IPL-2025: ಐಪಿಎಲ್​ನಲ್ಲಿ ಹೊಸದೇನಿದೆ? ಈ ಸಲದ ಆವೃತ್ತಿಯ ವಿಶೇಷ-ವೈವಿಧ್ಯ-ವೈಶಿಷ್ಟ್ಯ...

web ipl cap
Published on

ಬೆಂಗಳೂರು: ಚೊಚ್ಚಲ ಆವೃತ್ತಿಯಿಂದಲೂ ಹಲವಾರು ಹೊಸತನ, ವಿಶೇಷತೆಗಳಿಂದ ಗಮನಸೆಳೆದ ಟೂರ್ನಿ ಐಪಿಎಲ್​. ವಿಶ್ವದ ಇತರೆಲ್ಲ ಟಿ20 ಲೀಗ್​ಗಳಿಂದಲೂ ಭಿನ್ನತೆಯನ್ನೂ ಕಾಯ್ದುಕೊಳ್ಳುತ್ತ ಬಂದಿದೆ. ಇದೇ ಐಪಿಎಲ್​ಅನ್ನು ಉಳಿದೆಲ್ಲ ಟೂರ್ನಿಗಳಿಗಿಂತ ವಿಶೇಷವಾಗಿಸಿದೆ. ಈ ಸಲ 18ನೇ ಆವೃತ್ತಿಯಲ್ಲೂ ಕೆಲ ವಿಶಿಷ್ಟತೆ, ಹೊಸತನ, ಹೊಸ ನಿಯಮಾವಳಿಗಳಿಂದ ಕೂಡಿದೆ. ಅಂಥ ಕೆಲ ಪ್ರಮುಖಾಂಶಗಳ ಸಂಕ್ಷಿಪ್ತ ವಿವರ ಇಲ್ಲಿದೆ...

ಒಂದಾದ ಗೆಳೆಯರು ಮತ್ತು ವೈರಿಗಳು!

ಕೆಎಲ್​ ರಾಹುಲ್​ ಮತ್ತು ಕರುಣ್​ ನಾಯರ್​ ಕಿರಿಯರ ಕ್ರಿಕೆಟ್​ನಿಂದಲೂ ಜತೆಯಾಗಿ ಆಡುತ್ತ ಬಂದವರು. ಕರ್ನಾಟಕ ಮತ್ತು ಭಾರತ ತಂಡದಲ್ಲೂ ಜತೆಯಾಗಿ ಆಡಿದ್ದರು. ಐಪಿಎಲ್​ನಲ್ಲೂ ಈ ಹಿಂದೆ ಪಂಜಾಬ್​ ಕಿಂಗ್ಸ್​ ತಂಡದಲ್ಲಿ ಜತೆಯಾಗಿ ಆಡಿದ್ದರು. ಈ ಬಾರಿ ಮೆಗಾ ಹರಾಜಿನಲ್ಲಿ ಇಬ್ಬರೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಪಾಲಾಗಿರುವುದರಿಂದ, ಮತ್ತೊಮ್ಮೆ ಜತೆಯಾಗಿ ಆಡುವ ಅವಕಾಶ ಪಡೆದಿದ್ದಾರೆ. ಇನ್ನು ಬರೋಡ ತಂಡದಲ್ಲಿ ಈ ಹಿಂದೆ ಜತೆಯಾಗಿ ಆಡಿದ್ದ ಕೃನಾಲ್​ ಪಾಂಡ್ಯ ಮತ್ತು ಸ್ವಪ್ನಿಲ್​ ಸಿಂಗ್​ ನಂತರ ವೈರಿಗಳಾಗಿದ್ದರು. ಇದಕ್ಕೆ ಕಾರಣ, ಕೃನಾಲ್​ ಬರೋಡ ನಾಯಕರಾದಾಗ ಸ್ವಪ್ನಿಲ್​ಗೆ ಆಡುವ ಅವಕಾಶ ತಪ್ಪಿಸಿದ್ದು. ಇದರಿಂದ ಸ್ವಪ್ನಿಲ್​ ದೇಶೀಯ ಕ್ರಿಕೆಟ್​ನಲ್ಲಿ ಉತ್ತರಾಖಂಡಕ್ಕೆ ವಲಸೆ ಹೋಗಿ ಮರುಹುಟ್ಟು ಪಡೆದುಕೊಳ್ಳುವ ಮೂಲಕ ಆರ್​ಸಿಬಿ ಪರ ಆಡುವ ಅವಕಾಶ ಪಡೆದಿದ್ದರು. ಕಳೆದ ಆವೃತ್ತಿಯ ಅತ್ಯುತ್ತಮ ನಿರ್ವಹಣೆಯಿಂದ ತಂಡದಲ್ಲಿ ರಿಟೇನ್​ ಆಗಿದ್ದರು. ಈ ನಡುವೆ ಮೆಗಾ ಹರಾಜಿನಲ್ಲಿ ಕೃನಾಲ್​ ಕೂಡ ಆರ್​ಸಿಬಿಗೆ ಬಂದಿದ್ದಾರೆ. ಇದರಿಂದಾಗಿ ಇವರಿಬ್ಬರು ಈ ಬಾರಿ ತಮ್ಮ ವೈರ ಮರೆತು ಆರ್​ಸಿಬಿ ಗೆಲುವಿಗಾಗಿ ಒಂದಾಗಬೇಕಿದೆ.

