

ನವದೆಹಲಿ: ಐಪಿಎಲ್ ( IPL ) ಆಡಳಿತ ಮಂಡಳಿ ಇತ್ತೀಚೆಗೆ ಐಪಿಎಲ್-2025 ಮೆಗಾ ಹರಾಜಿನ ರಿಟೇನ್ ನಿಯಮಗಳನ್ನು ಬಿಡುಗಡೆ ಮಾಡಿರುವುದು ಕ್ರೀಡಾಭಿಮಾನಿಗಳಿಗೆ ತಿಳಿದೇ ಇದೆ. ಈ ಬಾರಿ ರಿಟೇನ್ ಮಿತಿಯನ್ನು ಆರು ಆಟಗಾರರಿಗೆ ಹೆಚ್ಚಿಸಲಾಗಿದೆ. ಇದು ರೈಟ್ ಟು ಮ್ಯಾಚ್ (RTM) ಆಯ್ಕೆಯನ್ನು ಹೊಂದಿದೆ. ಎಲ್ಲ ಫ್ರಾಂಚೈಸಿಗಳು ಅಕ್ಟೋಬರ್ 31ರೊಳಗೆ ರಿಟೇನ್ ಪಟ್ಟಿಯನ್ನು ಸಲ್ಲಿಸಬೇಕು. ನವೆಂಬರ್ ಮೂರನೇ ವಾರದಲ್ಲಿ ಹರಾಜು ನಡೆಯುವ ಸಾಧ್ಯತೆ ಇದೆ. ಆದರೆ, ಹರಾಜಿನ ವೇಳೆ ಫ್ರಾಂಚೈಸಿಗಳಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ.
ಐಪಿಎಲ್ 2024ರ ನಂತರ ಟೀಮ್ ಇಂಡಿಯಾದಲ್ಲಿ ಆರು ಆಟಗಾರರು ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ರಿಯಾನ್ ಪರಾಗ್, ತುಷಾರ್ ದೇಶಪಾಂಡೆ, ಸಾಯಿ ಸುದರ್ಶನ್, ಅಭಿಷೇಕ್ ಶರ್ಮ, ನಿತೀಶ್ ಕುಮಾರ್ ರೆಡ್ಡಿ ಮತ್ತು ಮಯಾಂಕ್ ಯಾದವ್ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದರು. ಇದರೊಂದಿಗೆ ಅವರು ಅನ್ಕ್ಯಾಪ್ಡ್ ಆಟಗಾರ ಎಂಬ ಟ್ಯಾಗ್ ಅನ್ನು ಕಳೆದುಕೊಂಡಿದ್ದಾರೆ. ಫ್ರಾಂಚೈಸಿಗಳು ಅವರನ್ನು 4 ಕೋಟಿ ರೂ.ಗಳೊಂದಿಗೆ ಉಳಿಸಿಕೊಳ್ಳುವ ಅವಕಾಶವನ್ನು ಹೊಂದಿಲ್ಲ. ಒಂದು ವೇಳೆ ಉಳಿಸಿಕೊಳ್ಳಬೇಕಾದಲ್ಲಿ ಕನಿಷ್ಠ 11 ಕೋಟಿ ರೂ. ನೀಡಬೇಕಿದೆ. ಹೀಗಾಗಿ ಫ್ರಾಂಚೈಸಿಗಳಿಗೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಇದೆ. ಈ ಭಾರತೀಯ ಆಟಗಾರರನ್ನು ಫ್ರಾಂಚೈಸಿಗಳು ಖರೀದಿಸುತ್ತವೆಯೇ ಎಂಬುದನ್ನು ಇದೀಗ ಕಾದು ನೋಡಬೇಕಿದೆ.
