

ಬೆಂಗಳೂರು: ಐಪಿಎಲ್ನಲ್ಲಿ ಇದುವರೆಗಿನ ಎಲ್ಲ 18 ಆವೃತ್ತಿಗಳಲ್ಲೂ ಒಂದೇ ತಂಡದ ಪರ ಆಡುವ ಅದೃಷ್ಟ ದೊರೆತಿದ್ದು ಒಬ್ಬ ಆಟಗಾರನಿಗೆ ಮಾತ್ರ. ಅದು ವಿರಾಟ್ ಕೊಹ್ಲಿ. ಅವರು ಮೊದಲ ಆವೃತ್ತಿಯಿಂದಲೂ ಆರ್ಸಿಬಿ ಪರವೇ ಆಡುತ್ತ ಬಂದಿದ್ದಾರೆ. ಉಳಿದಂತೆ ಎಂಎಸ್ ಧೋನಿ, ರೋಹಿತ್ ಶರ್ಮ, ಮನೀಷ್ ಪಾಂಡೆ ಕೂಡ ಎಲ್ಲ 18 ಆವೃತ್ತಿಗಳಲ್ಲೂ ಕಾಣಿಸಿಕೊಂಡಿರುವ ಆಟಗಾರರಾಗಿದ್ದರೂ ಅವರು, ಆರಂಭದಲ್ಲಿ ಅಥವಾ ನಡುವೆ ಬೇರೆ ತಂಡದ ಪರವೂ ಆಡಿದವರಾಗಿದ್ದಾರೆ. ಐಪಿಎಲ್ನಲ್ಲಿ ಇನ್ನು ಕೆಲ ಆಟಗಾರರು ಒಂದೇ ತಂಡದ ಪರ ಹೆಚ್ಚಿನ ಪಂದ್ಯಗಳನ್ನು ಆಡಿದ್ದು, ಆ ಆಟಗಾರರ ಹೆಸರು ಎತ್ತಿದರೆ ಅವರ ಆ ತಂಡವೇ ನೆನಪಾಗುತ್ತದೆ. ಆ ತಂಡದ ಪರ ಆಡಿ ಹಲವಾರು ಗೆಲುವುಗಳ ರೂವಾರಿಗಳೆನಿಸಿದ್ದ ಅವರು ಅದೇ ತಂಡದ ಬ್ರ್ಯಾಂಡ್ ಆಗಿದ್ದವರು. ಹೀಗಿದ್ದರೂ ಈ ಬಾರಿ ಕೆಲ ಕಾರಣಗಳಿಂದಾಗಿ ಅವರ ತಂಡಗಳು ಬದಲಾಗಿವೆ. ರಿಟೇನ್ ಆಗದ ಈ ಆಟಗಾರರು ಬಳಿಕ ಮೆಗಾ ಹರಾಜಿನಲ್ಲಿ ಬೇರೆ ತಂಡದ ಪಾಲಾಗಿದ್ದಾರೆ. ಈ ಸಲ ನಿಷ್ಠೆ ಬದಲಾಯಿಸಿರುವ ಅಂಥ ಆಟಗಾರರ ಮತ್ತು ಅವರು ಈ ಬಾರಿ ತಮ್ಮ ಹಳೆಯ ತಂಡದ ಆಪ್ತರನ್ನೇ ಮೈದಾನದಲ್ಲಿ ಎದುರಿಸುವ ಸವಾಲಿನ ಬಗ್ಗೆ ಸಂಪ್ತವಾದ ವಿವರ ಇಲ್ಲಿದೆ...
