IPL-2025: ಈ ಸಲದ ಐಪಿಎಲ್​ನಲ್ಲಿ ನನಸಾದೀತೇ ಈ ವಿಶೇಷ ದಾಖಲೆಗಳ ಕನಸು?

web ipl 18
Published on

ಬೆಂಗಳೂರು: ದಾಖಲೆಗಳಿರುವುದೇ ಮುರಿಯುವುದಕ್ಕೆ ಎಂಬುದು ಕ್ರೀಡೆಯಲ್ಲಿ ಸಾಮಾನ್ಯವಾಗಿ ಕೇಳಿಬರುವ ಮಾತು. ಅದರಲ್ಲೂ ಐಪಿಎಲ್​ನಂಥ ಶ್ರೀಮಂತ, ರೋಚಕ ಕ್ರಿಕೆಟ್​ ಲೀಗ್​ನಲ್ಲಿ ಯಾವ ದಾಖಲೆಗಳೂ ಸುರಕ್ಷಿತವಲ್ಲ. ಅದೇ ರೀತಿ ಯಾವ ದಾಖಲೆಯೂ ಅಸಾಧ್ಯವೂ ಅಲ್ಲ. ಆದರೂ ಐಪಿಎಲ್​ನಲ್ಲಿ ಕೆಲವು ದಾಖಲೆಗಳು ಇನ್ನೂ ಕ್ರಿಕೆಟಿಗರ ಕೈಗೆಟುಕಿಲ್ಲ. ಈ ಸಲವಾದರೂ ಆ ದಾಖಲೆಗಳ ಕನಸು ನನಸಾಗಬಹುದೇ ಎಂಬ ನಿರೀಕ್ಷೆಯೊಂದಿಗೆ ಅಂಥ ಕೆಲ ವಿಶಿಷ್ಟ ದಾಖಲೆಗಳ ಮೆಲುಕು ಇಲ್ಲಿದೆ...

300 ಪ್ಲಸ್​ ಮೊತ್ತದ ನಿರೀಕ್ಷೆ

ಟಿ20 ಕ್ರಿಕೆಟ್​ನಲ್ಲಿ 300ಕ್ಕಿಂತ ಅಧಿಕ ಮೊತ್ತ ಗಳಿಸಲು ಸಾಧ್ಯ ಎಂದು ಈಗಾಗಲೆ ಕೆಲ ತಂಡಗಳು ಸಾಬೀತುಪಡಿಸಿವೆ. ಆದರೆ ಐಪಿಎಲ್​ನಲ್ಲಿ ಇದುವರೆಗೆ ಇದು ಸಾಧ್ಯವಾಗಿಲ್ಲ. ಆದರೆ ಈ ಬಾರಿ 300ಕ್ಕಿಂತ ಹೆಚ್ಚಿನ ಮೊತ್ತ ದಾಖಲಾಗುವ ನಿರೀಕ್ಷೆ ಹೆಚ್ಚಿದೆ. ಕಳೆದ ಸಲವೇ 8 ಬಾರಿ 250ಕ್ಕೂ ಅಧಿಕ ಮೊತ್ತ ದಾಖಲಾಗಿತ್ತು. ಇಂಪ್ಯಾಕ್ಟ್​ ಪ್ಲೇಯರ್​ನ ಇಂಪ್ಯಾಕ್ಟ್​ ಇದಕ್ಕೆ ಕಾರಣವಾಗಿತ್ತು. ಈ ಪೈಕಿ ಸನ್​ರೈಸರ್ಸ್​ ತಂಡ ಆರ್​ಸಿಬಿ ವಿರುದ್ಧ ಬೆಂಗಳೂರಿನಲ್ಲಿ 3 ವಿಕೆಟ್​ಗೆ 287 ರನ್​ ಗಳಿಸಿದ್ದು ಗರಿಷ್ಠವೆನಿಸಿತ್ತು. ಕಳೆದ ಅಕ್ಟೋಬರ್​ನಲ್ಲಿ ಭಾರತ ತಂಡವೂ ಹೈದರಾಬಾದ್​ನಲ್ಲಿ ಬಾಂಗ್ಲಾದೇಶ ವಿರುದ್ಧ 6 ವಿಕೆಟ್​ಗೆ 297 ರನ್​ ಗಳಿಸಿ 300ರ ಸನಿಹ ತಲುಪಿತ್ತು. ಹೀಗಾಗಿ ಈ ಬಾರಿ ಐಪಿಎಲ್​ನಲ್ಲಿ 300ರ ಕನಸು ನನಸಾಗುವ ನಿರೀಕ್ಷೆ ಹೆಚ್ಚಿದೆ.

