ಆಟಗಾರರ ರಿಟೇನ್​ ಪಟ್ಟಿ ಅಂತಿಮಗೊಳಿಸಲು ಗಡುವು ನಿಗದಿ; ಡಿಸೆಂಬರ್​ 15ಕ್ಕೆ ಐಪಿಎಲ್​ ಮಿನಿ ಹರಾಜು?

web Ipl
Published on

ನವದೆಹಲಿ: ಮುಂದಿನ ವರ್ಷದ ಐಪಿಎಲ್​ 19ನೇ ಆವೃತ್ತಿಗೆ ಪೂರ್ವಭಾವಿಯಾಗಿ ಡಿಸೆಂಬರ್​ ಎರಡು ಅಥವಾ ಮೂರನೇ ವಾರದಲ್ಲಿ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಡಿಸೆಂಬರ್​ 13ರಿಂದ 15ರ ನಡುವೆ ಹರಾಜು ನಿಗದಿಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಐಪಿಎಲ್​ ಆಡಳಿತ ಮಂಡಳಿ ಹರಾಜು ಪ್ರಕ್ರಿಯೆಯ ದಿನವನ್ನು ಇನ್ನೂ ಅಂತಿಮಗೊಳಿಸಿಲ್ಲ. ಅದರ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿವೆ. ಆದರೆ ಈ ಬಾರಿ ಹರಾಜು ಪ್ರಕ್ರಿಯೆಯನ್ನು ಭಾರತದಲ್ಲೇ ಆಯೋಜಿಸುವ ಸೂಚನೆಗಳು ಹೆಚ್ಚಿವೆ. ಕಳೆದ ಎರಡು ವರ್ಷಗಳಲ್ಲಿ ವಿದೇಶಿ ನೆಲದಲ್ಲಿ ಹರಾಜು ಪ್ರಕ್ರಿಯೆಗಳನ್ನು ನಡೆಸಲಾಗಿತ್ತು. 2023ರಲ್ಲಿ ಯುಎಇಯ ದುಬೈನಲ್ಲಿ ಮತ್ತು 2024ರಲ್ಲಿ ಸೌದಿ ಅರೇಬಿಯದ ಜಿದ್ದಾದಲ್ಲಿ ಹರಾಜು ಪ್ರಕ್ರಿಯೆ ಆಯೋಜಿಸಲಾಗಿತ್ತು. ಈ ಬಾರಿ ಭಾರತದಲ್ಲೇ ಹರಾಜು ಪ್ರಕ್ರಿಯೆಯನ್ನು ನಡೆಸಲು ಫ್ರಾಂಚೈಸಿಗಳೂ ಸಹಮತ ವ್ಯಕ್ತಪಡಿಸಿವೆ ಎನ್ನಲಾಗಿದೆ.

ಎಲ್ಲ 10 ತಂಡಗಳು ಆಟಗಾರರ ರಿಟೇನ್​ ಪಟ್ಟಿಯನ್ನು ಸಲ್ಲಿಸಲು ನವೆಂಬರ್​ 15ರ ಗಡುವನ್ನು ಬಿಸಿಸಿಐ ನಿಗದಿಪಡಿಸಿದೆ. ಯಾವೆಲ್ಲ ಆಟಗಾರರನ್ನು ರಿಲೀಸ್​ ಮಾಡಲಾಗುವುದು ಎಂದು ಫ್ರಾಂಚೈಸಿಗಳು ವಿವರಣೆ ಸಲ್ಲಿಸಬೇಕು.

ಕಳೆದ ಆವೃತ್ತಿಯಲ್ಲಿ ಕೊನೇ 2 ಸ್ಥಾನಗಳನ್ನು ಪಡೆದ ಚೆನ್ನೈ ಸೂಪರ್​ಕಿಂಗ್ಸ್​ ಮತ್ತು ರಾಜಸ್ಥಾನ ರಾಯಲ್ಸ್​ ತಂಡಗಳು ಈಗಾಗಲೆ ಬಿಡುಗಡೆ ಮಾಡುವ ಆಟಗಾರರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿವೆ ಎನ್ನಲಾಗಿದೆ. ಸಿಎಸ್​ಕೆ ತಂಡ ದೀಪಕ್​ ಹೂಡಾ, ವಿಜಯ್​ ಶಂಕರ್​, ರಾಹುಲ್​ ತ್ರಿಪಾಠಿ, ಸ್ಯಾಮ್​ ಕರನ್​ ಮತ್ತು ಡೆವೋನ್​ ಕಾನ್​ವೇ ಅವರನ್ನು ರಿಲೀಸ್​ ಮಾಡಲು ಈಗಾಗಲೆ ನಿರ್ಧರಿಸಿವೆ ಎನ್ನಲಾಗಿದೆ. ಅನುಭವಿ ಸ್ಪಿನ್ನರ್​ ಆರ್​. ಅಶ್ವಿನ್​ ಐಪಿಎಲ್​ನಿಂದ ನಿವೃತ್ತಿ ಹೊಂದಿರುವುದರಿಂದ ಸಿಎಸ್​ಕೆ ತಂಡ ಅವರ ಸಂಭಾವನೆಯ 9.75 ಕೋಟಿ ರೂ. ಅನ್ನು ಹರಾಜಿನಲ್ಲಿ ಬಳಸಿಕೊಳ್ಳುವ ಅನುಕೂಲವನ್ನೂ ಹೊಂದಿದೆ.

