

ಮುಂಬೈ: ಬಾಲಿವುಡ್ ಸ್ಟಾರ್ ನಟಿಯರಲ್ಲಿ ಒಬ್ಬರು ಕಾಜೋಲ್(Kajol). ಆಗಾಗ್ಗೆ ಕೆಲವು ವಿಷಯಗಳನ್ನು ಇರುವುದನ್ನು ಇದ್ದಂತೆಯೇ ಹೇಳುವ ನಟಿಯರಲ್ಲಿ ಇವರು ಇದ್ದಾರೆ. ಇತ್ತೀಚಿಗಿನ ಕಾರ್ಯಕ್ರಮವೊಂದರಲ್ಲಿ ನಟಿ ಕಾಜೋಲ್ ಅವರನ್ನು ಸೂಪರ್‌ಸ್ಟಾರ್‌ಡಮ್‌ನ ಬಗ್ಗೆ ಕೇಳಲಾಗಿದೆ. ಅದಕ್ಕೆ ಪ್ರತಿಕ್ರಿಯಿಸಿ ಸ್ಟಾರ್‌ಡಮ್ ಎಂಬುದು ಸತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ ಅದಕ್ಕೆ ಕಾರಣ ಏನೆಂಬುದನ್ನು ವಿವರಿಸಿದ್ದಾರೆ.
ಸ್ಟಾರ್‌ಡಮ್ ಈಗಾಗಲೇ ಸತ್ತಿದ್ದು ಆ ಕಲ್ಪನೆಯು ಈಗ ಹೋಗಿದೆ. ಇನ್ನು ಮುಂದೆ ಸ್ಟಾರ್‌ಗಳು ಅಥವಾ ಪ್ರತಿಭಾವಂತರು ಇರುವುದಿಲ್ಲ ಎಂಬ ಕಾರಣದಿಂದಲ್ಲ. ಸಾಮಾಜಿಕ ಜಾಲತಾಣದ ಆಗಮನವು ಒಂದು ದೊಡ್ಡ ಸ್ವಿಚ್ ಆಗಿದೆ. ಮೊದಲೆಲ್ಲಾ ಸ್ಟಾರ್‌ಡಮ್ ಎಂಬುದು ಒಂದು ಮೋಡಿಯಾಗಿತ್ತು. ಸಿನಿಸ್ಟಾರ್ಗಳು ಅಷ್ಟು ಸುಲಭವಾಗಿ ಎಲ್ಲರಿಗೂ ಕಾಣಿಸಿಕೊಳ್ಳುತ್ತಿರಲಿಲ್ಲ. ನೀವು ಒಂದು ವೇಳೆ ಅವರನ್ನು ನೋಡಲು ಬಯಸಿದರೆ ಅದು ದೊಡ್ಡ ಪರದೆಯ ಮೇಲೆ ಮಾತ್ರ ಅಥವಾ ಆ ವಿಡಿಯೋಟೇಪ್ ಅನ್ನು ಖರೀದಿಸಿದಾಗ ಮಾತ್ರ ಸಾಧ್ಯವಾಗುತಿತ್ತು. ಆದರೆ ನಿಮ್ಮನ್ನು ಪ್ರೀತಿಸುವ ಜನರು ಅದಕ್ಕೂ ಮೀರಿ ನಿಮ್ಮನ್ನು ನೋಡಬೇಕಾದರೆ ಹೆಚ್ಚುವರಿ ಪ್ರಯತ್ನವನ್ನು ಮಾಡಬೇಕಿತ್ತು ಎಂದು ಹೇಳಿದ್ದಾರೆ.
