More

    ಬಲಗೈ ಕ್ರಿಕೆಟಿಗ ಗಂಗೂಲಿ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು ಹೇಗೆ ಗೊತ್ತೇ?

    ಕೋಲ್ಕತ: ಈಗ ಬಿಸಿಸಿಐ ಚುಕ್ಕಾಣಿ ಹಿಡಿದಿರುವ ಸೌರವ್ ಗಂಗೂಲಿ ಟೀಮ್ ಇಂಡಿಯಾ ನಾಯಕರಾಗಿಯೂ ಸಾಕಷ್ಟು ಯಶಸ್ಸು ಕಂಡವರು. ಇವೆರಡರ ಜತೆಗೆ ಅವರು ವಿಶ್ವದ ಅತ್ಯುತ್ತಮ ಎಡಗೈ ಬ್ಯಾಟ್ಸ್‌ಮನ್‌ಗಳ ಪೈಕಿ ಒಬ್ಬರು. ಸಹ-ಆಟಗಾರ ರಾಹುಲ್ ದ್ರಾವಿಡ್‌ರಿಂದ ‘ಆಫ್​ಸೈಡ್​‌ನ ದೇವರು’ ಎಂದೇ ಹೊಗಳಿಕೆ ಪಡೆದುಕೊಂಡಿದ್ದ ದಾದಾ, ಕ್ರೀಸ್‌ನಿಂದ ಮುನ್ನುಗ್ಗಿ ಬಂದು ಸಿಕ್ಸರ್ ಬಾರಿಸುವ ಶೈಲಿಯೂ ಅವರ ಅಭಿಮಾನಿಗಳಿಗೆ ಪ್ರೀತಿಪಾತ್ರ. ಭಾರತದ ಪರ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಎಡಗೈ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ. ಆದರೆ ಗಂಗೂಲಿ ಮೂಲತಃ ಬಲಗೈ ಆಟಗಾರ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಅವರು ಎಡಗೈ ಬ್ಯಾಟ್ಸ್‌ಮನ್ ಆಗಿ ರೂಪುಗೊಂಡ ಹಿಂದೆ ಒಂದು ಕುತೂಹಲಕಾರಿ ಕಥೆಯಿದೆ.

    ಇದನ್ನೂ ಓದಿ:  ಕರೊನಾ ವಾರಿಯರ್ಸ್‌ಗೆ ಕೆಎಲ್ ರಾಹುಲ್ ಕೊಟ್ಟ ಉಡುಗೊರೆ ಏನು ?

    ಬಾಲ್ಯದಲ್ಲಿ ಗಂಗೂಲಿ ಬಲಗೈ ಬ್ಯಾಟ್ಸ್‌ಮನ್ ಆಗಿಯೇ ಕ್ರಿಕೆಟ್ ಆಡಲಾರಂಭಿಸಿದ್ದರು. ಆದರೆ ಬಂಗಾಳ ಕ್ರಿಕೆಟ್ ಸಂಸ್ಥೆಯೊಮ್ಮೆ ಆಯ್ಕೆ ಟ್ರಯಲ್ಸ್‌ಗೆ ಕರೆದಾಗ ಗಂಗೂಲಿಗೆ ಅದರಲ್ಲಿ ಪಾಲ್ಗೊಳ್ಳಲು ಕಿಟ್ ಇರಲಿಲ್ಲವಂತೆ. ಆಗ ಅವರು ಅಣ್ಣ ಸ್ನೇಹಾಶಿಶ್‌ರ ಕಿಟ್ ಬಳಸಬೇಕಾಯಿತು. ಸ್ನೇಹಾಶಿಶ್ ಎಡಗೈ ಆಟಗಾರರಾಗಿದ್ದರು. ಹೀಗಾಗಿ ಅವರ ಎಡಗೈ ಕಿಟ್‌ಗೆ ಹೊಂದಿಕೊಳ್ಳುವ ಸಲುವಾಗಿ ಗಂಗೂಲಿ ಎಡಗೈ ಬ್ಯಾಟ್ಸ್‌ಮನ್ ಆಗಿ ಬದಲಾಗಿದ್ದರು. ಲಾಕ್‌ಡೌನ್ ವೇಳೆ ‘ಅನ್‌ಅಕಾಡೆಮಿ’ ಆ್ಯಪ್‌ನ ಲೈವ್ ಕ್ಲಾಸ್‌ನಲ್ಲಿ ಮಕ್ಕಳೊಂದಿಗೆ ಮಾತನಾಡುತ್ತ ಗಂಗೂಲಿ ಈ ವಿವರಗಳನ್ನು ಬಿಚ್ಚಿಟ್ಟಿದ್ದಾರೆ. ಸಚಿನ್ ತೆಂಡುಲ್ಕರ್ ಎಡಚರಾಗಿದ್ದರೂ, ಬಲಗೈ ಬ್ಯಾಟ್ಸ್‌ಮನ್ ಆಗಿದ್ದಾರೆ. ಸಚಿನ್ ಎಡಗೈನಲ್ಲೇ ಬರೆಯುತ್ತಾರೆ. ಅದೇ ಗಂಗೂಲಿ ಬಲಗೈನಲ್ಲಿ ಬರೆಯುತ್ತಾರೆ. ಆದರೆ ಎಡಗೈ ಬ್ಯಾಟಿಂಗ್ ಮಾಡುತ್ತಾರೆ ಎಂಬುದು ವಿಶೇಷ.

