IPL-2025: ಗೆಲುವಿನ ಹಳಿ ಏರಲು ಇಂದು ಪಂಜಾಬ್​-ಸಿಎಸ್​ಕೆ ಕಾದಾಟ

web pbks vs csk
Published on

ಮುಲ್ಲನ್​ಪುರ: ಟೂರ್ನಿಯಲ್ಲಿ ಬಹುತೇಕ ತದ್ವಿರುದ್ಧ ಸ್ಥಿತಿಯಲ್ಲಿರುವ ತಂಡಗಳಾದ ಪಂಜಾಬ್​ ಕಿಂಗ್ಸ್​ ಮತ್ತು ಚೆನ್ನೈ ಸೂಪರ್​ಕಿಂಗ್ಸ್​, ಐಪಿಎಲ್​-18ರಲ್ಲಿ ಮಂಗಳವಾರ ರಾತ್ರಿ ಮುಖಾಮುಖಿ ಆಗಲಿವೆ. ಸತತ 2 ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದ್ದ ಶ್ರೇಯಸ್​ ಅಯ್ಯರ್​ ಪಡೆ ಕಳೆದ ಪಂದ್ಯದಲ್ಲಿ ಸೋಲು ಅನುಭವಿಸಿದ್ದರೆ, ಗೆಲುವಿನೊಂದಿಗೆ ಟೂರ್ನಿ ಆರಂಭಿಸಿದ್ದ ಋತುರಾಜ್​ ಗಾಯಕ್ವಾಡ್​ ಪಡೆ ಇದೀಗ ಸತತ 3 ಸೋಲಿನೊಂದಿಗೆ ಲಯತಪ್ಪಿದೆ. ಹೀಗಾಗಿ ಉಭಯ ತಂಡಗಳಿಗೂ ಗೆಲುವಿನ ಹಳಿ ಏರುವ ನಿಟ್ಟಿನಲ್ಲಿ ಈ ಪಂದ್ಯ ಮಹತ್ವದ್ದಾಗಿದೆ.

ಉಭಯ ತಂಡಗಳ ಬ್ಯಾಟಿಂಗ್​ ವಿಭಾಗದ ಬಲಾಬಲದ ನಡುವೆಯೂ ದೊಡ್ಡ ಅಂತರ ಕಾಣಿಸುತ್ತಿದೆ.ಪಂಜಾಬ್​ ಬಲಿಷ್ಠ ಬ್ಯಾಟಿಂಗ್​ ವಿಭಾಗ ಹೊಂದಿದ್ದರೆ, ಸಿಎಸ್​ಕೆಗೆ ಬ್ಯಾಟಿಂಗ್​ ವಿಭಾಗದ ವೈಫಲ್ಯವೇ ದೊಡ್ಡ ಹಿನ್ನಡೆ ಎನಿಸಿದೆ.

ರಾಜಸ್ಥಾನ ವಿರುದ್ಧದ ಕಳೆದ ಪಂದ್ಯದಲ್ಲಿ ಅಗ್ರ ಕ್ರಮಾಂಕ ಕೈಕೊಟ್ಟಿದ್ದನ್ನು ಬಿಟ್ಟರೆ, ಮೊದಲೆರಡು ಪಂದ್ಯಗಳಲ್ಲಿ ಪಂಜಾಬ್​ ಬ್ಯಾಟರ್​ಗಳು ರನ್​ಮಳೆಯನ್ನೇ ಹರಿಸಿದ್ದರು. ಇತ್ತ ಸಿಎಸ್​ಕೆ ತಂಡಕ್ಕೆ ಅಗ್ರ ಕ್ರಮಾಂಕ ಮಾತ್ರವಲ್ಲದೆ, ಮಧ್ಯಮ ಕ್ರಮಾಂಕವೂ ಕೈಕೊಡುತ್ತ ಬಂದಿದೆ. ಪ್ರಮುಖವಾಗಿ ಎಂಎಸ್​ ಧೋನಿ ಫಿನಿಷರ್​ ಪಾತ್ರವನ್ನು ನಿಭಾಯಿಸಲು ಶಕ್ತರಾಗದಿರುವುದು ಸಿಎಸ್​ಕೆ ಪಾಳಯದಲ್ಲಿ ದೊಡ್ಡ ಚಿಂತೆಗೆ ಕಾರಣವಾಗಿದೆ. ಸಿಎಸ್​ಕೆ ಕಳೆದ ಪಂದ್ಯದಲ್ಲಿ ಡೆಲ್ಲಿ ಎದುರು 184 ರನ್​ ಚೇಸಿಂಗ್​ ಮಾಡಲಾಗದೆ ಸೋತಿತ್ತು. ತವರಿನಲ್ಲೇ 2 ಸತತ 2 ಸೋಲು ಅನುಭವಿಸಿರುವ ಸಿಎಸ್​ಕೆ, ನ್ಯೂ ಚಂಡೀಗಢದಲ್ಲಾದರೂ ಗೆಲುವಿನ ಹಳಿ ಏರುವ ತವಕದಲ್ಲಿದೆ.

ಸಿಎಸ್​ಕೆಗೆ ಧೋನಿ ಹೊರೆ?