ಸ್ಥಳಿಯರ ಕಡೆಗಣನೆ

ಇತ್ತೀಚೆಗಿನ ವರ್ಷಗಳಲ್ಲಿ ಆರ್​ಸಿಬಿ ತಂಡದಲ್ಲಿ ಕನ್ನಡಿಗರ ಕಡೆಗಣನೆಯಾಗುತ್ತಿರುವ ಬಗ್ಗೆ ಅಭಿಮಾನಿಗಳು ದೂರುತ್ತಲೇ ಇರುತ್ತಾರೆ. ಈ ಸಲವೂ ಇಬ್ಬರು (ಪಡಿಕ್ಕಲ್​, ಭಾಂಡಗೆ) ಕನ್ನಡಿಗರು ತಂಡದಲ್ಲಿದ್ದರೂ ಅವರಿಗೆ ಅಡುವ 11ರ ಬಳಗದಲ್ಲಿ ಸ್ಥಾನ ಖಾತ್ರಿ ಇಲ್ಲ. ಆದರೆ ಐಪಿಎಲ್​ನಲ್ಲಿ ಸ್ಥಳಿಯರ ಕಡೆಗಣನೆಯ ಕೂಗು ಆರ್​ಸಿಬಿಗೆ ಸೀಮಿತವಲ್ಲ. ಈ ಬಾರಿ ಕೆಕೆಆರ್​, ಗುಜರಾತ್​ ಮತ್ತು ಡೆಲ್ಲಿ ತಂಡಗಳಲ್ಲಿ ತವರು ರಾಜ್ಯದ ಒಬ್ಬ ಆಟಗಾರ ಕೂಡ ಇಲ್ಲ! ಸನ್​ರೈಸರ್ಸ್​ (ನಿತೀಶ್​ ರೆಡ್ಡಿ), ರಾಜಸ್ಥಾನ (ಕುನಾಲ್​ ಸಿಂಗ್​) ತಂಡಗಳಲ್ಲಿ ಒಬ್ಬರಷ್ಟೇ ತವರು ರಾಜ್ಯದ ಕ್ರಿಕೆಟಿಗರಿದ್ದಾರೆ. ಪಂಜಾಬ್​ ತಂಡ ಗರಿಷ್ಠ ಐವರು (ಅರ್ಷದೀಪ್​, ಪ್ರಭ್​ಸಿಮ್ರನ್​, ಹರ್​ನೂರ್​, ನೇಹಲ್​, ಹರ್​ಪ್ರೀತ್​) ತವರು ರಾಜ್ಯದ ಆಟಗಾರರನ್ನು ಹೊಂದಿದೆ. ಸಿಎಸ್​ಕೆ ತಂಡದಲ್ಲಿ ನಾಲ್ವರು (ಅಶ್ವಿನ್​, ವಿಜಯ್​ ಶಂಕರ್​, ಸಿದ್ಧಾರ್ಥ್​, ಗುರುಜಪ್​) ತಮಿಳುನಾಡಿನ ಕ್ರಿಕಟಿಗರಿದ್ದರೆ, ಮುಂಬೈ ತಂಡದಲ್ಲಿ ಮೂವರು (ರೋಹಿತ್​, ಸೂರ್ಯಕುಮಾರ್​, ಅರ್ಜುನ್​) ಮಹಾರಾಷ್ಟ್ರ ಆಟಗಾರರಿದ್ದಾರೆ. ಲಖನೌ ತಂಡದಲ್ಲಿ ಇಬ್ಬರಷ್ಟೇ (ಮೊಹ್ಸಿನ್​, ಜುಯಲ್​) ಯುಪಿಯ ದೇಶೀಯ ಕ್ರಿಕೆಟಿಗರಿದ್ದಾರೆ.