*ರಿಷಭ್ ಪಂತ್ (ಡೆಲ್ಲಿ ಟು ಲಖನೌ)
ಐಪಿಎಲ್ನಲ್ಲಿ ಕಳೆದ 9 ವರ್ಷಗಳಿಂದಲೂ ತನ್ನ ತವರು ರಾಜ್ಯವಾದ ದೆಹಲಿಯ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನೇ ಪ್ರತಿನಿಧಿಸುತ್ತ ಬಂದಿದ್ದವರು ರಿಷಭ್ ಪಂತ್. 2016ರ ಕಿರಿಯರ ವಿಶ್ವಕಪ್ನಲ್ಲಿ ಮಿಂಚಿದ ಬೆನ್ನಲ್ಲೇ ಡೆಲ್ಲಿ ತಂಡದಲ್ಲಿ ಅವಕಾಶ ಪಡೆದಿದ್ದ ಪಂತ್, ತಂಡದಲ್ಲಿ ಕೇವಲ ಕೀಪರ್&ಬ್ಯಾಟರ್ ಆಗಿರದೆ, 3 ಆವೃತ್ತಿಗಳಲ್ಲಿ ನಾಯಕರೂ ಆಗಿದ್ದರು. ಡೆಲ್ಲಿ ಪರ 111 ಪಂದ್ಯ ಆಡಿರುವ ಅವರು, ಈ ಪೈಕಿ 43ರಲ್ಲಿ ನಾಯಕತ್ವವನ್ನೂ ವಹಿಸಿದ್ದರು. ಹೀಗಿದ್ದರೂ ಈ ಬಾರಿ ನಿಯತ್ತು ಬದಲಾಯಿಸಿ ದಾಖಲೆಯ 27 ಕೋಟಿ ರೂ.ಗೆ ಲಖನೌ ಸೂಪರ್ಜೈಂಟ್ಸ್ ಸೇರಿ ನಾಯಕರೂ ಆಗಿದ್ದಾರೆ. ಅತ್ತ ಅವರ ಮಾಜಿ ಸಹ&ಆಟಗಾರ ಅರ್ ಪಟೇಲ್ ಡೆಲ್ಲಿ ಚುಕ್ಕಾಣಿ ಹಿಡಿದಿದ್ದು, ಈ ಸಲದ ಐಪಿಎಲ್ನಲ್ಲಿ ಇವರಿಬ್ಬರ ಮುಖಾಮುಖಿ ಕುತೂಹಲ ಕೆರಳಿಸಿದೆ.
*ಇಶಾನ್ ಕಿಶನ್ (ಮುಂಬೈ ಟು ಸನ್ರೈಸರ್ಸ್)
2016ರಲ್ಲಿ ಗುಜರಾತ್ ಲಯನ್ಸ್ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದ್ದರೂ ವಿಕೆಟ್ ಕೀಪರ್&ಬ್ಯಾಟರ್ ಇಶಾನ್ ಕಿಶನ್ ಎಲ್ಲರ ಗಮನಸೆಳೆದಿದ್ದು ಮುಂಬೈ ಇಂಡಿಯನ್ಸ್ ತಂಡದ ಮೂಲಕ. 3 ಬಾರಿ ಮುಂಬೈ ತಂಡದ ಟ್ರೋಫಿ ಗೆಲುವಿಗೂ ನೆರವಾಗಿದ್ದಾರೆ. 2022ರ ಮಿನಿ ಹರಾಜಿನಲ್ಲಿ ಆಗಿನ ದಾಖಲೆಯ 15.25 ಕೋಟಿ ರೂ.ಗೆ ಮುಂಬೈ ತಂಡಕ್ಕೆ ಮರಳಿದ್ದರು. ಆದರೆ ಈ ಬಾರಿಯ ಹರಾಜಿನಲ್ಲಿ ಅವರು 11.25 ಕೋಟಿ ರೂ.ಗೆ ಸನ್ರೈಸರ್ಸ್ ಪಾಲಾದರು. ಇದರಿಂದಾಗಿ, ಕಳೆದ 7 ವರ್ಷಗಳಲ್ಲಿ ಮುಂಬೈ ಪರ 89 ಪಂದ್ಯಗಳನ್ನು ಆಡಿರುವ ಕಿಶನ್ ಈ ಬಾರಿ ನಿಷ್ಠೆ ಬದಲಾಯಿಸುವಂತಾಗಿದೆ. ಜತೆಗೆ ಕಿಶನ್ ಮತ್ತು ಮುಂಬೈ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮುಖಾಮುಖಿಯೂ ರೋಚಕತೆ ಹೆಚ್ಚಿಸಲಿದೆ.