ದಾಖಲೆಯ 18ನೇ ಆವೃತ್ತಿಯಲ್ಲಿ ಆಡುತ್ತಿರುವ ಧೋನಿ, ಸಿಎಸ್​ಕೆಗೆ 5 ಬಾರಿ ಪ್ರಶಸ್ತಿ ಗೆದ್ದುಕೊಟ್ಟಿರುವ ನಾಯಕ. ವಿಕೆಟ್​ ಕೀಪಿಂಗ್​ನಲ್ಲಿ ಈಗಲೂ ಅವರ ಚುರುಕುತನ ಹಾಗೆಯೇ ಇದೆ. ಆದರೆ ಬ್ಯಾಟಿಂಗ್​ನಲ್ಲಿ ಹಿಂದಿನ ನಿರ್ವಹಣೆ ತೋರಿಸಲಾಗದೆ ಪರದಾಡುತ್ತಿದ್ದಾರೆ. ಇದು ಸಿಎಸ್​ಕೆ ಅಭಿಮಾನಿಗಳನ್ನೂ ಇಕ್ಕಟ್ಟಿಗೆ ಸಿಲುಕಿಸಿದೆ. ತಮ್ಮ ನೆಚ್ಚಿನ "ಥಲಾ'ನನ್ನು ದೂರಲೂ ಆಗದೆ, ಸಮರ್ಥಿಸಿಕೊಳ್ಳಲೂ ಆಗದೆ ಅವರು ಒದ್ದಾಡುತ್ತಿದ್ದಾರೆ. ಜತೆಗೆ ನಾಯಕ ಋತುರಾಜ್​ ಗಾಯಕ್ವಾಡ್​ ಆರಂಭಿಕರಾಗಿ ಆಡದಿರುವುದು ತಂಡಕ್ಕೆ ಹಿನ್ನಡೆ ಎನಿಸಿದೆ. ಬೌಲಿಂಗ್​ನಲ್ಲಿ ಖಲೀಲ್​ ಅಹ್ಮದ್​, ನೂರ್​ ಅಹ್ಮದ್​, ಮಥೀಶ ಪಥಿರಣ ಹೆಚ್ಚಿನ ಬಲ ತುಂಬಿದ್ದಾರೆ.

ಪಂಜಾಬ್​ಗೆ ಬ್ಯಾಟಿಂಗ್​ ಬಲ

ನಾಯಕ ಶ್ರೇಯಸ್​ ಅಯ್ಯರ್​, ಪ್ರಿಯಾಂಶ್​ ಆರ್ಯ, ಪ್ರಭ್​ಸಿಮ್ರನ್​ ಸಿಂಗ್​, ಮಾರ್ಕಸ್​ ಸ್ಟೋಯಿನಿಸ್​ ನೇಹನ್​ ವಧೇರ, ಶಶಾಂಕ್​ ಸಿಂಗ್​ ಒಳಗೊಂಡಿರುವ ಪಂಜಾಬ್​ ಬ್ಯಾಟಿಂಗ್​ ವಿಭಾಗ ಬಲಿಷ್ಠವಾಗಿದ್ದು, ಗ್ಲೆನ್​ ಮ್ಯಾಕ್ಸ್​ವೆಲ್​ ಕೂಡ ಲಯಕ್ಕೆ ಮರಳಿದರೆ ಇನ್ನಷ್ಟು ಬಲ ಸಿಗಲಿದೆ. ಬೌಲಿಂಗ್​ನಲ್ಲಿ ಅರ್ಷದೀಪ್​ ಸಿಂಗ್​, ಲಾರ್ಕಿ ಫಗ್ಯುರ್ಸನ್​ ಉತ್ತಮ ದಾಳಿ ಸಂಟಿಸುತ್ತಿದ್ದಾರೆ. ಆದರೆ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ವಿಕೆಟ್​ ಬರ ಎದುರಿಸುತ್ತಿದ್ದಾರೆ. ಈ ಬಾರಿ 18 ಕೋಟಿ ರೂ. ಸಂಭಾವನೆ ಪಡೆಯುತ್ತಿರುವ ಚಾಹಲ್​ ಅದಕ್ಕೆ ನ್ಯಾಯ ಸಲ್ಲಿಸಲು ವಿಫಲರಾಗುತ್ತಿದ್ದಾರೆ. ಜತೆಗೆ ಸಮರ್ಥ 2ನೇ ಸ್ಪಿನ್ನರ್​ ಕೊರತೆಯೂ ತಂಡವನ್ನು ಕಾಡುತ್ತಿದೆ.

ಮುಖಾಮುಖಿ: 30

ಪಂಜಾಬ್​: 14

ಸಿಎಸ್​ಕೆ: 16

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ರನ್​ಮಳೆ ನಿರೀಕ್ಷೆ

ಮುಲ್ಲನ್​ಪುರದ ಮಹಾರಾಜ ಯಾದವಿಂದ್ರ ಸಿಂಗ್​ ಸ್ಟೇಡಿಯಂನಲ್ಲಿ ಇದು ಹಾಲಿ ಋತುವಿನ 2ನೇ ಪಂದ್ಯವಾಗಿದ್ದು, ಈ ಸಲವೂ ರನ್​ಮಳೆ ಹರಿಯುವ ನಿರೀಕ್ಷೆ ಇದೆ. ಕಳೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ 205 ರನ್​ ಪೇರಿಸಿತ್ತು. ಪಿಚ್​ ಈ ಸಲವೂ ಬ್ಯಾಟಿಂಗ್​ಗೆ ಸಹಕರಿಸುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net