IPL-2025: ಇಂದು ಡೆಲ್ಲಿ-ಲಖನೌ ಅಭಿಯಾನ ಶುರು; ಮಾಜಿ ತಂಡಗಳ ಎದುರು ಪಂತ್​-ರಾಹುಲ್​ ಸೆಣಸಾಟ

web dc vs lsg
Published on

ವಿಶಾಖಪಟ್ಟಣ: ಕಳೆದ ಆವೃತ್ತಿಯಲ್ಲಿ ನಾಯಕರೂ ಆಗಿದ್ದ ಇಬ್ಬರು ಪ್ರಮುಖ ಆಟಗಾರರನ್ನು ಅದಲು-ಬದಲು ಮಾಡಿಕೊಂಡಿರುವ ತಂಡಗಳಾದ ಡೆಲ್ಲಿ ಕ್ಯಾಪಿಟಲ್ಸ್​ ಮತ್ತು ಲಖನೌ ಸೂಪರ್​ಜೈಂಟ್ಸ್​, ಐಪಿಎಲ್​ 18ನೇ ಆವೃತ್ತಿಯಲ್ಲಿ ಸೋಮವಾರ ಮುಖಾಮುಖಿ ಆಗಲಿವೆ. ಈ ಬಾರಿ ಹೊಸ ನಾಯಕರೊಂದಿಗೆ ಅಭಿಯಾನ ಆರಂಭಿಸಲಿರುವ ಉಭಯ ತಂಡಗಳು ಶುಭಾರಂಭ ಕಾಣಲು ಪೈಪೋಟಿ ನಡೆಸಲಿವೆ.

ಇದು ಡೆಲ್ಲಿ ತಂಡದ ತವರು ಪಂದ್ಯವಾಗಿದ್ದು, ಎಂದಿನ ನವದೆಹಲಿ ಮೈದಾನಕ್ಕೆ ಬದಲಾಗಿ ವಿಶಾಖಪಟ್ಟಣದ ಡಾ.ವೈಎಸ್​ಆರ್​ ಸ್ಟೇಡಿಯಂನಲ್ಲಿ ಪಂದ್ಯ ನಿಗದಿಯಾಗಿದೆ. ಡೆಲ್ಲಿ ತಂಡ ತನ್ನ ಆರಂಭಿಕ 2 ತವರು ಪಂದ್ಯಗಳನ್ನು ಇಲ್ಲೇ ಆಡಲಿದೆ. ಡೆಲ್ಲಿ ತಂಡದ ಹೊಸ ನಾಯಕ ಅಕ್ಷರ್​ ಪಟೇಲ್​ ನಾಯಕತ್ವ ಗುಣವನ್ನು ನಿರೂಪಿಸುವ ಹಂಬಲದಲ್ಲಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ನಡುವೆಯೂ ಕೆಎಲ್​ ರಾಹುಲ್​ ಕೊನೇಕ್ಷಣದಲ್ಲಿ ಡೆಲ್ಲಿ ತಂಡ ಸೇರಿಕೊಂಡಿದ್ದರೂ, ಮೊದಲ ಪಂದ್ಯ ಆಡುವ ಖಚಿತತೆ ಇಲ್ಲ ಎನ್ನಲಾಗಿದೆ.

ಕಳೆದ ಬಾರಿ ಕೆಕೆಆರ್​ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಸೀಸ್​ ವೇಗಿ ಮಿಚೆಲ್​ ಸ್ಟಾರ್ಕ್​ ಮತ್ತು ಆರ್​ಸಿಬಿ ನಾಯಕ ್​ಾ ಡು ಪ್ಲೆಸಿಸ್​ ಈ ಸಲ ಡೆಲ್ಲಿ ತಂಡ ಸೇರಿದ್ದಾರೆ. ಆಸೀಸ್​ ಯುವ ಆರಂಭಿಕ ಮೆಕ್​ಗುರ್ಕ್​ ಡೆಲ್ಲಿ ತಂಡದಲ್ಲಿ ಉಳಿದುಕೊಂಡಿದ್ದರೆ, ದೇಶೀಯ ಕ್ರಿಕೆಟ್​ನಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶಿಸಿದ್ದ ಕನ್ನಡಿಗ ಕರುಣ್​ ನಾಯರ್​, ಸಮೀರ್​ ರಿಜ್ವಿ, ಆಶುತೋಷ್​ ಶರ್ಮರಂಥ ಭಾರತೀಯರೂ ಡೆಲ್ಲಿ ಬ್ಯಾಟಿಂಗ್​ಗೆ ಬಲ ತುಂಬಲಿದ್ದಾರೆ. ಡೆಲ್ಲಿ ಬೌಲಿಂಗ್​ನಲ್ಲಿ ನಾಯಕ ಅಕ್ಷರ್​, ಕುಲದೀಪ್​, ಟಿ. ನಟರಾಜನ್​, ಮೋಹಿತ್​ ಶರ್ಮ, ಮುಕೇಶ್​ ಶರ್ಮರಂಥ ಭಾರತೀಯ ಬೌಲರ್​ಗಳನ್ನು ನೆಚ್ಚಿಕೊಂಡಿದೆ.

ಪಂತ್​, ಕೆಎಲ್​ಗೆ ಪ್ರತಿಷ್ಠೆಯ ಪ್ರಶ್ನೆ!