*ದೀಪಕ್ ಚಹರ್ (ಸಿಎಸ್ಕೆ ಟು ಮುಂಬೈ)
ಕಳೆದ 7 ವರ್ಷಗಳಲ್ಲಿ ಸಿಎಸ್ಕೆ ತಂಡದ 3 ಪ್ರಶಸ್ತಿ ಗೆಲುವಿನಲ್ಲಿ ಮಿಂಚಿದ್ದ ವೇಗಿ ದೀಪಕ್ ಚಹರ್, ಧೋನಿ ನಾಯಕತ್ವದ ಗರಡಿಯಲ್ಲಿ ಸಾಕಷ್ಟು ಪಳಗಿದ್ದರು ಮತ್ತು ಇದರಿಂದಾಗಿ ಟೀಮ್ ಇಂಡಿಯಾ ಪರ ಆಡುವ ಅವಕಾಶವನ್ನೂ ಪಡೆದುಕೊಂಡಿದ್ದರು. 2022ರ ಮಿನಿ ಹರಾಜಿನಲ್ಲಿ 14 ಕೋಟಿ ರೂ.ಗೆ ಸಿಎಸ್ಕೆ ತಂಡಕ್ಕೆ ಮರಳಿದ್ದರು. ಸಿಎಸ್ಕೆ ಪರ 76 ಪಂದ್ಯಗಳಲ್ಲಿ ಅಷ್ಟೇ ವಿಕೆಟ್ ಕಬಳಿಸಿರುವ ದೀಪಕ್ ಚಹರ್ ಈ ಸಲದ ಹರಾಜಿನಲ್ಲಿ 9.25 ಕೋಟಿ ರೂ.ಗೆ ಮುಂಬೈ ಇಂಡಿಯನ್ಸ್ ಪಾಲಾಗಿದ್ದಾರೆ. ಅಲ್ಲಿ ಬುಮ್ರಾ, ಬೌಲ್ಟ್ರಂಥ ವೇಗಿಗಳ ಜತೆಗೆ ಹೊಸ ಚೆಂಡು ಹಂಚಿಕೊಳ್ಳುವ ಅವಕಾಶವನ್ನೂ ಪಡೆಯಬಹುದು. ಈ ನಡುವೆ ಈ ಸಲದ ಐಪಿಎಲ್ನಲ್ಲಿ ದೀಪಕ್ ಚಹರ್&ಧೋನಿ ಎದುರಾದರೆ ಅದರ ಮಜಾ ಕ್ರಿಕೆಟ್ ಪ್ರೇಮಿಗಳದ್ದಾಗಲಿದೆ.
*ಮೊಹಮದ್ ಸಿರಾಜ್ (ಆರ್ಸಿಬಿ ಟು ಗುಜರಾತ್)
ಕಳೆದ 7 ವರ್ಷಗಳಿಂದ ಆರ್ಸಿಬಿ ತಂಡದ ಪ್ರಮುಖ ಭಾಗವಾಗಿದ್ದವರು ವೇಗಿ ಮೊಹಮದ್ ಸಿರಾಜ್. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಜತೆಗಿನ ಅವರ ಆಪ್ತತೆಯೂ ಗಮನಸೆಳೆದಿತ್ತು ಮತ್ತು ಆರ್ಸಿಬಿ ಅಭಿಮಾನಿಗಳಿಂದಲೂ ಅಪಾರ ಪ್ರೀತಿ ಸಂಪಾದಿಸಿದ್ದರು. 2018ರಿಂದ ಆರ್ಸಿಬಿ ತಂಡದ ಪರ 87 ಪಂದ್ಯ ಆಡಿದ್ದ ಸಿರಾಜ್, 83 ವಿಕೆಟ್ ಕಬಳಿಸಿದ್ದರು. ಈ ಮೂಲಕ ಆರ್ಸಿಬಿ ಪರ 3ನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿದ್ದರು. ಆದರೂ ಈ ಸಲ ಆರ್ಸಿಬಿ ತಂಡದಲ್ಲಿ ರಿಟೇನ್ ಆಗದ ಸಿರಾಜ್, 12.25 ಕೋಟಿ ರೂ.ಗೆ ಗುಜರಾತ್ ಟೈಟಾನ್ಸ್ ಪಾಲಾಗಿದ್ದಾರೆ. ಹೀಗಾಗಿ ಈ ಸಲ ಮೈದಾನದಲ್ಲಿ ಸಿರಾಜ್-ಕೊಹ್ಲಿ ನಡುವಿನ ಹಣಾಹಣಿ ಅತ್ಯಂತ ಕೌತುಕ ಮೂಡಿಸಿದೆ.