ಹೋಮ್​ ಕಮಿಂಗ್​

ಈ ಸಲ ಮೆಗಾ ಹರಾಜಿನ ಬಳಿಕ ಕೆಲ ಆಟಗಾರರು ಐಪಿಎಲ್​ನಲ್ಲಿ ತಮ್ಮ ಮೂಲತಂಡ ಅಥವಾ ತಮ್ಮ ವೃತ್ತೀಜಿವನಕ್ಕೆ ಹೊಸ ತಿರುವು ನೀಡಿದ ತಂಡಕ್ಕೆ ಮರಳಿದ್ದಾರೆ. ಅವರಲ್ಲಿ ಆರ್​. ಅಶ್ವಿನ್​ ಪ್ರಮುಖರು. ಸಿಎಸ್​ಕೆ ಮೂಲಕ ಐಪಿಎಲ್​ಗೆ ಪದಾರ್ಪಣೆ ಮಾಡಿ ವೃತ್ತೀಜಿವನದ ಉತ್ತುಂಗಕ್ಕೆ ಏರಿದ ಅಶ್ವಿನ್​ ಇದೀಗ 10 ವರ್ಷಗಳ ಬಳಿಕ ಅದೇ ತಂಡಕ್ಕೆ ಮರಳಿದ್ದಾರೆ. ಐಪಿಎಲ್​ನಲ್ಲಿ 2014ರಿಂದ 2020ರವರೆಗೆ ಪಂಜಾಬ್​ ತಂಡದ ಪರ ಸ್ಫೋಟಕ ಬ್ಯಾಟಿಂಗ್​ ಪ್ರದರ್ಶಿಸಿದ್ದ ಗ್ಲೆನ್​ ಮ್ಯಾಕ್ಸ್​ವೆಲ್​ ಇದೀಗ 5 ವರ್ಷಗಳ ಬಳಿಕ ಮತ್ತೆ ಅದೇ ತಂಡ ಸೇರಿದ್ದಾರೆ. 2020ರಲ್ಲಿ ಮುಂಬೈ ತಂಡ ಟ್ರೋಫಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದ ವೇಗಿ ಟ್ರೆಂಟ್​ ಬೌಲ್ಟ್​, 4 ವರ್ಷಗಳ ಬಳಿಕ ಮತ್ತೆ ಅದೇ ತಂಡಕ್ಕೆ ಮರಳಿದ್ದಾರೆ. 2018ರಲ್ಲಿ ರಾಜಸ್ಥಾನ ಮೂಲಕ ಐಪಿಎಲ್​ಗೆ ಪದಾರ್ಪಣೆ ಮಾಡಿ ಮಿಂಚಿದ್ದ ಜೋಫ್ರಾ ಆರ್ಚರ್​, 5 ವರ್ಷಗಳ ಬಳಿಕ ಮತ್ತೆ ಅದೇ ತಂಡಕ್ಕೆ ಮರಳಿ ವೃತ್ತೀಜಿವನದ ಏಳ್ಗೆಯ ನಿರೀಕ್ಷೆಯಲ್ಲಿದ್ದಾರೆ. ಕನ್ನಡಿಗ ದೇವದತ್​ ಪಡಿಕ್ಕಲ್​ 2020, 2021ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ್ದರು. ಇದರ ಹೊರತಾಗಿಯೂ ತಂಡದಿಂದ ರಿಲೀಸ್​ ಆಗಿದ್ದ ಪಡಿಕ್ಕಲ್​ ಇದೀಗ 3 ವರ್ಷಗಳ ಬಳಿಕ ಮತ್ತೆ ಮೂಲತಂಡಕ್ಕೆ ಮರಳಿದ್ದಾರೆ. 2020-21ರ ಐಪಿಎಲ್​ನಲ್ಲಿ ಸಿಎಸ್​ಕೆ ಪರ ಎಂಎಸ್​ ಧೋನಿ ಗರಡಿಯಲ್ಲಿ ಉತ್ತಮ ಯಶಸ್ಸು ಕಂಡಿದ್ದ ಸ್ಯಾಮ್​ ಕರ್ರನ್​, ಇಂಗ್ಲೆಂಡ್​ ತಂಡದ ಟಿ20 ವಿಶ್ವಕಪ್​ ಗೆಲುವಿನ ರೂವಾರಿಯಾಗಿ ಮಿಂಚಿದ್ದರು. ಆದರೆ ಇತ್ತೀಚೆಗೆ ಫಾಮ್​ರ್ ಕೊರತೆಯಿಂದ ಇಂಗ್ಲೆಂಡ್​ನ ಮೂರೂ ಪ್ರಕಾರದ ತಂಡದಿಂದ ಹೊರಗಿರುವ ಕರ್ರನ್​, 4 ವರ್ಷಗಳ ಬಳಿಕ ಮತ್ತೆ ಸಿಎಸ್​ಕೆ ಪರ ಆಡುವ ಮೂಲಕ ವೃತ್ತೀಜಿವನದ ಮರುಹುಟ್ಟಿನ ನಿರೀಕ್ಷೆಯಲ್ಲಿದ್ದಾರೆ.

