

Sanju Samson : ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ಬ್ಯಾಟರ್ ಆಗಿ ಮಾತ್ರ ಆಡುವುದಾಗಿ ಸುಳಿವು ನೀಡಿದ್ದಾರೆ. ಯುವ ಆಟಗಾರನಿಗೆ ತಮ್ಮ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹಸ್ತಾಂತರಿಸಲು ಯೋಜಿಸಿರುವುದಾಗಿ ತಿಳಿಸಿದ್ದಾರೆ.
2021ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿ ಅಧಿಕಾರ ವಹಿಸಿಕೊಂಡ ಸಂಜು ಸ್ಯಾಮ್ಸನ್, 2022ರಲ್ಲಿ ತಂಡವನ್ನು ಫೈನಲ್‌ಗೆ ಕೊಂಡೊಯ್ಯುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದರು. ಇದಕ್ಕೂ ಮೊದಲು 2008ರಲ್ಲಿ ಮೊದಲ ಬಾರಿಗೆ ರಾಜಸ್ಥಾನ ತಂಡ ಫೈನಲ್‌ಗೆ ಅರ್ಹತೆಯನ್ನು ಪಡೆದಿತ್ತು. ಆದರೆ, 2023ರಲ್ಲಿ ಆರ್ಆರ್ ತಂಡ ಪ್ಲೇಆಫ್ ಪ್ರವೇಶಿಸಲು ವಿಫಲವಾಯಿತು. ಐದನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಆದರೆ, ಕಳೆದ ಐಪಿಎಲ್ ಆವೃತ್ತಿಯಲ್ಲಿ ಸಂಜು ಮತ್ತೊಮ್ಮೆ ರಾಜಸ್ಥಾನವನ್ನು ಪ್ಲೇಆಫ್‌ಗೆ ತೆಗೆದುಕೊಂಡು ಹೋದರು.
ಕಳೆದ ಮೂರು ವರ್ಷಗಳಿಂದ ರಾಜಸ್ಥಾನವನ್ನು ಉತ್ತಮ ಸ್ಥಿತಿಯಲ್ಲಿಡುವಲ್ಲಿ ನಾಯಕ, ಬ್ಯಾಟ್ಸ್‌ಮನ್ ಮತ್ತು ವಿಕೆಟ್ ಕೀಪರ್ ಆಗಿ ಸಂಜು ಸ್ಯಾಮ್ಸನ್ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಆದಾಗ್ಯೂ, ಮುಂದಿನ ವರ್ಷ ಧ್ರುವ ಜುರೆಲ್‌ಗಾಗಿ ವಿಕೆಟ್‌ಕೀಪರ್ ಸ್ಥಾನವನ್ನು ತ್ಯಾಗ ಮಾಡಲು ಸಿದ್ಧ ಎಂದು ಸಂಜು ಇತ್ತೀಚೆಗೆ ಬಹಿರಂಗಪಡಿಸಿದ್ದಾರೆ.
ಧ್ರುವ ಜುರೆಲ್ ಪ್ರಸ್ತುತ ಟೆಸ್ಟ್‌ನಲ್ಲಿ ಎರಡನೇ ವಿಕೆಟ್ ಕೀಪರ್ ಆಗಿದ್ದಾರೆ. ಐಪಿಎಲ್‌ನಲ್ಲಿ ಕೀಪಿಂಗ್ ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಿದರೆ, ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಪ್ರಯೋಜನಕಾರಿಯಾಗಲಿದೆ. ಹೀಗಾಗಿ ನಾನು ಧ್ರುವ ಜುರೆಲ್ ಜೊತೆ ಕೀಪಿಂಗ್ ಜವಾಬ್ದಾರಿಗಳನ್ನು ಹಂಚಿಕೊಳ್ಳಲು ಯೋಚಿಸುತ್ತಿದ್ದೇನೆ. ನಾನೆಂದಿಗೂ ಕೇವಲ ಫೀಲ್ಡರ್ ಆಗಿ ನಾಯಕತ್ವವನ್ನು ವಹಿಸಿಲ್ಲ. ಹಾಗಾಗಿ ಇದು ನನಗೆ ದೊಡ್ಡ ಸವಾಲಾಗಿದೆ. ಆದರೂ ಧ್ರುವ ಜುರೇಲ್ ಕರ್ತವ್ಯದ ಬಗ್ಗೆ ನನಗೆ ಸ್ಪಷ್ಟತೆ ಇದೆ ಎಂದು ಸಂಜು ಹೇಳಿದರು.
