

RCB : ಐಪಿಎಲ್- 2025 ಮೆಗಾ ಹರಾಜಿಗೆ ಕೇವಲ 10 ದಿನಗಳು ಮಾತ್ರ ಬಾಕಿ ಉಳಿದಿದೆ. ಐಪಿಎಲ್ ಅಭಿಮಾನಿಗಳು ಎದುರು ನೋಡುತ್ತಿರುವ ಮೆಗಾ ಹರಾಜು ನ. 24 ಮತ್ತು 25 ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯಲಿದೆ. ಈ ಕ್ಯಾಶ್ ರಿಚ್ ಲೀಗ್ನ ಹರಾಜಿನಲ್ಲಿ ಅನುಸರಿಸಬೇಕಾದ ತಂತ್ರಗಳ ಮೇಲೆ ಆಯಾ ಐಪಿಎಲ್ ಫ್ರಾಂಚೈಸಿಗಳು ಸದ್ಯ ಗಮನಹರಿಸುತ್ತಿವೆ.
ತಮ್ಮ ನೆಚ್ಚಿನ ಕ್ರಿಕೆಟಿಗರನ್ನು ಯಾವ ಫ್ರಾಂಚೈಸಿ ಪಡೆಯುತ್ತದೆ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕೂಡ ಕಾತರರಾಗಿದ್ದಾರೆ. ಇತ್ತೀಚೆಗೆ, ಟೀಮ್ ಇಂಡಿಯಾದ ಸ್ಟಾರ್ ಸ್ಪಿನ್ನರ್ ಯಜುವೇಂದ್ರ ಚಾಹಲ್ಗಾಗಿ ಅಭಿಮಾನಿಗಳು ಆನ್‌ಲೈನ್‌ನಲ್ಲಿ ಅಣಕು ಹರಾಜು ನಡೆಸಿದರು. ಚಹಾಲ್‌ಗೆ ಕನಿಷ್ಠ ಬಿಡ್ ಮೊತ್ತವನ್ನು 2 ಕೋಟಿ ರೂ.ಗೆ ನಿಗದಿ ಮಾಡಲಾಗಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಗುಜರಾತ್ ಟೈಟಾನ್ಸ್ ಮತ್ತು ಮುಂಬೈ ಇಂಡಿಯನ್ಸ್ ಫ್ರಾಂಚೈಸಿಗಳು ಅಣುಕು ಹರಾಜಿನಲ್ಲಿ ಚಹಾಲ್‌ಗೆ ಪೈಪೋಟಿ ನೀಡಿದವು.
ಆದರೆ, ಆರ್‌ಸಿಬಿ 9 ಕೋಟಿ ರೂ.ಗೂ ಹೆಚ್ಚು ಹಣ ಖರ್ಚು ಮಾಡಲು ಸಿದ್ಧವಾಗಿದ್ದರಿಂದ ಪಂಜಾಬ್ ಮತ್ತು ಗುಜರಾತ್ ಸ್ಪರ್ಧೆಯಿಂದ ಹೊರಬಂದವು. ಇದಾದ ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ಸ್ಪರ್ಧೆಗೆ ಪ್ರವೇಶಿಸಿತು. ಚಾಹಲ್‌ಗೆ 11.5 ಕೋಟಿ ರೂ. ಬಿಡ್ ಕೂಗಿತು. ಅಂತಿಮವಾಗಿ ಈ ಅಣಕು ಹರಾಜಿನಲ್ಲಿ ಚಹಾಲ್ ಅವರನ್ನು 12 ಕೋಟಿ ರೂ. ಆರ್‌ಸಿಬಿ ಸ್ವಾಧೀನಪಡಿಸಿಕೊಂಡಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಾಹಲ್ ಅವರು 2013 ರಲ್ಲಿ ಮುಂಬೈ ಇಂಡಿಯನ್ಸ್ ಪರವಾಗಿ IPL ಗೆ ಪಾದರ್ಪಣೆ ಮಾಡಿದರು. ಬಳಿಕ 8 ಸೀಸನ್ಗಳವರೆಗೆ RCB ಅನ್ನು ಪ್ರತಿನಿಧಿಸಿದರು. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿಗೆ ಹಲವು ಅದ್ಭುತ ವಿಜಯಗಳನ್ನು ನೀಡಿದರು. ಆದರೆ, RCB ಫ್ರಾಂಚೈಸಿ 2022ರ ಮೆಗಾ ಹರಾಜಿಗೂ ಮೊದಲು ಚಾಹಲ್ ಅವರನ್ನು ಕೈಬಿಟ್ಟಿತು. ಇದಾದ ಬಳಿಕ ರಾಜಸ್ಥಾನ್ ರಾಯಲ್ಸ್ ತಂಡ ಅವರನ್ನು ಖರೀದಿಸಿತು. ಚಾಹಲ್ ತನ್ನ ಮೊದಲ ಸೀಸನ್ನಲ್ಲಿ ರಾಜಸ್ಥಾನದ ಪರ ಪರ್ಪಲ್ ಕ್ಯಾಪ್ ಅನ್ನು ಗೆದ್ದರು. ಇದೀಗ ರಾಜಸ್ಥಾನ ಕೂಡ ಚಾಹಲ್ ಅವರನ್ನು ಮೆಗಾ ಹರಾಜಿಗೂ ಮುನ್ನ ಕೈಬಿಟ್ಟಿದೆ. ಈ ಬಾರಿಯ ಮೆಗಾ ಹರಾಜಿನಲ್ಲಿ ಆರ್‌ಸಿಬಿ ಮತ್ತೆ ಚಾಹಲ್ ಅವರನ್ನು ಖರೀದಿ ಮಾಡುವ ಸಾಧ್ಯತೆ ಇದೆ.
ಐಪಿಎಲ್ನಲ್ಲಿ ಇದುವರೆಗೆ 155 ಪಂದ್ಯಗಳನ್ನು ಆಡಿರುವ ಚಾಹಲ್ 22.12 ಸರಾಸರಿಯಲ್ಲಿ 200 ವಿಕೆಟ್‌ಗಳನ್ನು ಪಡೆದಿದ್ದಾರೆ. ಅದೇ ರೀತಿ ಟೀಮ್ ಇಂಡಿಯಾ ಪರ ಟಿ20ಯಲ್ಲಿ ಅತಿ ಹೆಚ್ಚು (96) ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದಾರೆ. (ಏಜೆನ್ಸೀಸ್)