ಅತಿ ಹಿರಿಯ, ಕಿರಿಯ

43 ವರ್ಷದ ಎಂಎಸ್​ ಧೋನಿ ಈ ಸಲ ಐಪಿಎಲ್​ನಲ್ಲಿ ಆಡುತ್ತಿರುವ ಅತ್ಯಂತ ಹಿರಿಯ ಆಟಗಾರರೆನಿಸಿದ್ದಾರೆ. ಇದೇ ವೇಳೆ ರಾಜಸ್ಥಾನ ತಂಡದಲ್ಲಿರುವ 12 ವರ್ಷದ ವೈಭವ್​ ಸೂರ್ಯವಂಶಿ ಅತಿ ಕಿರಿಯ ಆಟಗಾರರೆನಿಸಿದ್ದಾರೆ. ಈ ಸಲಯ ಐಪಿಎಲ್​ ಶುರುವಾದ ಐದೇ ದಿನಗಳಲ್ಲಿ ಅವರು 14ನೇ ವಯಸ್ಸಿಗೂ ಕಾಲಿಡಲಿದ್ದಾರೆ. ಟೂರ್ನಿಯಲ್ಲಿ ಯಾವ ಪಂದ್ಯ ಆಡುವ ಅವಕಾಶ ಪಡೆದರೂ ಅವರು ಐಪಿಎಲ್​ನಲ್ಲಿ ಆಡಿದ ಅತಿ ಕಿರಯ ಎನಿಸಿರುವ ಪ್ರಯಾಸ್​ ರಾಯ್​ ಬರ್ಮನ್​ (16 ವರ್ಷ) ದಾಖಲೆ ಮುರಿಯಲಿದ್ದಾರೆ.

ದ್ರಾವಿಡ್​ ಮತ್ತೆ ಐಪಿಎಲ್​ ಕೋಚ್​

2024ರಿಂದ 2015ರವರೆಗೆ ರಾಜಸ್ಥಾನ ರಾಯಲ್ಸ್​ ತಂಡದ ಮೆಂಟರ್​ ಆಗಿ ಕಾರ್ಯನಿರ್ವಹಿಸುವ ಮೂಲಕ ಐಪಿಎಲ್​ನಿಂದಲೇ ಕೋಚಿಂಗ್​ ಆರಂಭಿಸಿದವರು ರಾಹುಲ್​ ದ್ರಾವಿಡ್​. ನಂತರ ಭಾರತ ಎ, ಕಿರಿಯರ ತಂಡ, ಟೀಮ್​ ಇಂಡಿಯಾಗೆ ಕೋಚ್​ ಆಗಿ ಅಪಾರ ಯಶಸ್ಸು ಕಂಡರು. ಕಿರಿಯರ-ಸೀನಿಯರ್​ ತಂಡಗಳ ಕೋಚ್​ ಆಗಿ ಐಸಿಸಿ ಟ್ರೋಫಿಯನ್ನೂ ಗೆದ್ದ ಅವರು ಈ ಬಾರಿ ಮತ್ತೆ ಕೋಚ್​ ಆಗಿ ಐಪಿಎಲ್​ಗೆ ಮರಳಿದ್ದಾರೆ. ಕಾಲಿನ ಗಾಯದ ನಡುವೆಯೂ ಗಾಲಿಕುರ್ಚಿಯನ್ನು ಬಳಸಿ ರಾಜಸ್ಥನ ತಂಡಕ್ಕೆ ಮಾರ್ಗದರ್ಶನ ನೀಡುತ್ತಿದ್ದಾರೆ. ಐಪಿಎಲ್​ ಟ್ರೋಫಿಯನ್ನೂ ಗೆದ್ದರೆ ಅವರ ಕೋಚಿಂಗ್​ ವೃತ್ತೀಜಿವನ ಪರಿಪೂರ್ಣವೆನಿಸಲಿದೆ.