    ಬಲಗೈ ಕ್ರಿಕೆಟಿಗ ಗಂಗೂಲಿ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು ಹೇಗೆ ಗೊತ್ತೇ?
    ಫುಟ್‌ಬಾಲ್‌ನಿಂದ ಕ್ರಿಕೆಟ್‌ನತ್ತ
    ಭಾರತದ ಫುಟ್‌ಬಾಲ್ ರಾಜಧಾನಿ ಎಂದೇ ಕರೆಯಲ್ಪಡುವ ಕೋಲ್ಕತ ನಗರದ ಎಲ್ಲರಂತೆ ಗಂಗೂಲಿ ಕೂಡ ಮೂಲತಃ ಫುಟ್‌ಬಾಲ್ ಪ್ರಿಯರು. ಅವರ ಬಾಲ್ಯದ ಮೊದಲ ಆಸಕ್ತಿಯ ಆಟವೂ ಫುಟ್‌ಬಾಲ್ ಆಗಿತ್ತು. ಆದರೆ ಫುಟ್‌ಬಾಲ್ ಆಟದ ವೇಳೆ ಅವರು ಹೆಚ್ಚು ಗಾಯಗಳನ್ನು ಮಾಡಿಕೊಳ್ಳುತ್ತಿದ್ದ ಕಾರಣ ಅವರ ತಂದೆ ಚಂಡಿ ಗಂಗೂಲಿ ಕ್ರಿಕೆಟ್ ಶಿಬಿರಕ್ಕೆ ಕರೆದುಕೊಂಡು ಹೋಗಿ ಸೇರಿಸಿದ್ದರಂತೆ. ಬಳಿಕ ಕ್ರಿಕೆಟ್ ಅವರ ನೆಚ್ಚಿನ ಆಟವಾಯಿತು.

    ಇದನ್ನೂ ಓದಿ: ವಿಶ್ವಕಪ್​ ಫೈನಲ್​​ ಸೋತರೂ ನಿರಾಶೆಗೊಳ್ಳದೇ ನಗು ಬೀರಿದ್ದರ ಬಗ್ಗೆ ಕೊನೆಗೂ ಮಾತನಾಡಿದ ಸಂಗಕ್ಕರ!

    ‘ಫುಟ್‌ಬಾಲ್ ನನ್ನ ಜೀವ. 9ನೇ ತರಗತಿಯವರೆಗೆ ನಾನು ಅತ್ಯುತ್ತಮ ಫುಟ್‌ಬಾಲ್ ಆಟಗಾರನಾಗಿದ್ದೆ. ಆದರೆ ಆ ಬೇಸಗೆ ರಜೆಯಲ್ಲಿ ನನ್ನ ತಂದೆ ಕರೆದುಕೊಂಡು ಹೋಗಿ ಕ್ರಿಕೆಟ್ ಅಕಾಡೆಮಿಗೆ ಸೇರಿಸಿದರು. ಅತ್ಯಂತ ಶಿಸ್ತುಬದ್ಧರಾಗಿದ್ದ ಪಾಲಕರು, ಅಣ್ಣ ಮತ್ತು ಕುಟುಂಬದಿಂದ ದೂರವಿರಬಹುದೆಂದು ನಾನು ಅದನ್ನು ಒಪ್ಪಿಕೊಂಡಿದ್ದೆ. ಆದರೆ ಅಲ್ಲಿ ಕೋಚ್ ನನ್ನಲ್ಲಿ ಏನು ನೋಡಿದರೆಂದು ಗೊತ್ತಿಲ್ಲ. ಅವರು ಫುಟ್‌ಬಾಲ್ ಬಿಟ್ಟು ಸಂಪೂರ್ಣ ಕ್ರಿಕೆಟ್‌ನತ್ತ ಆಸಕ್ತಿ ವಹಿಸಲು ಸೂಚಿಸುವಂತೆ ನನ್ನ ಅಣ್ಣನಿಗೆ ಹೇಳಿದ್ದರು’ ಎಂದು ಗಂಗೂಲಿ ವಿವರಿಸಿದ್ದಾರೆ.

    ಇದನ್ನೂ ಓದಿ: ವಿಶ್ವದ ಶ್ರೀಮಂತ ಕ್ರೀಡಾಪಟುಗಳಲ್ಲಿ ಏಕೈಕ ಭಾರತೀಯ ಕೊಹ್ಲಿ

    ಲಾರ್ಡ್ಸ್ ಪದಾರ್ಪಣೆ ವಿಶೇಷ
    1996ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದು ವೃತ್ತಿಜೀವನದ ಶ್ರೇಷ್ಠ ಕ್ಷಣ ಎಂದಿರುವ ಗಂಗೂಲಿ, ದುಲೀಪ್ ಟ್ರೋಫಿಯ ಪದಾರ್ಪಣೆ ಪಂದ್ಯದಲ್ಲೇ ಶತಕ ಸಿಡಿಸಿದ್ದರೂ, ರಣಜಿ ಫೈನಲ್‌ನಲ್ಲಿ ಬಂಗಾಳ ಪರ ಪದಾರ್ಪಣೆ ಮಾಡಿದ್ದರೂ, ಲಾರ್ಡ್ಸ್ ಶತಕವೇ ವಿಶೇಷವಾದುದು ಎಂದಿದ್ದಾರೆ. 1983ರಲ್ಲಿ ಕಪಿಲ್ ದೇವ್ ಬಳಗ ವಿಶ್ವಕಪ್ ಜಯಿಸಿದ್ದು ತಮಗೆ ಕ್ರಿಕೆಟಿಗರಾಗಲು ಸ್ಫೂರ್ತಿ ತುಂಬಿದ ಕ್ಷಣವಾಗಿತ್ತು. ನಾನು ಕ್ರಿಕೆಟ್ ಬ್ಯಾಟ್ ಹಿಡಿದಂದಿನಿಂದ ಈ ಆಟ ಸಾಕಷ್ಟು ಬೆಳವಣಿಗೆ ಆಗಿರುವುದನ್ನು ಕಂಡಿರುವೆ ಎಂದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts