

ನವದೆಹಲಿ: ಐಪಿಎಲ್ನ ಕಳೆದ 17 ಆವೃತ್ತಿಗಳಿಂದ ಅಂಪೈರ್ ಆಗಿದ್ದ ಅನಿಲ್ ಚೌಧರಿ ಈ ಬಾರಿ ವೀಕ್ಷಕ ವಿವರಣೆಕಾರರಾಗಿ ಹೊಸ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 12 ಟೆಸ್ಟ್, 49 ಏಕದಿನ ಮತ್ತು 64 ಟಿ20 ಪಂದ್ಯಗಳಲ್ಲೂ ಅಂಪೈರ್ ಆಗಿ ಕಾರ್ಯನಿರ್ವಹಿಸಿರುವ ಅನಿಲ್ ಚೌಧರಿ ಕಳೆದ ದೇಶೀಯ ಕ್ರಿಕೆಟ್ ಋತುವಿನಲ್ಲಿ ಕೇರಳ&ವಿದರ್ಭ ನಡುವಿನ ರಣಜಿ ಟ್ರೋಫಿ ಫೈನಲ್ ಬಳಿಕ ಅಂಪೈರಿಂಗ್ನಿಂದ ನಿವೃತ್ತಿ ಹೊಂದಿದ್ದಾರೆ. ಈ ಬಾರಿ ಐಪಿಎಲ್ನಲ್ಲಿ ಹರಿಯಾಣ್ವಿ ಮತ್ತು ಹಿಂದಿ ಭಾಷೆಯ ವೀಕ್ಷಕ ವಿವರಣೆಕಾರರಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ.
ಏ.6ರ ಕೋಲ್ಕತ ಪಂದ್ಯ ಗುವಾಹಟಿಗೆ ಸ್ಥಳಾಂತರ
ಕೋಲ್ಕತ: ಹಾಲಿ ಚಾಂಪಿಯನ್ ಕೆಕೆಆರ್ ತಂಡ ಏಪ್ರಿಲ್ 6ರಂದು ಲಖನೌ ಸೂಪರ್ಜೈಂಟ್ಸ್ ವಿರುದ್ಧ ಕೋಲ್ಕತದಲ್ಲಿ ಆಡಬೇಕಾಗಿದ್ದ ಪಂದ್ಯವನ್ನು ಭದ್ರತಾ ಕಾರಣಗಳಿಂದಾಗಿ ಗುವಾಹಟಿಗೆ ಸ್ಥಳಾಂತರಿಸಲಾಗಿದೆ. ರಾಮನವಮಿ ಹಬ್ಬದ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಏ.6ರಂದು ಕೋಲ್ಕತದಲ್ಲಿ ಐಪಿಎಲ್ ಪಂದ್ಯಕ್ಕೆ ಭದ್ರತೆ ಒದಗಿಸಲು ಸಾಧ್ಯವಾಗದು ಎಂದು ಕೋಲ್ಕತ ಪೊಲೀಸರು ತಿಳಿಸಿದ್ದರು. ಇದರಿಂದಾಗಿ ಪಂದ್ಯವನ್ನು ಗುವಾಹಟಿಯಲ್ಲಿ ಆಯೋಜಿಸಲಾಗುತ್ತಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಸ್ನೇಹಾಶಿಶ್ ಗಂಗೂಲಿ ತಿಳಿಸಿದ್ದಾರೆ. ರಾಮನವಮಿಯಂದು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಬಿಜೆಪಿ 20 ಸಾವಿರಕ್ಕೂ ಅಧಿಕ ಮೆರವಣಿಗೆಗಳನ್ನು ಹಮ್ಮಿಕೊಂಡಿದೆ. ಪಂದ್ಯ ಸ್ಥಳಾಂತರದ ಬಗ್ಗೆ ಬಿಸಿಸಿಐನಿಂದಲೂ ಶ್ರೀವೇ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆ ಇದೆ.