ಕರೊನಾ ವಾರಿಯರ್ಸ್‌ಗೆ ಕೆಎಲ್ ರಾಹುಲ್ ಕೊಟ್ಟ ಉಡುಗೊರೆ ಏನು ?

rahul_web
Published on

ಬೆಂಗಳೂರು: ಕರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ಕ್ರಿಕೆಟಿಗ ಕೆಎಲ್ ರಾಹುಲ್ ತಮ್ಮದೇ ರೀತಿಯಲ್ಲಿ ನೆರವು ನೀಡುತ್ತಾ ಬಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಕರೊನಾ ವೈರಸ್ ಕುರಿತು ಜಾಗೃತಿ ಮೂಡಿಸುತ್ತಿದ್ದ ರಾಹುಲ್, ಮನೆಯಲ್ಲೇ ಸುರಕ್ಷಿತವಾಗಿರುವಂತೆ ಎಲ್ಲರಲ್ಲೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಕರ್ನಾಟಕದ ಕ್ರಿಕೆಟಿಗ ಇದೀಗ ಕರೊನಾ ವಿರುದ್ಧ ಸತತವಾಗಿರುವ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ (ಕರೊನಾ ವಾರಿಯರ್ಸ್‌) ಪೂಮಾ ಶೂ ನೀಡುವ ಮೂಲಕ ಮತ್ತಷ್ಟು ಉತ್ತೇಜನ ನೀಡಿದ್ದಾರೆ.

ಕಳೆದ ಎರಡೂವರೆ ತಿಂಗಳಿಂದ ಇಡೀ ದೇಶವನ್ನೇ ಕಾಡುತ್ತಿರುವ ಕರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಸಾವಿರಾರು ಸಂಖ್ಯೆಯ ವೈದ್ಯಕೀಯ ಸಿಬ್ಬಂದಿ ಟೊಂಕಕಟ್ಟಿ ನಿಂತಿದ್ದಾರೆ. ಹಗಲು-ರಾತ್ರಿ ಎನ್ನದೇ ದುಡಿಯುತ್ತಿರುವ ವೈದ್ಯಕೀಯ ಕ್ಷೇತ್ರದ ಮಂದಿಗೆ ಎಲ್ಲೆಡೆ ಮೆಚ್ಚುಗೆಯ ಮಾತುಗಳಿಗೂ ಕಮ್ಮಿಯಿಲ್ಲ. ಅವರ ಸೇವೆಯನ್ನು ಸ್ಮರಿಸಿಕೊಂಡಿರುವ ಕ್ರಿಕೆಟಿಗ ರಾಹುಲ್, ಬೆಂಗಳೂರಿನಲ್ಲಿ ಕೊರನಾ ವೈರಸ್ ವಿರುದ್ಧದ ಹೋರಾಟಕ್ಕೆ ನಿರತ ವಾರಿಯರ್ಸ್‌ಗೆ ಪೂಮಾ ಬ್ರ್ಯಾಂಡ್‌ನ ಶೂ ನೀಡಿದ್ದಾರೆ. ದೇಶಕ್ಕಾಗಿ ನೀವು ಕಠಿಣ ಹೋರಾಟ ಮಾಡುತ್ತಿದ್ದೀರಿ, ಇದು ನನ್ನ ಕಡೆಯಿಂದ ಸಣ್ಣ ಉಡುಗೊರೆಯಷ್ಟೇ. ಇದೇ ರೀತಿ ಹೋರಾಟ ಮುಂದುವರಿಸಿ’ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.

ಕೆಎಲ್ ರಾಹುಲ್ ಇದಕ್ಕೂ ಮೊದಲು ಕ್ರಿಕೆಟ್ ಬ್ಯಾಟ್ ಸೇರಿದಂತೆ ಕೆಲವೊಂದು ಕ್ರಿಕೆಟ್ ಪರಿಕರಗಳನ್ನು ಧಾನವಾಗಿ ನೀಡಿದ್ದರು. ನನ್ನ ನಿರ್ಧಾರಕ್ಕೆ ಸಹಕರಿಸಿದ ಪೂಮಾಗೆ ಧನ್ಯವಾದಗಳು ಎಂದು ರಾಹುಲ್ ಹೇಳಿದ್ದಾರೆ. ಪೂಮಾ ಪರಿಕರಗಳ ಬ್ರ್ಯಾಂಡ್‌ಗೆ ರಾಯಭಾರಿಯೂ ಆಗಿದ್ದಾರೆ. ರಾಹುಲ್ ಹಾಗೂ ಪೂಮಾ ಕಂಪನಿ ಪ್ರೋತ್ಸಾಹದಿಂದ ನಮಗೆ ಮತ್ತಷ್ಟು ಉತ್ತೇಜನ ದಕ್ಕಿದಂತಾಗಿದೆ. ಅವರಿಗೆ ಧನ್ಯವಾದಗಳು ಎಂದು ಶಿವಾಜಿನಗರದ ಲೇಡಿ ಕರ್ಜನ್ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net