

ನವದೆಹಲಿ: ಮುಂಬರುವ ಐಪಿಎಲ್ -2025 ಸೀಸನ್ಗೂ ಮುಂಚಿತವಾಗಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ, ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯನ್ನು ತೊರೆಯುವ ಬಗ್ಗೆ ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ. ರೋಹಿತ್ ಮುಂದಿನ ಸೀಸನ್ನಲ್ಲಿ ಲಖನೌ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂಬ ವರದಿಗಳಿವೆ.
ಲಖನೌ ತಂಡವು ಕೂಡ ರೋಹಿತ್ರನ್ನು ಖರೀದಿ ಮಾಡಲು ತುಂಬಾ ಉತ್ಸಾಹ ಹೊಂದಿರುವಂತೆ ತೋರುತ್ತದೆ. ಏಕೆಂದರೆ, ಇತ್ತೀಚೆಗೆ ಎಲ್ಎಸ್ಜಿ ತಂಡದ ಫೀಲ್ಡಿಂಗ್ ಕೋಚ್ ಜಾಂಟಿ ರೋಡ್ಸ್ ಮಾಡಿರುವ ಕಾಮೆಂಟ್, ಈ ವದಂತಿಗೆ ಪುಷ್ಠಿ ನೀಡಿದೆ. ಅಷ್ಟಕ್ಕೂ ಜಾಂಟಿ ರೋಡ್ಸ್ ಹೇಳಿದ್ದೇನು ಎಂಬುದನ್ನು ನಾವೀಗ ತಿಳಿಯೋಣ.
ರೋಹಿತ್ ಶರ್ಮ ಅವರೇನಾದರೂ ಐಪಿಎಲ್ ಮೆಗಾ ಹರಾಜಿಗೆ ಬಂದರೆ ಅವರನ್ನು ಸ್ವಾಗತಿಸಲು ಲಖನೌ ತಂಡ ರೆಡಿಯಾಗಿದೆ. ರೋಹಿತ್ ಓರ್ವ ಶ್ರೇಷ್ಠ ಕ್ರಿಕೆಟಿಗ. ಹರಾಜಿಗೆ ಬಂದರೆ ಆತನನ್ನು ಖರೀದಿ ಮಾಡಲು ಎಲ್ಲ ಫ್ರಾಂಚೈಸಿಗಳು ಕೂಡ ಪ್ರಯತ್ನ ಮಾಡುತ್ತವೆ ಎಂದು ನ್ಯೂಸ್ 24 ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಜಾಂಟಿ ರೋಡ್ಸ್ ಹೇಳಿಕೆ ನೀಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಆಗಿದ್ದಾಗ ರೋಹಿತ್ ಜತೆ ಬಹಳ ಹತ್ತಿರದಿಂದ ಕೆಲಸ ಮಾಡಿದ್ದೇನೆ. ನಾನು ಅವರ ಬ್ಯಾಟಿಂಗ್ ಶೈಲಿಯನ್ನು ಇಷ್ಟಪಡುತ್ತೇನೆ. ಅವರೊಬ್ಬ ಉತ್ತಮ ಬ್ಯಾಟ್ಸ್ಮನ್. ಇದೇ ಕಾರಣಕ್ಕೆ ಲಖನೌ ರೋಹಿತ್ ಮೇಲೆ ಕೇಂದ್ರೀಕರಿಸಿದೆ ಎಂದು ಜಾಂಟಿ ರೋಡ್ಸ್ ತಿಳಿಸಿದ್ದಾರೆ.
ಎಲ್ಎಸ್ಜಿ ಮಾಲೀಕ ಹೇಳಿದ್ದೇ ಬೇರೆ!
ಇದೇ ವಿಚಾರವಾಗಿ ಲಖನೌ ಸೂಪರ್ ಜೇಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ಇತ್ತೀಚೆಗೆ ಸ್ಫೋರ್ಟ್ಸ್ ಟಾಕ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದರು. ರೋಹಿತ್ರನ್ನು ಖರೀದಿ ಮಾಡುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ್ದ ಗೋಯೆಂಕಾ, ನೀವು ನನಗೆ ಒಂದು ವಿಷಯ ಹೇಳಿ, ರೋಹಿತ್ ಶರ್ಮ ಹರಾಜಿಗೆ ಬರುತ್ತಾರಾ? ಇಲ್ಲವಾ? ಈ ಬಗ್ಗೆ ನಿಮಗೆ ಅಥವಾ ಯಾರಿಗಾದರೂ ತಿಳಿದಿದೆಯೇ? ಇದೆಲ್ಲ ಊಹಾಪೋಹಗಳಷ್ಟೆ. ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಅವರನ್ನು ಬಿಡುಗಡೆ ಮಾಡುತ್ತದೆಯೋ? ಇಲ್ಲವೋ? ಇನ್ನು ಖಚಿತವಾಗಿಲ್ಲ ಎಂದಿದ್ದರು.
ನಿಮ್ಮ ಇಚ್ಛೆಯ ಪಟ್ಟಿಯಲ್ಲಿ ರೋಹಿತ್ ಇದ್ದಾರಾ? ಎಂದು ಆ್ಯಂಕರ್ ಪ್ರಶ್ನೆ ಮಾಡಿದಾಗ, ಇಲ್ಲಿ ಪ್ರತಿಯೊಬ್ಬರೂ ತಮ್ಮ ಇಚ್ಛೆಯ ಪಟ್ಟಿಯನ್ನು ಹೊಂದಿದ್ದಾರೆ. ತಮ್ಮ ತಂಡದಲ್ಲಿ ಉತ್ತಮ ಆಟಗಾರ, ಅತ್ಯುತ್ತಮ ನಾಯಕ ಇರಬೇಕೆಂದು ಬಯಸುತ್ತಾರೆ. ಆದರೆ, ಇಲ್ಲಿ ಬಯಸುವ ವಿಚಾರ ಬರುವುದಿಲ್ಲ, ನೀವು ಏನು ಪಡೆದುಕೊಂಡಿದ್ದೀರಿ ಮತ್ತು ಏನು ಲಭ್ಯವಿದೆ ಹಾಗೂ ಅದರೊಂದಿಗೆ ನೀವು ಏನು ಮಾಡಬಹುದು ಎನ್ನುವುದು ಮುಖ್ಯವಾಗುತ್ತದೆ. ಎಲ್ಲರನ್ನೂ ಖರೀದಿಸಲು ಆಗುವುದಿಲ್ಲ ಎಂದು ಗೋಯೆಂಕಾ ಹೇಳಿದ್ದರು. (ಏಜೆನ್ಸೀಸ್)