ಬಂದ್ಬಿಟ್ಟ RCB ಆಪತ್ಬಾಂಧವ! ಕೊನೇ ಲೀಗ್​ ಪಂದ್ಯಕ್ಕೂ ಮುನ್ನವೇ ತಂಡ ಸೇರಿಕೊಂಡ ಜೋಶ್ ಹ್ಯಾಸಲ್‌ವುಡ್ | Josh Hazlewood

Josh Hazlewood
Published on

Josh Hazlewood : ಪ್ರಸ್ತುತ ನಡೆಯುತ್ತಿರುವ 18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ತಮ್ಮ ಕೊನೆಯ ಲೀಗ್ ಪಂದ್ಯವನ್ನು ಆಡುವುದಕ್ಕೂ ಮುನ್ನ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡಕ್ಕೆ ಸಿಹಿ ಸುದ್ದಿ ಸಿಕ್ಕಿದೆ. ಗಾಯದಿಂದಾಗಿ ಕಳೆದ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದ ತಂಡದ ಸ್ಟಾರ್ ವೇಗಿ ಜೋಶ್ ಹ್ಯಾಸಲ್‌ವುಡ್ ಮತ್ತೆ ಆಟಕ್ಕೆ ಮರಳಿದ್ದಾರೆ. ಹ್ಯಾಸಲ್‌ವುಡ್ ನಿನ್ನೆ ರಾತ್ರಿ (ಮೇ 24) ಆರ್‌ಸಿಬಿ ಶಿಬಿರವನ್ನು ಸೇರಿಕೊಂಡಿದ್ದಾರೆ.

ಮೇ 27ರಂದು ಆರ್‌ಸಿಬಿ ತಂಡ ಲಖನೌ ಸೂಪರ್‌ಜೈಂಟ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ಹ್ಯಾಸಲ್‌ವುಡ್ ಲಭ್ಯವಿರಲಿದ್ದಾರೆ. ಆರ್‌ಸಿಬಿಯ ಪ್ಲೇ-ಆಫ್ ಸ್ಥಾನವನ್ನು ನಿರ್ಧರಿಸುವಲ್ಲಿ ಈ ಪಂದ್ಯ ನಿರ್ಣಾಯಕವಾಗಿರುತ್ತದೆ. ಲಖನೌ ವಿರುದ್ಧದ ಗೆಲುವು ಆರ್‌ಸಿಬಿ, ಅಂಕಪಟ್ಟಿಯಲ್ಲಿ ಅಗ್ರ ಎರಡು ಸ್ಥಾನಗಳಲ್ಲಿ ಒಂದರಲ್ಲಿ ಸ್ಥಾನ ಪಡೆಯಲು ಸಹಾಯ ಮಾಡುತ್ತದೆ.

ಐಪಿಎಲ್ ಭಾಗಶಃ ಮುಂದೂಡಲ್ಪಟ್ಟ ನಂತರ, ಹ್ಯಾಸಲ್‌ವುಡ್ ಉಳಿದ ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂಬ ಆರಂಭಿಕ ವರದಿಗಳು ಬಂದವು. ಗಾಯ ಮತ್ತು ಡಬ್ಲ್ಯೂಟಿಸಿ ಫೈನಲ್ ಕೂಡ ನಿಗದಿಯಾಗಿರುವುರಿಂದ, ಹ್ಯಾಸಲ್‌ವುಡ್ ಲಭ್ಯವಾಗುವುದು ಅಸಾಧ್ಯ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಆರ್​ಸಿಬಿ ಅಭಿಮಾನಿಗಳು ಮಾತ್ರ ಹ್ಯಾಸಲ್​ವುಡ್​ಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕೊನೆಗೂ ಪ್ರಾರ್ಥನೆ ಫಲಿಸಿದೆ.

ಹ್ಯಾಸಲ್​​​ವುಡ್ ಅವರು ಕೊನೆಯ ಲೀಗ್ ಪಂದ್ಯಕ್ಕೂ ಮೊದಲು (ಲಖನೌ ವಿರುದ್ಧ) ಆರ್‌ಸಿಬಿ ಶಿಬಿರವನ್ನು ಸೇರಿಕೊಂಡಿದ್ದಾರೆ. ಈ ವಿಚಾರವನ್ನು ಆರ್​ಸಿಬಿ ಫ್ರಾಂಚೈಸಿ, ತನ್ನ ಅಧಿಕೃತ ಎಕ್ಸ್​ ಖಾತೆಯಲ್ಲಿ ಘೋಷಿಸಿದೆ.

ಅಂದಹಾಗೆ, ಹ್ಯಾಸಲ್‌ವುಡ್ ಈ ಸೀಸನ್​ನಲ್ಲಿ 10 ಪಂದ್ಯಗಳನ್ನು ಆಡಿದ್ದು, 18 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಸೀಸನ್​ನಲ್ಲಿ ಆರ್‌ಸಿಬಿಯ ಯಶಸ್ಸಿನಲ್ಲಿ ಹ್ಯಾಸಲ್​ವುಡ್​ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ಲೇಆಫ್‌ ಪಂದ್ಯಗಳಿಗೆ ಹ್ಯಾಸಲ್‌ವುಡ್ ಲಭ್ಯವಾಗಿರುವುದು ಆರ್‌ಸಿಬಿಗೆ ಉತ್ತಮ ಸಂಕೇತವಾಗಿದೆ.

ಇನ್ನು ಹ್ಯಾಸ್​ಲ್‌ವುಡ್ ಕೊರತೆ ಆರ್‌ಸಿಬಿಗೆ ತೀವ್ರ ಹೊಡೆತ ನೀಡಿತು ಎಂಬುದನ್ನು ಮರೆಯುವಂತಿಲ್ಲ. ಇತ್ತೀಚೆಗೆ (ಮೇ 23) ಸನ್‌ರೈಸರ್ಸ್ ಹೈದರಾಬಾದ್​ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು ಹೇರಳವಾಗಿ ರನ್ ಬಿಟ್ಟುಕೊಟ್ಟರು. ಈ ಪಂದ್ಯದಲ್ಲಿ ಆರ್‌ಸಿಬಿ ಬೌಲರ್‌ಗಳು 231 ರನ್ ಬಿಟ್ಟುಕೊಟ್ಟರು. ಯಶ್ ದಯಾಳ್ 3 ಓವರ್‌ಗಳಲ್ಲಿ 36 ರನ್, ಭುವನೇಶ್ವರ್ 4 ಓವರ್‌ಗಳಲ್ಲಿ 43, ಎಂಗಿಡಿ 4 ಓವರ್‌ಗಳಲ್ಲಿ 51 ಮತ್ತು ಸುಯಾಶ್ ಶರ್ಮಾ 3 ಓವರ್‌ಗಳಲ್ಲಿ 45 ರನ್ ಬಿಟ್ಟುಕೊಟ್ಟರು. ಹೀಗಾಗಿ ಆರ್‌ಸಿಬಿ, ಬೃಹತ್ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಯಿತು. ಪರಿಣಾಮವಾಗಿ, 42 ರನ್‌ಗಳಿಂದ ಸೋತರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net