ಒಂದೇ ಆವೃತ್ತಿಯಲ್ಲಿ ಸಾವಿರ ರನ್​

ಐಪಿಎಲ್​ ಆವೃತ್ತಿಯೊಂದರಲ್ಲೇ ಸಾವಿರ ರನ್​ ಸಿಡಿಸಿದ ಸಾಧನೆಯನ್ನು ಈ ಸಲ ಯಾರಾದರೂ ಸಾಧಿಸುವರೇ ಎಂಬ ಕುತೂಹಲವಿದೆ. 2016ರ ಆವೃತ್ತಿಯಲ್ಲಿ ವಿರಾಟ್​ ಕೊಹ್ಲಿ 4 ಶತಕಗಳ ಸಹಿತ 973 ರನ್​ ಸಿಡಿಸಿದ್ದು, ಐಪಿಎಲ್​ ಆವೃತ್ತಿಯೊಂದರ ಸರ್ವಾಧಿಕ ರನ್​ಗಳಿಕೆ ಎನಿಸಿದೆ. ಈ ಸಲ ಕೆಲ ಬ್ಯಾಟರ್​ಗಳು ಭರ್ಜರಿ ಫಾರ್ಮ್​ನಲ್ಲಿದ್ದು, ಈ ದಾಖಲೆ ಮುರಿಯುವ ನಿರೀಕ್ಷೆ ಇಡಬಹುದಾಗಿದೆ.

ಓವರ್​ಗೆ 6 ಸಿಕ್ಸರ್​!

ಟಿ20 ಕ್ರಿಕೆಟ್​ನಲ್ಲಿ ಈಗಾಗಲೆ ಯುವರಾಜ್​ ಸಿಂಗ್​ ಸಹಿತ ಕೆಲ ಬ್ಯಾಟರ್​ಗಳು ಓವರ್​ ಒಂದರ ಎಲ್ಲ 6 ಎಸೆತಗಳಲ್ಲಿ ಸಿಕ್ಸರ್​ ಸಿಡಿಸಿದ ಸಾಧನೆ ಮಾಡಿದ್ದಾರೆ. ಆದರೆ ಐಪಿಎಲ್​ನಲ್ಲಿ ಇದು ಇನ್ನೂ ಸಾಧ್ಯವಾಗಿಲ್ಲ. ಸತತ 5 ಸಿಕ್ಸರ್​ ಸಿಡಿಸಿದ್ದೇ ಗರಿಷ್ಠವೆನಿಸಿದೆ. 2012ರಲ್ಲಿ ಕ್ರಿಸ್​ ಗೇಲ್​ ಮತ್ತು 2023ರಲ್ಲಿ ರಿಂಕು ಸಿಂಗ್​ ಈ ಸಾಧನೆ ಮಾಡಿದ್ದರು. 2021ರಲ್ಲಿ ರವೀಂದ್ರ ಜಡೇಜಾ ಕೂಡ ಓವರ್​ ಒಂದರಲ್ಲಿ 5 ಸಿಕ್ಸರ್​ ಸಿಡಿಸಿದ್ದರು. ಈ ಬಾರಿಯಾದರೂ ಯಾರಾದರೂ ಸತತ 6 ಸಿಕ್ಸರ್​ ಸಿಡಿಸಬಹುದೇ ಎಂಬ ಕೌತುಕ ಹರಡಿದೆ.

