

KKR : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಐಪಿಎಲ್-2025ರ ಉದ್ಘಾಟನಾ ಪಂದ್ಯದಲ್ಲಿ ಸೋಲುಂಡಿದ್ದ ಕೋಲ್ಕತ ನೈಟ್ ರೈಡರ್ಸ್ ತಂಡ, ತನ್ನ ಎರಡನೇ ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಬುಧವಾರ (ಮಾರ್ಚ್ 26) ರಾತ್ರಿ ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೆಕೆಆರ್ ಎಂಟು ವಿಕೆಟ್ಗಳಿಂದ ಗೆಲುವು ಸಾಧಿಸಿತು. ಬ್ಯಾಟ್ಸ್ಮನ್ ಮತ್ತು ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ ನಿಗದಿತ 20 ಓವರ್ಗಳಲ್ಲಿ ಒಂಬತ್ತು ವಿಕೆಟ್ಗಳ ನಷ್ಟಕ್ಕೆ ಕೇವಲ 151 ರನ್ ಗಳಿಸಿತು. ಧ್ರುವ ಜುರೆಲ್ (33) ಆ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ನಂತರ ಬ್ಯಾಟಿಂಗ್ ಮಾಡಿದ ಕೆಕೆಆರ್ 17.3 ಓವರ್ಗಳಲ್ಲಿ ಕೇವಲ ಎರಡು ವಿಕೆಟ್ಗಳ ನಷ್ಟಕ್ಕೆ 153 ರನ್ ಗಳಿಸಿ ಗೆಲುವಿನ ದಡ ಮುಟ್ಟಿತು. ಆರಂಭಿಕ ಆಟಗಾರನಾಗಿ ಕ್ರೀಸ್ಗೆ ಬಂದ ಡಿ ಕಾಕ್ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು 61 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಆರು ಸಿಕ್ಸರ್ಗಳೊಂದಿಗೆ 97 ರನ್ ಗಳಿಸಿ ಅಜೇಯರಾಗಿ ಉಳಿದರು. ಇದರಲ್ಲಿ ಎಂಟು ಬೌಂಡರಿ ಮತ್ತು ಆರು ಸಿಕ್ಸರ್ಗಳು ಸೇರಿವೆ.
ಡಿ ಕಾಕ್ ಬ್ಯಾಟಿಂಗ್ನಲ್ಲಿ ಮಾತ್ರವಲ್ಲದೆ ವಿಕೆಟ್ ಕೀಪಿಂಗ್ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿದರು. ಅವರು ರಾಜಸ್ಥಾನದ ಹಂಗಾಮಿ ನಾಯಕ ರಿಯಾನ್ ಪರಾಗ್ ಅವರನ್ನು ಅದ್ಭುತ ಕ್ಯಾಚ್ ಮೂಲಕ ಪೆವಿಲಿಯನ್ಗೆ ಕಳುಹಿಸಿದರು. ರಾಜಸ್ಥಾನದ ಇನ್ನಿಂಗ್ಸ್ನ 8ನೇ ಓವರ್ ಅನ್ನು ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಬೌಲಿಂಗ್ ಮಾಡಿದರು. ಆ ಓವರ್ನ ಮೂರನೇ ಎಸೆತದಲ್ಲಿ ಪರಾಗ್ ಬೃಹತ್ ಸಿಕ್ಸರ್ ಬಾರಿಸಿದರು. ಅದರ ನಂತರದ ಎಸೆತದಲ್ಲಿ ರಕ್ಷಣಾತ್ಮಕ ಆಟವಾಡಿದರು. ವರುಣ್ ಚಕ್ರವರ್ತಿ ಐದನೇ ಎಸೆತವನ್ನು ಪರಾಗ್ಗೆ ಆಫ್ ಲೆಂಗ್ತ್ ಎಸೆತವಾಗಿ ಎಸೆದರು. ಪರಾಗ್ ಆ ಚೆಂಡಿನಲ್ಲಿ ಮತ್ತೊಂದು ಬೃಹತ್ ಶಾಟ್ ಹೊಡೆಯಲು ಪ್ರಯತ್ನಿಸಿದರು.
ಇಲ್ಲಿ ಪರಾಗ್ ಯೋಚಿಸಿದ್ದೇ ಒಂದು, ಆದರೆ ಆಗಿದ್ದು ಇನ್ನೊಂದು. ಪರಾಗ್ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸಿದಾಗ, ಚೆಂಡು, ಬ್ಯಾಟ್ ಅಂಚಿಗೆ ಬಡಿದು ಗಾಳಿಯಲ್ಲಿ ತುಂಬಾ ಎತ್ತರಕ್ಕೆ ಹೋಯಿತು. ಈ ವೇಳೆ ಡಿ ಕಾಕ್ ತಮ್ಮ ಕೀಪಿಂಗ್ ಕೌಶಲ್ಯವನ್ನು ಪ್ರದರ್ಶಿಸಿದರು. ಚೆಂಡು ಗಾಳಿಯಲ್ಲಿ ಹೋದ ತಕ್ಷಣ, ಅವರು ಕ್ಯಾಚ್ಗೆ ಪ್ರಯತ್ನಿಸಿದರು. ಈ ವೇಳೆ ಚೆಂಡು ಸ್ಪಷ್ಟವಾಗಿ ಕಾಣಲಿ ಅಂತ ತಮ್ಮ ಹೆಲ್ಮೆಟ್ ತೆಗೆದು ಓಡಿಹೋದರು. ಅವರು ಚೆಂಡಿನ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿ ಅದನ್ನು ಹಿಡಿದರು. ಡಿ ಕಾಕ್ ಅವರ ಫೀಲ್ಡಿಂಗ್ ಕುಶಲತೆಯನ್ನು ನೋಡಿ, ಅವರ ತಂಡದ ಸದಸ್ಯರು ಅವರ ಬಳಿಗೆ ಓಡಿ ಬಂದು ಅಭಿನಂದಿಸಿದರು. ಇದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ರಾಜಸ್ಥಾನ ತಂಡದ ಹಂಗಾಮಿ ನಾಯಕ ರಿಯಾನ್ ಪರಾಗ್ ಅಪಾಯಕಾರಿಯಾಗುತ್ತಿದ್ದ ಸಂದರ್ಭದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ಡಿ ಕಾಕ್ ಮಾಡಿದ ಸ್ಮಾರ್ಟ್ ಕೆಲಸವನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. (ಏಜೆನ್ಸೀಸ್)
<blockquote class="twitter-tweet"><p lang="en" dir="ltr">Quinton De Kock removed the helmet first and then went for the catch. Smart. <a href="https://t.co/vgM3V2IeqI">pic.twitter.com/vgM3V2IeqI</a></p>— R A T N I S H (@LoyalSachinFan) <a href="https://twitter.com/LoyalSachinFan/status/1904906749813153803?ref_src=twsrc%5Etfw">March 26, 2025</a></blockquote> <script async src="https://platform.twitter.com/widgets.js" charset="utf-8"></script>