

ನವದೆಹಲಿ: 2025ರ ಐಪಿಎಲ್ 18ನೇ ಆವೃತ್ತಿ ಶುರುವಾಗುವ ಮುನ್ನವೇ ವ್ಯಾಪಕ ಚರ್ಚೆಗಳು ಭುಗಿಲೆದ್ದಿದ್ದು, ಕ್ರಿಕೆಟ್ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹಾಗೂ ಕಾತರ ಹೆಚ್ಚಿದೆ. ಸದ್ಯ ಮುಂದಿನ ತಿಂಗಳಲ್ಲಿ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ (IPL 2025) ನಡೆಯಲಿದ್ದು, ಯಾವ ಸ್ಟಾರ್ ಆಟಗಾರರು ಯಾವ ತಂಡಕ್ಕೆ ಸೇರುತ್ತಾರೆ? ಯಾರು ಈಗಿರುವ ತಮ್ಮ ಫ್ರಾಂಚೈಸಿಯಿಂದ ಹೊರ ಹೋಗ್ತಾರೆ ಎಂಬುದೇ ಇದೀಗ ಯಕ್ಷ ಪ್ರಶ್ನೆಯಾಗಿ ಕಾಡುತ್ತಿದೆ. ಇದಕ್ಕೆಲ್ಲ ಉತ್ತರ ಸಿಗಬೇಕೆಂದರೆ ಆಕ್ಷನ್ ದಿನಕ್ಕಾಗಿ ಕಾಯಬೇಕಿದೆ. ಇನ್ನು ಇದೆಲ್ಲದರ ಮಧ್ಯೆ ತೀವ್ರ ಗೊಂದಲ ಮೂಡಿಸಿರುವುದು ತಮ್ಮ ತಂಡವನ್ನು ಐದು ಬಾರಿ ಚಾಂಪಿಯನ್ಸ್ ಆಗಿ ಮಾಡಿರುವ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಡೆ.
ಒಂದೆಡೆ ‘ಕ್ಯಾಪ್ಟನ್ ಕೂಲ್’ 2025ರ ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡ್ತಾರಾ? ಎಂಬ ಪ್ರಶ್ನೆಗಳು ಸದ್ಯ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದರೆ, ಧೋನಿ ಮಾತ್ರ ಈ ಬಗ್ಗೆ ಯಾವುದೇ ರೀತಿಯಲ್ಲೂ ಪ್ರತಿಕ್ರಿಯೆ ನೀಡದೆ ತಮ್ಮ ಸಮಯಕ್ಕಾಗಿ ಕಾಯುತ್ತಿರುವುದು ಮತ್ತೊಂದೆಡೆ. ಐಪಿಎಲ್ ವಿಚಾರದಿಂದ ಎಲ್ಲರ ಗಮನ ಸೆಳೆಯುತ್ತಿರುವ ಮಾಹಿ, ಅಂತಿಮವಾಗಿ ತಮ್ಮ ನಿರ್ಧಾರವೇನು ಎಂಬುದನ್ನು ತಿಳಿಸಲು ಯಾಕಿಷ್ಟು ತಡ ಮಾಡುತ್ತಿದ್ದಾರೆ ಅನ್ನೋದೆ ಫ್ಯಾನ್ಸ್ಗಳಿಗೆ ಅರ್ಥವಾಗದ ಸಂಗತಿಯಾಗಿದೆ. ಈ ಬಗ್ಗೆ ಫ್ರಾಂಚೈಸಿಯನ್ನು ಪ್ರಶ್ನಿಸಿದ್ರೆ, ಧೋನಿ ಅವರ ನಿರ್ಧಾರದ ಕುರಿತು ಇಲ್ಲಿಯವರೆಗೂ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿರುವುದು ಇದೀಗ ತೀವ್ರ ಬೇಸರ ಮೂಡಿಸಿದೆ.
ಅಷ್ಟಕ್ಕೂ ಐಪಿಎಲ್ 2025ರಲ್ಲಿ ಭಾಗವಹಿಸುವ ಬಗ್ಗೆ ಇದೇ ಅಕ್ಟೋಬರ್ ಮಧ್ಯಂತರದಲ್ಲಿ ಎಂ.ಎಸ್. ಧೋನಿ ತಮ್ಮ ಚೆನ್ನೈ ಸೂಪರ್ ಕಿಂಗ್ಸ್ ಮ್ಯಾನೇಜೆಮೆಂಟ್ ಜತೆಗೆ ಚರ್ಚೆ ಮಾಡಬೇಕಿತ್ತು. ಆದರೆ, ಟೀಮ್ ಇಂಡಿಯಾದ ಮಾಜಿ ಹಿರಿಯ ಆಟಗಾರ ಈ ಕುರಿತು ಯಾವುದೇ ನಿರ್ಧಾರವು ಕೈಗೊಂಡಿಲ್ಲ ಹಾಗೂ ಫ್ರಾಂಚೈಸಿಯನ್ನು ಸಂಪರ್ಕ ಮಾಡಿಲ್ಲ ಎಂಬುದು ಇಲ್ಲಿ ಗಮನಾರ್ಹ. ಇನ್ನು ಸಿಎಸ್ಕೆ ತಂಡದ ಮಾಜಿ ಕ್ಯಾಪ್ಟನ್ ನಿಲುವಿನ ಬಗ್ಗೆ ಕಡೆಗೂ ಮೌನ ಮುರಿದ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಸಿ ವಿಶ್ವನಾಥನ್, "ನಮಗೆ ಧೋನಿ ಇನ್ನೂ ಏನು ಹೇಳಿಲ್ಲ. ತಮ್ಮ ಇರುವಿಕೆಯ ಬಗ್ಗೆ ಅವರು ದೃಢೀಕರಿಸಿಲ್ಲ. ಆದ್ರೆ, ಮುಂಬರುವ 18ನೇ ಆವೃತ್ತಿಯಲ್ಲಿ ಅವರು ಆಡಲಿದ್ದಾರೆ ಎಂಬ ವಿಶ್ವಾಸ ನಮಗಿದೆ" ಎಂದಿದ್ದಾರೆ,(ಏಜೆನ್ಸೀಸ್).