ಐಸಿಸಿ ನೀತಿಸಂಹಿತೆ

ಐಪಿಎಲ್​ನಲ್ಲಿ ಈ ಬಾರಿ ಆಟಗಾರರ ಶಿಸ್ತು-ನಿಯಮ ಪಾಲನೆಗಳಿಗೆ ಸಂಬಂಧಿಸಿದಂತೆ ಐಸಿಸಿ ನೀತಿಸಂಹಿತೆಯೇ ಬಳಕೆಯಾಗಲಿದೆ. ಬಿಸಿಸಿಐ ಈ ಹಿಂದಿನ 17 ಆವೃತ್ತಿಗಳಲ್ಲೂ ಐಪಿಎಲ್​ಗೆ ಅದರದೇ ಆದ ಪ್ರತ್ಯೇಕ ನೀತಿಸಂಹಿತೆಯನ್ನು ಅನುಸರಿಸಿತ್ತು. ಆದರೆ ಈ ಸಲದಿಂದ ಐಪಿಎಲ್​ನಲ್ಲೂ ಐಸಿಸಿ ನೀತಿಸಂಹಿತೆಗಳೇ ಜಾರಿಯಾಗಲಿವೆ.

ಬಾಂಗ್ಲಾ ಕ್ರಿಕೆಟಿಗರಿಲ್ಲ

ಈ ಬಾರಿ ಐಪಿಎಲ್​ನಲ್ಲಿ ಬಾಂಗ್ಲಾದೇಶದ ಕ್ರಿಕೆಟಿಗರಿಲ್ಲ. 10ಕ್ಕೂ ಅಧಿಕ ಬಾಂಗ್ಲಾ ಕ್ರಿಕೆಟಿಗರು ಮೆಗಾ ಹರಾಜಿಗೆ ಬಂದಿದ್ದರೂ ಯಾರೊಬ್ಬರೂ ಬಿಕರಿಯಾಗಲಿಲ್ಲ. ಪಾಕಿಸ್ತಾನದ ನಂತರ ಐಪಿಎಲ್​ನಿಂದ ಹೊರಗುಳಿರುವ 2ನೇ ಟೆಸ್ಟ್​ ಮಾನ್ಯತೆಯ ದೇಶವೆನಿಸಿದೆ ಬಾಂಗ್ಲಾ. ಇತ್ತೀಚೆಗೆ ಭಾರತ-ಬಾಂಗ್ಲಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಮೂಡಿರುವುದು ಮತ್ತು ಬಾಂಗ್ಲಾದಲ್ಲಿ ಹಿಂದುಗಳ ಮೇಲೆ ಆಗಿರುವ ದೌರ್ಜನ್ಯ, ಐಪಿಎಲ್​ನಿಂದ ಪರೋಕ್ಷ ನಿಷೇಧಕ್ಕೊಳಗಾಗಲು ಪ್ರಮುಖ ಕಾರಣವೆನಿಸಿದೆ.

ಪ್ರತಿ ಪಂದ್ಯಕ್ಕೆ ಪ್ರತ್ಯೇಕ ಸಂಭಾವನೆ

ಈ ಸಲದ ಐಪಿಎಲ್​ನಲ್ಲಿ ಪ್ರತಿ ಪಂದ್ಯಕ್ಕೆ ಆಟಗಾರರು, ರಿಟೇನ್​ ಅಥವಾ ಹರಾಜಿನಲ್ಲಿ ನಿಗದಿಯಾಗಿರುವ ಮೊತ್ತವಲ್ಲದೆ, ಪ್ರತ್ಯೇಕವಾಗಿ ಪಂದ್ಯ ಸಂಭಾವನೆಯನ್ನೂ ಪಡೆಯಲಿದ್ದಾರೆ. ಇಂಪ್ಯಾಕ್ಟ್​ ಪ್ಲೇಯರ್​ ಸಹಿತ ಪಂದ್ಯ ಆಡುವ ತಂಡವೊಂದರ ಎಲ್ಲ 12 ಆಟಗಾರರೂ ತಲಾ 7.5 ಲಕ್ಷ ರೂ. ಪಂದ್ಯ ಸಂಭಾವನೆ ಪಡೆಯಲಿದ್ದಾರೆ. ಇದರಿಂದ ಬಿಸಿಸಿಐ ಪ್ರತಿ ಪಂದ್ಯಕ್ಕೆ ತಂಡವೊಂದರ ಆಟಗಾರರಿಗೆ ಒಟ್ಟು 90 ಲಕ್ಷ ರೂ. ವೇತನ ನೀಡಲಿದೆ. 14 ಲೀಗ್​ ಪಂದ್ಯಗಳಿಗೆ ಒಟ್ಟು 12.6 ಕೋಟಿ ರೂ. ವೇತನ ವಿತರಿಸಲಿದೆ. ಈ ಸಲ ಎಲ್ಲ 14 ಲೀಗ್​ ಪಂದ್ಯಗಳಲ್ಲಿ ಆಡುವ ಆಟಗಾರ ಒಟ್ಟು 1.05 ಕೋಟಿ ರೂ. ಹೆಚ್ಚುವರಿ ಸಂಭಾವನೆ ಗಳಿಸಲಿದ್ದಾನೆ.