ರಾಜಸ್ಥಾನ ರಾಯಲ್ಸ್​ ತಂಡ ಸಂಜು ಸ್ಯಾಮ್ಸನ್​ರನ್ನು ರಿಲೀಸ್​ ಮಾಡುವುದು ಅಥವಾ ಅದಕ್ಕೆ ಮೊದಲೇ ಬೇರೆ ತಂಡಕ್ಕೆ ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಜತೆಗೆ ಶ್ರೀಲಂಕಾದ ಸ್ಪಿನ್ನರ್​ಗಳಾದ ವಾನಿಂದು ಹಸರಂಗ ಮತ್ತು ಮಹೀಶ್​ ತೀಕ್ಷಣರನ್ನೂ ಬಿಡುಗಡೆ ಮಾಡಲು ಬಯಸಿದೆ. ಆದರೆ ಅದಕ್ಕೆ ಮುನ್ನ ಶ್ರೀಲಂಕಾದ ಮಾಜಿ ನಾಯಕ ಕುಮಾರ ಸಂಗಕ್ಕರ ತಂಡದ ಮುಖ್ಯ ಕೋಚ್​ ಆಗಿ ಮರಳಿದರೆ ಆಗ ಯೋಜನೆ ಬದಲಾಗಬಹುದು ಎನ್ನಲಾಗುತ್ತಿದೆ.

ಹಾಲಿ ಚಾಂಪಿಯನ್​ ಆರ್​ಸಿಬಿ ತಂಡ ಇಂಗ್ಲೆಂಡ್​ ಆಲ್ರೌಂಡರ್​ ಲಿಯಾಮ್​ ಲಿವಿಂಗ್​ಸ್ಟೋನ್​ (8.75 ಕೋಟಿ ರೂ.), ರಸಿಕ್​ ಸಲಾಂ ದಾರ್​ (6 ಕೋಟಿ ರೂ.), ಟಿಮ್​ ಸೀರ್ಟ್​ (2 ಕೋಟಿ ರೂ.), ನುವಾನ್​ ತುಷಾರ (1.60 ಕೋಟಿ ರೂ.), ಸ್ವಪ್ನಿಲ್​ ಸಿಂಗ್​ (50 ಲಕ್ಷ ರೂ.), ಲುಂಗಿ ಎನ್​ಗಿಡಿ (1 ಕೋಟಿ ರೂ.), ಮೋಹಿತ್​ ರಾಥಿ (30 ಲಕ್ಷ ರೂ.) ಮತ್ತು ಅಭಿನಂದನ್​ ಸಿಂಗ್​ರನ್ನು (30 ಲಕ್ಷ ರೂ.) ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಸ್ಟಾರ್ಕ್​, ವೆಂಕಿ ರಿಲೀಸ್​?

ಐಪಿಎಲ್​ನ ಕೆಲ ಪ್ರಮುಖ ಆಟಗಾರರಾದ ಮಿಚೆಲ್​ ಸ್ಟಾರ್ಕ್​, ಟಿ. ನಟರಾಜನ್​ (ಡೆಲ್ಲಿ), ವೇಗಿ ಮಯಾಂಕ್​ ಯಾದವ್​, ಡೇವಿಡ್​ ಮಿಲ್ಲರ್​ (ಲಖನೌ) ಹೊಸ ತಂಡಗಳಿಗೆ ಹೋಗಲು ಬಯಸಿದ್ದಾರೆ ಎನ್ನಲಾಗಿದೆ. ಇನ್ನು, ಕೆಕೆಆರ್​ ತಂಡ ಕಳೆದ ಹರಾಜಿನಲ್ಲಿ ಬರೋಬ್ಬರಿ 23.75 ಕೋಟಿ ರೂ.ಗೆ ಮರಳಿ ಪಡೆದುಕೊಂಡ ಆಲ್ರೌಂಡರ್​ ವೆಂಕಟೇಶ್​ ಅಯ್ಯರ್​ರನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ. ವೆಂಕಿ ಟೂರ್ನಿ ಇತಿಹಾಸದ 3ನೇ ಗರಿಷ್ಠ ಮೊತ್ತಕ್ಕೆ ಬಿಕರಿಯಾಗಿದ್ದರು. ಆದರೆ ಸಮರ್ಥ ನಿರ್ವಹಣೆ ತೋರದೆ ನಿರಾಸೆ ಮೂಡಿಸಿದ್ದರು. ಇನ್ನು ಗಾಯದ ಸಮಸ್ಯೆಯಿಂದಾಗಿ ಕಳೆದ ಐಪಿಎಲ್​ನಿಂದ ಹೊರಗುಳಿದಿದ್ದ ಆಸ್ಟ್ರೆಲಿಯಾದ ಯುವ ಆಲ್ರೌಂಡರ್​ ಕ್ಯಾಮರಾನ್​ ಗ್ರೀನ್​ ಈ ಬಾರಿ ಹರಾಜಿಗೆ ಮರಳಲಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net