

ನವದೆಹಲಿ: ಅಹಮದಾಬಾದ್ನಲ್ಲಿ ನಡೆಯುತ್ತಿರುವ ಏಷ್ಯನ್ ಈಜು ಚಾಂಪಿಯನ್ಷಿಪ್ನ ವಾಟರ್ಪೋಲೊ ಸ್ಪರ್ಧೆಯಲ್ಲಿ ಭಾಗವಹಿಸಿರುವ ಭಾರತ ತಂಡ ವಿವಾದಕ್ಕೀಡಾಗಿದೆ. ತಂಡದ ಆಟಗಾರರು ಸ್ಪರ್ಧೆಯ ವೇಳೆ ಧರಿಸಿರುವ ಒಳಚಡ್ಡಿಯಲ್ಲಿ (ಟ್ರಂಕ್ಸ್) ರಾಷ್ಟ್ರಧ್ವಜವನ್ನು ಮುದ್ರಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇದು ಭಾರತ ತಂಡದ ಸ್ಪರ್ಧೆಯ ಅಧಿಕೃತ ಸಮವಸ್ತ್ರವಾಗಿದೆ. ಆದರೆ ಇದರ ಮೇಲೆ ರಾಷ್ಟ್ರಧ್ವಜ ಮುದ್ರಿಸಿರುವುದು ಅಗೌರವ ಎಂದು ದೂರಲಾಗುತ್ತಿದೆ. ರಾಷ್ಟ್ರಧ್ವಜ ನೀತಿಸಂಹಿತೆಯ ಅನ್ವಯ, ಸೊಂಟದಿಂದ ಕೆಳಗೆ ಧರಿಸುವ ಉಡುಪುಗಳಲ್ಲಿ ರಾಷ್ಟ್ರಧ್ವಜವನ್ನು ಬಳಸುವಂತಿಲ್ಲ. ಹೀಗಾಗಿ ಕ್ರೀಡಾ ಸಚಿವಾಲಯ ಮತ್ತು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಈ ಬಗ್ಗೆ ಭಾರತೀಯ ಈಜು ಒಕ್ಕೂಟದಿಂದ (ಎಸ್ಎಫ್ಐ ) ವರದಿಯನ್ನು ಕೇಳಿದೆ.
ಕೂಟದ ಮುಂದಿನ ಪಂದ್ಯಗಳ ವೇಳೆ ರಾಷ್ಟ್ರಧ್ವಜವನ್ನು ಒಳಚಡ್ಡಿಗೆ ಬದಲಾಗಿ ಶಿರವಸ್ತ್ರದಲ್ಲಿ ಮುಂದಿಸಲಾಗುವುದು. ಕೂಟದಲ್ಲಿ ಭಾಗವಹಿಸಿರುವ ಇತರ ತಂಡಗಳೂ ಟ್ರಂಕ್ಸ್ನಲ್ಲೇ ರಾಷ್ಟ್ರಧ್ವಜ ಮುದ್ರಿಸಿವೆ. ವಿಶ್ವ ಈಜು ಸಂಸ್ಥೆಯ ನಿಯಮ ಪ್ರಕಾರ, ಸಮವಸ್ತ್ರದ ಮೇಲೆ ರಾಷ್ಟ್ರಧ್ವಜ ಇರಬೇಕಾಗುತ್ತದೆ. ಆದರೆ ಈ ವಿಚಾರದಲ್ಲಿ ಭಾರತೀಯರ ಸೂಕ್ಷ$್ಮ ಭಾವನೆಯನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವು ಎಂದೂ ಎಸ್ಎಫ್ಐ ಸ್ಪಷ್ಟಪಡಿಸಿದೆ.