6 ಕ್ರಿಕೆಟಿಗರಿಗೆ 20 ಪ್ಲಸ್​ ಸಂಭಾವನೆ

ಈ ಸಲದ ಐಪಿಎಲ್​ನಲ್ಲಿ ದಾಖಲೆಯ 6 ಕ್ರಿಕೆಟಿಗರು ಟೂರ್ನಿಯ ಬಹುಮಾನ ಮೊತ್ತಕ್ಕಿಂತಲೂ (20 ಕೋಟಿ ರೂ) ಅಧಿಕ ಮೊತ್ತದ ಸಂಭಾವನೆ ಪಡೆಯಲಿದ್ದಾರೆ. ಅವರೆಂದರೆ ರಿಷಭ್​ ಪಂತ್​ (27 ಕೋಟಿ ರೂ), ಶ್ರೇಯಸ್​ ಅಯ್ಯರ್​ (26.75 ಕೋಟಿ ರೂ), ವೆಂಕಟೇಶ್​ ಅಯ್ಯರ್​ (23.75 ಕೋಟಿ ರೂ), ಹೆನ್ರಿಕ್​ ಕ್ಲಾಸೆನ್​ (23 ಕೋಟಿ ರೂ), ವಿರಾಟ್​ ಕೊಹ್ಲಿ (21 ಕೋಟಿ ರೂ), ನಿಕೋಲಸ್​ ಪೂರನ್​ (21 ಕೋಟಿ ರೂ). ಇನ್ನು 9 ಆಟಗಾರರು ತಲಾ 18 ಕೋಟಿ ರೂ. (ಕಮ್ಮಿನ್ಸ್​, ರಶೀದ್​, ಜೈಸ್ವಾಲ್​, ಸ್ಯಾಮ್ಸನ್​, ಜಡೇಜಾ, ಋತುರಾಜ್​, ಬುಮ್ರಾ, ಚಾಹಲ್​, ಅರ್ಷದೀಪ್​) ಸಂಭಾವನೆ ಪಡೆಯಲಿದ್ದಾರೆ.

ವೇಗಿಗಳ ಆವರ್ತನ

ಭಾರತ ಪರ ಆಡಿರುವ ಮೂವರು ಪ್ರಮುಖ ವೇಗಿಗಳಾದ ಮೊಹಮದ್​ ಶಮಿ, ಭುವನೇಶ್ವರ್​ ಕುಮಾರ್​ ಮತ್ತು ಮೊಹಮದ್​ ಸಿರಾಜ್​ ಈ ಬಾರಿ ಐಪಿಎಲ್​ನಲ್ಲಿ ತಮ್ಮ ತಂಡಗಳ ಆವರ್ತನ ಮಾಡಿಕೊಂಡಿದ್ದಾರೆ. ಗುಜರಾತ್​ ತಂಡದಲ್ಲಿದ್ದ ಶಮಿ ಸನ್​ರೈಸರ್ಸ್​ಗೆ ಹೋಗಿದ್ದರೆ, ಸನ್​ರೈಸರ್ಸ್​ನಲ್ಲಿದ್ದ ಭುವನೇಶ್ವರ್​ ಆರ್​ಸಿಬಿ ಸೇರಿದ್ದಾರೆ. ಆರ್​ಸಿಬಿ ತಂಡದಲ್ಲಿದ್ದ ಸಿರಾಜ್​, ಗುಜರಾತ್​ಗೆ ತೆರಳಿದ್ದಾರೆ. ಇದರಲ್ಲಿ ಯಾರ ಬದಲಾವಣೆ ಲಾಭದಾಯಕ ಎಂದು ಕಾದುನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net