

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಆವೃತ್ತಿಗೆ (IPL 2025) ಈಗಾಗಲೇ ಸಕಲ ತಯಾರಿಗಳು ನಡೆಯುತ್ತಿದ್ದು, ಸದ್ಯ ಎಲ್ಲರ ಚಿತ್ತ ಐಪಿಎಲ್ ಹರಾಜಿನತ್ತ ಮೂಡಿದೆ. ಆಕ್ಷನ್ ಶುರುವಿಗೂ ಮುನ್ನವೇ ಹಲವು ಸ್ಟಾರ್ ಆಟಗಾರರು ತಮ್ಮ ಫ್ರಾಂಚೈಸಿಯಿಂದ ಹೊರಗುಳಿಯಲಿದ್ದಾರೆ ಎಂಬ ಭವಿಷ್ಯವಾಣಿಗಳು ಒಂದೆಡೆಯಾದರೆ, ದಿಗ್ಗಜ ಆಟಗಾರರೇ ಈಗಿರುವ ತಂಡಕ್ಕೆ ಗುಡ್ಬೈ ಹೇಳಿ, ಮುಂದಿನ ಹೆಜ್ಜೆ ಬೇರೆಡೆ ಇಡಲು ಮುಂದಾಗಿದ್ದಾರೆ ಎಂಬ ಸುದ್ದಿಗಳು ಮತ್ತೊಂದೆಡೆ.
ಐಪಿಎಲ್ 2025ರ ಆವೃತ್ತಿ ಬಗ್ಗೆ ಬಿಸಿಸಿಐ ನಡೆಸಿದ ಚರ್ಚೆ ಹೊರಬಿದ್ದ ಬೆನ್ನಲ್ಲೇ ಕ್ರಿಕೆಟ್ ಅಭಿಮಾನಿಗಳ ಕಿವಿ ನೆಟ್ಟಗಾಗಿದ್ದು, ತಮ್ಮ ನೆಚ್ಚಿನ ಪ್ಲೇಯರ್ಸ್ಗಳು ಯಾವ ತಂಡದ ಪರ ಆಡಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ. ಇನ್ನು ಈ ಮಧ್ಯೆ ಮಾಜಿ ಕ್ಯಾಪ್ಟನ್ ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಕೆ.ಎಲ್. ರಾಹುಲ್, ಫಾಫ್ ಡು ಪ್ಲೆಸಿಸ್ ಸೇರಿದಂತೆ ಕೆಲವು ಸ್ಟಾರ್ ಆಟಗಾರರು ಈಗಿರುವ ತಮ್ಮ ಫ್ರಾಂಚೈಸಿಗೆ ಗುಡ್ಬೈ ಹೇಳಲಿದ್ದು, ಹರಾಜು ಪ್ರಕ್ರಿಯೆಯಲ್ಲಿ ಬೇರೊಂದು ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂಬ ವರದಿಗಳು ಸದ್ಯ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಕಳೆದ ಸೀಸನ್ ಲಖನೌ ಸೂಪರ್ ಜೈಂಟ್ಸ್ ತಂಡದ ಕ್ಯಾಪ್ಟನ್ ಆಗಿ ಟೀಮ್ನ ಮುನ್ನಡೆಸಿದ ಕನ್ನಡಿಗ ಕೆ.ಎಲ್. ರಾಹುಲ್, 2025ರ ಐಪಿಎಲ್ 18ನೇ ಆವೃತ್ತಿಯಲ್ಲಿ ತಂಡದಿಂದ ಹೊರಗುಳಿಯಲಿದ್ದು, ಇಲ್ಲಿಯವರೆಗೂ ಒಂದು ಬಾರಿಯೂ ಕಪ್ ಗೆಲ್ಲದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಸೇರಲಿದ್ದಾರೆ ಎಂಬ ವರದಿಗಳು ಅಭಿಮಾನಿಗಳಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ ಹಾಗೂ ಗೊಂದಲವು ಮೂಡಿಸಿದೆ. ಇನ್ನು ಇದೇ ತಂಡದಲ್ಲಿರುವ ಸ್ಪಿನ್ ಬೌಲರ್ ಅಮಿತ್ ಮಿಶ್ರಾ ಮತ್ತು ಮಾರ್ಕ್ ವುಡ್ಗೆ ಮುಂಬರುವ ಐಪಿಎಲ್ ಸೀಸನ್ ಕೊನೆಯ ಆವೃತ್ತಿ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಇಎಸ್ಐ ಆಸ್ಪತ್ರೆ ಉದ್ಘಾಟಿಸದಿದ್ದರೆ ಹೋರಾಟ
ವರದಿಗಳ ಪ್ರಕಾರ, ಲೆಗ್ ಬ್ರೇಕ್ ಬೌಲರ್ ಆಗಿ ಕಣಕ್ಕಿಳಿಯುವ ಅಮಿತ್ ಮಿಶ್ರಾ, ಕೇವಲ ಬಾಲ್ನಿಂದ ಮಾತ್ರವಲ್ಲದೇ ಬ್ಯಾಟ್ನಿಂದಲೂ ಚೆನ್ನಾಗಿ ಉತ್ತರಿಸುವ ಸಾಮರ್ಥ್ಯ ಹೊಂದಿದ್ದಾರೆ. ಉತ್ತಮ ಅನುಭವ ಹೊಂದಿರುವ ಮಿಶ್ರಾ, ವಿಶೇಷವಾಗಿ ಎಲ್‌ಎಸ್‌ಜಿ ಪರ ಅದ್ಭುತ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಆದ್ರೆ, ವಯಸ್ಸಿನ ಅಡಚಣೆಯಿಂದ ಅವರು ಸದ್ಯ ಮುಂಬರುವ ಐಪಿಎಲ್ ಅನ್ನು ತಮ್ಮ ಕೊನೆಯ ಸೀಸನ್ ಎಂದು ಪರಿಗಣಿಸಲಿದ್ದಾರೆ ಎಂದು ಹೇಳಲಾಗಿದೆ.
ತಮ್ಮ ವೇಗದ ಬೌಲಿಂಗ್ಗೆ ಹೆಸರುವಾಸಿಯಾಗಿರುವ ಮಾರ್ಕ್ ವುಡ್, ಲಖನೌ ಸೂಪರ್ ಜೈಂಟ್ಸ್ ಪರ ಉತ್ತಮ ಪ್ರದರ್ಶನ ನೀಡುವುದರ ಜತೆಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಬಲ ಬೌಲಿಂಗ್ ಹೊಂದಿರುವ ವುಡ್, ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ಕರಿಯರ್ಗೆ ಹೆಚ್ಚು ಒತ್ತು ನೀಡಲಿದ್ದಾರೆ ಎಂದು ಹೇಳಲಾಗಿದೆ. ಹೀಗಿರುವ ಕಾರಣ ಮಾರ್ಕ್ ವುಡ್ ಕೂಡ ಐಪಿಎಲ್ಗೆ ವಿದಾಯ ಹೇಳಲು ಸಜ್ಜಾಗಿದ್ದು, 2025ರಲ್ಲಿ ತಮ್ಮ ಕಡೆಯ ಸೀಸನ್ ಆಡಲಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).