*ನಿತೀಶ್ ರಾಣಾ (ಕೆಕೆಆರ್ ಟು ರಾಜಸ್ಥಾನ)
ಕೋಲ್ಕತ ನೈಟ್ರೈಡರ್ಸ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ ಗಮನಸೆಳೆದಿದ್ದ ನಿತೀಶ್ ರಾಣಾ, 7 ಆವೃತ್ತಿಗಳಲ್ಲಿ ಕೆಕೆಆರ್ ಪರ 90 ಪಂದ್ಯ ಆಡಿದ್ದಾರೆ ಮತ್ತು 2023ರ ಆವೃತ್ತಿಯಲ್ಲಿ ತಂಡದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ಕಳೆದ ಆವೃತ್ತಿಯಲ್ಲಿ ತಂಡ ಪ್ರಶಸ್ತಿ ಗೆದ್ದಾಗ ಉಪನಾಯಕರೂ ಆಗಿದ್ದರು. ಇದರ ಹೊರತಾಗಿಯೂ ಈ ಸಲ ತಂಡದಲ್ಲಿ ರಿಟೇನ್ ಆಗದ ನಿತೀಶ್ ರಾಣಾ ಮೆಗಾ ಹರಾಜಿನಲ್ಲಿ 4.20 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್ ಪಾಲಾಗಿದ್ದರು. ಹರಾಜಿನ ನಂತರ ನಿತೀಶ್ ಪತ್ನಿ ಸಾಚಿ ಮರ್ವ್ಹಾ 'ನಿಷ್ಠೆ ಅತ್ಯಂತ ದುಬಾರಿ' ಎಂಬ ಸಾಮಾಜಿಕ ಜಾಲತಾಣದ ಸಂದೇಶದ ಮೂಲಕ, ತನ್ನ ಪತಿಯನ್ನು ಉಳಿಸಿಕೊಳ್ಳಲು ಬಿಡ್ ಮಾಡದ ಕೆಕೆಆರ್ ವಿರುದ್ಧ ಆಕ್ರೋಶವನ್ನೂ ವ್ಯಕ್ತಪಡಿಸಿದ್ದರು. ಈ ಬಾರಿ ಐಪಿಎಲ್ನಲ್ಲಿ ಕೆಕೆಆರ್ ಪ್ರಮುಖ ಸ್ಪಿನ್ನರ್ ಸುನೀಲ್ ನಾರಾಯಣ್ ಎಸೆತಗಳನ್ನು ನಿತೀಶ್ ರಾಣಾ ಯಾವ ರೀತಿ ಎದುರಿಸುವರು ಎಂಬುದು ಕುತೂಹಲಕಾರಿ ಎನಿಸಿದೆ.
*ಭುವನೇಶ್ವರ್ ಕುಮಾರ್ (ಸನ್ರೈಸರ್ಸ್ ಟು ಆರ್ಸಿಬಿ)
ಕಳೆದ 11 ವರ್ಷಗಳಿಂದ ಸನ್ರೈಸರ್ಸ್ ತಂಡದ ಭಾಗವಾಗಿದ್ದ ಅನುಭವಿ ವೇಗಿ ಭುವನೇಶ್ವರ್ ಕುಮಾರ್, ಅದರ ಪರ ಸರ್ವಾಧಿಕ 145 ಪಂದ್ಯಗಳನ್ನು ಆಡಿ ಗರಿಷ್ಠ 157 ವಿಕೆಟ್ ಕಬಳಿಸಿದ ದಾಖಲೆಯನ್ನೂ ಹೊಂದಿದ್ದಾರೆ. 2016ರಲ್ಲಿ ಚಾಂಪಿಯನ್ ಪಟ್ಟವೇರಿದ ತಂಡದ ಭಾಗವೂ ಆಗಿದ್ದರು. ಕಳೆದ ಆವೃತ್ತಿಯಲ್ಲಿ ಮತ್ತೊಮ್ಮೆ ಫೈನಲ್ ಪ್ರವೇಶವನ್ನೂ ಕಂಡಿದ್ದರು. ಇದರ ಹೊರತಾಗಿಯೂ ಈ ಬಾರಿ ರಿಟೇನ್ ಆಗದ ಭುವಿ, ಹರಾಜಿನಲ್ಲಿ 10.75 ಕೋಟಿ ರೂ.ಗೆ ಆರ್ಸಿಬಿ ಪಾಲಾಗಿದ್ದಾರೆ. ಸ್ಫೋಟಕ ಬ್ಯಾಟರ್ಗಳಿಂದ ಕೂಡಿರುವ ಸನ್ರೈಸರ್ಸ್ ಎದುರು ಈ ಬಾರಿ ಅವರ ಬೌಲಿಂಗ್ ದಾಳಿ ಕುತೂಹಲ ಮೂಡಿಸಿದೆ.