ಆಟಗಾರರ ವೈಯಕ್ತಿಕ ಬೆಳವಣಿಗೆಯ ಬಗ್ಗೆ ನಾವು ಯೋಚಿಸಬೇಕು. ಹೀಗಾಗಿ ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಹಂಚಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಹಾಗೂ ಆರ್ಸಿಬಿಯ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅವರ ಯೂಟ್ಯೂಬ್ ಚಾನೆಲ್‌ನೊಂದಿಗೆ ಮಾತನಾಡಿದ ಸಂಜು, ತಮ್ಮ ಆಲೋಚನೆ ಮತ್ತು ನಿರ್ಧಾರವನ್ನು ಬಹಿರಂಗಪಡಿಸಿದರು.
2025ರ ಐಪಿಎಲ್ ಮೆಗಾ ಹರಾಜಿನ ಮೊದಲು, ರಾಜಸ್ಥಾನ ತಂಡವು ಸಂಜು ಸ್ಯಾಮ್ಸನ್ ಅವರನ್ನು 18 ಕೋಟಿ ರೂ.ನೊಂದಿಗೆ ರಿಟೇನ್ ಮಾಡಿಕೊಂಡಿದೆ. ಸಂಜು ಜತೆ ಯಶಸ್ವಿ ಜೈಸ್ವಾಲ್ (18 ಕೋಟಿ ರೂ.), ರಿಯಾನ್ ಪರಾಗ್ (14 ಕೋಟಿ ರೂ.), ಧ್ರುವ ಜುರೆಲ್ (ರೂ. 14 ಕೋಟಿ), ಹೆಟ್ಮೆಯರ್ (11 ಕೋಟಿ ರೂ.), ಮತ್ತು ಸಂದೀಪ್ ಶರ್ಮ (ರೂ. 4 ಕೋಟಿ) ಅವರನ್ನು ಉಳಿಸಿಕೊಂಡಿದೆ.
ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಧ್ರುವ ಜುರೆಲ್, ರಿಯಾನ್ ಪರಾಗ್, ಶಿಮ್ರೋನ್ ಹೆಟ್ಮೆಯರ್, ಸಂದೀಪ್ ಶರ್ಮ, ಜೋಫ್ರಾ ಆರ್ಚರ್ (ರೂ. 12.50 ಕೋಟಿ ರೂ.), ತುಷಾರ್ ದೇಶಪಾಂಡೆ (6.50 ಕೋಟಿ ರೂ.), ವನಿಂದು ಹಸರಂಗ ( 5.25 ಕೋಟಿ ರೂ.), ಮಹೇಶ್ ತೀಕ್ಷಣ (4.40 ಕೋಟಿ ರೂ.), ನಿತೀಶ್ ರಾಣ ( 4.20 ಕೋಟಿ ರೂ.), ಫಜಲ್ಹಕ್ ಫಾರೂಕಿ ( 2 ಕೋಟಿ ರೂ.), ಕ್ವೀನಾ ಮಫಕಾ (1.50 ಕೋಟಿ ರೂ.), ಆಕಾಶ್ ಮಧ್ವಲ್ (1.20 ಕೋಟಿ ರೂ.), ವೈಭವ್ ಸೂರ್ಯವಂಶಿ (1.10 ಕೋಟಿ ರೂ.), ಶುಭಂ ದುಬೆ (80 ಲಕ್ಷ ರೂ.), ಯುದ್ವೀರ್ ಚರಕ್ (35 ಲಕ್ಷ ರೂ.), ಕುಮಾರ್ ಕಾರ್ತಿಕೇಯ (30 ಲಕ್ಷ ರೂ.), ಅಶೋಕ್ ಶರ್ಮಾ (30 ಲಕ್ಷ ರೂ.) ಮತ್ತು ಕುನಾಲ್ ಸಿಂಗ್ (30 ಲಕ್ಷ ರೂ.). (ಏಜೆನ್ಸೀಸ್)