್ರಣಕ್ಕೆ ಬರಬೇಕಾಗಿದೆ’ ಎಂದು ಹೇಳಿದ್ದಾರೆ. ಈ ವರ್ಷ ಐಪಿಎಲ್ ಟೂರ್ನಿ ನಡೆಯದಿದ್ದರೆ ಬಿಸಿಸಿಐ ಸುಮಾರು 4 ಸಾವಿರ ಕೋಟಿ ರೂ. ನಷ್ಟ ಅನುಭವಿಸಲಿದೆ.