ಆದರೆ ಪ್ರಸ್ತುತ ಬದುಕಿನಲ್ಲಿ ನಿಮ್ಮ ನೆಚ್ಚಿನ ನಟರನ್ನು ಕಾಣಲು ನಿಮ್ಮ ಬಳಿ ಫೋನ್ ಇದ್ದರೆ ಸಾಕು. ಹಠಾತ್ತನೆ ನಿಮ್ಮ ಅಂಗೈನ ಬೆರಳಿನಲ್ಲಿ ಅವರ ದಿನಚರಿಯನ್ನೇ ಕಾಣಬಹುದಾಗಿದೆ. ಈ ಸಮಯದಲ್ಲಿ ಹೆಚ್ಚುವರಿ ಪ್ರಯತ್ನವು ಪರಿಚಿತತೆಯ ತಿರಸ್ಕಾರವನ್ನು ಉಂಟುಮಾಡುತ್ತದೆ. ಸಾಮಾಜಿಕ ಜಾಲತಾಣವನ್ನು ಬಳಸುವುದು ಹೆಚ್ಚಾದಂತೆ ಸ್ಟಾರ್‌ಡಮ್ ಎಂಬುದು ಮಾಯವಾಗಿದೆ.
ಆದ್ದರಿಂದ ಇನ್ನು ಮುಂದೆ ಸ್ಟಾರ್‌ಡಮ್ ಎಂಬುದೆಲ್ಲ ವಿಶೇಷವಾಗಿರುವುದಿಲ್ಲ ಎಂದು ಹೇಳಿದರು. ಇದೆ ಸಮಯದಲ್ಲಿ ವೃತ್ತಿಜೀವನದ ಕುರಿತು ಮಾತನಾಡಿದ ಅವರು, ನಾನು ಸೋಮಾರಿ ವ್ಯಕ್ತಿ, ಬಹುಶಃ ಕಡಿಮೆ ಕೆಲಸ ಮಾಡಿದ ನಟಿ. ವರ್ಷಕ್ಕೆ ಒಂದೊಂದು ಸಿನಿಮಾ ಮಾಡಿದ್ದೇನೆ. ಅದಕ್ಕೂ ಕಾರಣ ಇದೆ. ನನ್ನ ತಾಯಿ, ಅಜ್ಜಿ ಮತ್ತು ಕುಟುಂಬದ ಎಲ್ಲಾ ಮಹಿಳೆಯರು ಕೆಲಸವು ಜೀವನದ ಭಾಗವಾಗಿರಬೇಕೆ ಹೊರತು ಇಡೀ ಜೀವನವಾಗಿರಬಾರದು ಎಂಬ ಸಿದ್ಧಾಂತವನ್ನು ಹೊಂದಿದ್ದರು. ನಾನು ಅದನ್ನೇ ಅನುಸರಿಸಿದೆ ಎಂದು ತಿಳಿಸಿದ್ದಾರೆ.
ನಾನು ನನ್ನ ಜೀವನಕ್ಕೆ ಸಮಯವನ್ನು ತೆಗೆದುಕೊಳ್ಳಲು ಬಯಸುತ್ತೇನೆ. ಮದುವೆಯಾಗಿ ನನಗೆ ಮಕ್ಕಳಿದ್ದಾರೆ. ಅದೃಷ್ಟವಶಾತ್ ಇನ್ನೂ ನಾನು ಸಿನಿಮಾ ರಂಗದಲ್ಲಿದ್ದೇನೆ. ಇದಕ್ಕೆ ಕಾರಣವಾಗಿರು ಪ್ರತಿಯೊಬ್ಬರಿಗೂ ನಾನು ನಿಜವಾಗಿಯೂ ಕೃತಜ್ಞಳಾಗಿದ್ದೇನೆ ಎಂದಿದ್ದಾರೆ.
ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಕಾಜೋಲ್ ಸಿನಿಮಾರಂಗದ ಭಾಗವಾಗಿದ್ದಾರೆ. ಕೊನೆಯದಾಗಿ ಕಾಜೋಲ್ ಒಟಿಟಿ ಪ್ಲಾಟ್ಫಾರ್ಮ್ನಲ್ಲಿ ತೆರೆಕಂಡ ಲಸ್ಟ್ ಸ್ಟೋರಿಸ್ 2ನಲ್ಲಿ ಕಾಣಿಸಿಕೊಂಡಿದ್ದರು. ದೋಪಟ್ಟಿ, ಮಹಾರಾಗ್ನಿ, ಸರ್ಜಮೀನ್ ಸಿನಿಮಾಗಳಲ್ಲಿ ನಟಿಸಲಿದ್ದಾರೆ.(ಏಜೆನ್ಸೀಸ್)