ಹೊಸ ಚಾಂಪಿಯನ್​

ಐಪಿಎಲ್​ನಲ್ಲಿ ಮೊದಲ ಆವೃತ್ತಿಯಿಂದಲೂ ಸ್ಪರ್ಧೆಯಲ್ಲಿರುವ 3 ತಂಡಗಳಾದ ಆರ್​ಸಿಬಿ, ಪಂಜಾಬ್​ ಕಿಂಗ್ಸ್​, ಡೆಲ್ಲಿ ಕ್ಯಾಪಿಟಲ್ಸ್​ ಇದುವರೆಗೆ ಒಮ್ಮೆಯೂ ಪ್ರಶಸ್ತಿ ಗೆಲುವಿನ ಸಂಭ್ರಮ ಕಂಡಿಲ್ಲ. ಮೂರೂ ತಂಡಗಳು ಕನಿಷ್ಠ ಒಮ್ಮೆಯಾದರೂ ಫೈನಲ್​ಗೇರಿದ್ದರೂ, ರನ್ನರ್​ಅಪ್​ಗೆ ತೃಪ್ತಿಪಟ್ಟಿದ್ದವು. ಈ ಸಲವಾದರೂ ಈ ಪೈಕಿ ಒಂದು ತಂಡದ್ದಾದರೂ ಶಾಪ ವಿಮೋಚನೆ ಆಗಿ ಚೊಚ್ಚಲ ಚಾಂಪಿಯನ್​ ಪಟ್ಟ ಒಲಿಯಬಹುದೇ ಎಂದು ಕಾದುನೋಡಬೇಕಿದೆ.

ಕ್ರಿಸ್​ ಗೇಲ್​ ದಾಖಲೆಗಳ ಪತನ

ವೆಸ್ಟ್​ ಇಂಡೀಸ್​ನ ಸ್ಫೋಟಕ ಬ್ಯಾಟರ್​ನಲ್ಲಿ ಐಪಿಎಲ್​ನಲ್ಲಿ ದಶಕದ ಹಿಂದೆ ದಾಖಲಿಸಿರುವ ಕೆಲ ದಾಖಲೆಗಳು ಇನ್ನೂ ಅಬೇಧ್ಯವಾಗಿ ಉಳಿದಿವೆ. 2013ರ ಐಪಿಎಲ್​ನಲ್ಲಿ ಆರ್​ಸಿಬಿ ಪರ ಕ್ರಿಸ್​ ಗೇಲ್​ ಸರ್ವಾಧಿಕ ಅಜೇಯ 175 ರನ್​ ಸಿಡಿಸಿದ್ದರು. ಅದೇ ಇನಿಂಗ್ಸ್​ನಲ್ಲಿ ಅವರು ಗರಿಷ್ಠ 17 ಸಿಕ್ಸರ್​ಗಳನ್ನೂ ಬಾರಿಸಿದ್ದರು. ಈ ಬಾರಿ ಯಾರಾದರೂ ಬ್ಯಾಟರ್​ ಗೇಲ್​ ದಾಖಲೆ ಮುರಿದು ದ್ವಿಶತಕ ಪೂರೈಸಬಹುದೇ ಮತ್ತು 20 ಸಿಕ್ಸರ್​ಗಳ ಸಾಧನೆ ತೋರಬಹುದೇ ಎಂಬ ಕುತೂಹಲವಿದೆ.

ಹ್ಯಾಟ್ರಿಕ್​ ಶತಕ!

ಐಪಿಎಲ್​ನಲ್ಲಿ ಇದುವರೆಗೆ ನಾಲ್ವರು ಬ್ಯಾಟರ್​ಗಳು ಸತತ 2 ಶತಕ ಸಿಡಿಸಿದ ಸಾಧನೆ ಮಾಡಿದ್ದಾರೆ. ಅವರೆಂದರೆ ವಿರಾಟ್​ ಕೊಹ್ಲಿ (2023), ಜೋಸ್​ ಬಟ್ಲರ್​ (2022), ಶಿಖರ್​ ಧವನ್​ (2020) ಮತ್ತು ಶುಭಮಾನ್​ ಗಿಲ್​ (2023). ಈ ಬಾರಿ ಯಾರಾದರೂ ಈ ದಾಖಲೆಯನ್ನು ಮೀರಿಸಿ ಹ್ಯಾಟ್ರಿಕ್​ ಶತಕ ಸಿಡಿಸುವಲ್ಲಿ ಯಶಸ್ವಿಯಾಗಬಹುದೇ ಎಂಬ ಕುತೂಹಲವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net