ಐಪಿಎಲ್​ನಲ್ಲಿ ತವರಿನ ಡೆಲ್ಲಿ ತಂಡದ ಪರವಾಗಿಯೇ ಮೊದಲಿನಿಂದಲೂ ಆಡುತ್ತ ಬಂದಿದ್ದ ರಿಷಭ್​ ಪಂತ್​ ಈ ಬಾರಿ ನಿಷ್ಠೆ ಬದಲಾಯಿಸಿಕೊಂಡಿದ್ದಾರೆ. ಡೆಲ್ಲಿ ಫ್ರಾಂಚೈಸಿ ಮಾಲೀಕರ ಜತೆಗಿನ ಕೆಲ ಭಿನ್ನಮತಗಳಿಂದಾಗಿ ತಂಡ ತ್ಯಜಿಸಿದ್ದ ಪಂತ್​ ಈ ಬಾರಿ ಮೆಗಾ ಹರಾಜಿನಲ್ಲಿ ದಾಖಲೆಯ 27 ಕೋಟಿ ರೂ.ಗೆ ಲಖನೌ ತಂಡ ಸೇರಿದ್ದಾರೆ. ಜತೆಗೆ ನಾಯಕತ್ವದ ಜವಾಬ್ದಾರಿಯನ್ನೂ ಪಡೆದಿದ್ದಾರೆ. ಇನ್ನು ಕನ್ನಡಿಗ ಕೆಎಲ್​ ರಾಹುಲ್​ ಕಳೆದ ಬಾರಿ ಲಖನೌ ತಂಡದ ಮಾಲೀಕರಿಂದ ಆದ ಅವಮಾನದಿಂದ ನೊಂದು ತಂಡ ತ್ಯಜಿಸಿದ್ದರು ಮತ್ತು ಹರಾಜಿನಲ್ಲಿ 14 ಕೋಟಿ ರೂ.ಗೆ ಡೆಲ್ಲಿ ಪಾಲಾಗಿದ್ದರು. ಆದರೆ ನಾಯಕತ್ವ ನಿರಾಕರಿಸಿ ಬ್ಯಾಟಿಂಗ್​-ಕೀಪಿಂಗ್​ನತ್ತ ಗಮನಹರಿಸಲಿದ್ದಾರೆ. ಈ ಬದಲಾವಣೆ ಮತ್ತು ಮೊದಲ ಪಂದ್ಯದಲ್ಲೇ ತಮ್ಮ ಮಾಜಿ ತಂಡದ ಸವಾಲು ಎದುರಿಸಲಿರುವುದರಿಂದ ಪಂತ್​&ರಾಹುಲ್​ಗೆ ಇದು ಪ್ರತಿಷ್ಠೆಯ ಕಾದಾಟವೆನಿಸಿದೆ.

ಈ ಸಲ ಲಖನೌ ಆಕ್ರಮಣ...

ಕೆಎಲ್​ ರಾಹುಲ್​ ನಾಯಕರಾಗಿದ್ದಾಗ ಲಖನೌ ತಂಡದ ಬ್ಯಾಟಿಂಗ್​ ವಿಭಾಗದಲ್ಲಿ ಆಕ್ರಮಣಕಾರಿ ಆಟದ ಕೊರತೆ ಕಾಡಿತ್ತು. ಆದರೆ ರಿಷಭ್​ ಪಂತ್​ ಸಾರಥ್ಯದಲ್ಲಿ ಲಖನೌ ಹೆಚ್ಚಿನ ಆಕ್ರಮಣಕಾರಿ ಮನೋಭಾವ ಪ್ರದರ್ಶಿಸುವ ಸೂಚನೆ ಈಗಾಗಲೆ ಲಭಿಸಿದೆ. ಈ ನಿಟ್ಟಿನಲ್ಲಿ ಪಂತ್​ಗೆ ಉಪನಾಯಕ ನಿಕೋಲಸ್​ ಪೂರನ್​, ಡೇವಿಡ್​ ಮಿಲ್ಲರ್​, ಮಿಚೆಲ್​ ಮಾರ್ಷ್​, ಆಯುಷ್​ ಬಡೋನಿ, ಅಬ್ದುಲ್​ ಸಮದ್​ ಸಾಥ್​ ನೀಡಬೇಕಿದೆ. ಇನ್ನು ಬೌಲಿಂಗ್​ ವಿಭಾಗದಲ್ಲಿ ಲಖನೌಗೆ ಮಿಂಚಿನ ವೇಗಿ ಮಯಾಂಕ್​ ಯಾದವ್​ ಆರಂಭಿಕ ಕೆಲ ಪಂದ್ಯಗಳಿಗೆ ಗೈರಾಗಲಿದ್ದರೆ, ಆವೇಶ್​ ಖಾನ್​, ಆಕಾಶ್​ದೀಪ್​ ಕೂಡ ಫಿಟ್ನೆಸ್​ ಸಮಸ್ಯೆ ಎದುರಿಸುತ್ತಿದ್ದಾರೆ. ಮೊಹ್ಸಿನ್​ ಖಾನ್​ ಬದಲಿಗೆ ಶಾರ್ದೂಲ್​ ಠಾಕೂರ್​ ಸೇರಿದ್ದು, ಅವರ ಆಲ್ರೌಂಡ್​ ಸಾಮರ್ಥ್ಯ ಲಖನೌಗೆ ಬಲ ತುಂಬಲಿದೆ. ಸ್ಪಿನ್​ ವಿಭಾಗವನ್ನು ರವಿ ಬಿಷ್ಣೋಯಿ ಮುನ್ನಡೆಸಲಿದ್ದು, ಎಂ ಸಿದ್ಧಾರ್ಥ್​ ಸಾಥ್​ ನೀಡಲಿದ್ದಾರೆ.

*ಮುಖಾಮುಖಿ: 5

ಡೆಲ್ಲಿ: 2

ಲಖನೌ: 3

ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net