ರಿಯಾನ್ ಪರಾಗ್ (ರಾಜಸ್ಥಾನ ರಾಯಲ್ಸ್), ತುಷಾರ್ ದೇಶಪಾಂಡೆ (ಚೆನ್ನೈ ಸೂಪರ್ ಕಿಂಗ್ಸ್), ಸಾಯಿ ಸುದರ್ಶನ್ (ಗುಜರಾತ್ ಟೈಟಾನ್ಸ್), ಅಭಿಷೇಕ್ ಶರ್ಮ (ಸನ್ ರೈಸರ್ಸ್ ಹೈದರಾಬಾದ್), ನಿತೀಶ್ ಕುಮಾರ್ ರೆಡ್ಡಿ (ಸನ್ ರೈಸರ್ಸ್ ಹೈದರಾಬಾದ್) ಹಾಗೂ ಮಯಾಂಕ್ ಯಾದವ್ (ಲಖನೌ ಸೂಪರ್ ಜೈಂಟ್ಸ್) ಆಡುತ್ತಿರುವುದು ಗೊತ್ತೇ ಇದೆ.
ಐಪಿಎಲ್ 2024ರಲ್ಲಿ ರಿಯಾನ್, ಅಭಿಷೇಕ್, ನಿತೀಶ್ ಮತ್ತು ತುಷಾರ್ ಉತ್ತಮ ಪ್ರದರ್ಶನ ನೀಡಿದ್ದಾರೆ. ಮಯಾಂಕ್ ಯಾದವ್ ಗಾಯಗೊಂಡು ಕೇವಲ ನಾಲ್ಕು ಪಂದ್ಯಗಳನ್ನು ಆಡಿದ್ದರೂ 7 ವಿಕೆಟ್ ಪಡೆದು ಮಿಂಚಿದರು. ಅವರು ಈ ಬಾರಿ ಭಾರಿ ಬೆಲೆಗೆ ಬಿಕರಿಯಾಗುವ ಸಾಧ್ಯತೆ ಇದೆ.
ಐಪಿಎಲ್ 18ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಮುನ್ನ ಪ್ರತಿ ತಂಡ ಗರಿಷ್ಠ ಐವರು ಆಟಗಾರರನ್ನು ರಿಟೇನ್ ಮಾಡಿಕೊಳ್ಳುವ ಅವಕಾಶ ನೀಡಲು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಐಪಿಎಲ್ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಕಳೆದ ಜುಲೈನಲ್ಲಿ ನಡೆದ ಸಭೆಯಲ್ಲಿ ಐಪಿಎಲ್ ತಂಡಗಳ ಮಾಲೀಕರು ನೀಡಿದ ಸಲಹೆಗಳ ಆಧಾರದಲ್ಲಿ 5 ಆಟಗಾರರ ರಿಟೇನ್ ಜತೆಗೆ ಹರಾಜಿನಲ್ಲಿ ಒಂದು ರೈಟ್ ಟು ಮ್ಯಾಚ್ (ಆರ್ಟಿಎಂ) ಕಾರ್ಡ್ ಬಳಕೆಗೂ ಅವಕಾಶ ನೀಡಲಾಗುತ್ತದೆ. ಐವರು ಆಟಗಾರರ ರಿಟೇನ್ ವೇಳೆ ಇಂತಿಷ್ಟೇ ಭಾರತೀಯ ಅಥವಾ ವಿದೇಶಿ ಆಟಗಾರರು ಇರಬೇಕೆಂಬ ನಿರ್ಬಂಧವನ್ನೂ ಹೇರಲಾಗಿಲ್ಲ.
ಪ್ರತಿ ತಂಡಗಳ ಬಜೆಟ್ ಮಿತಿ 120 ಕೋಟಿ ರೂ.ಗೆ ಏರಿಸಲಾಗಿದೆ. ಆದರೆ ಗರಿಷ್ಠ 5 ಆಟಗಾರರನ್ನು ರಿಟೇನ್ ಮಾಡಿದರೆ ಒಟ್ಟು 75 ಕೋಟಿ ರೂ. ವ್ಯಯಿಸಬೇಕಾಗುತ್ತದೆ. ಯಾಕೆಂದರೆ 5 ಆಟಗಾರರ ರಿಟೇನ್ಗೆ ಕ್ರಮವಾಗಿ 18, 14, 11, 18, 14 ಕೋಟಿ ರೂ. ನೀಡಬೇಕಾಗುತ್ತದೆ. ಇನ್ನು 3 ಆಟಗಾರರನ್ನಷ್ಟೇ ರಿಟೇನ್ ಮಾಡಿದರೆ, ಹರಾಜಿನಲ್ಲಿ 3 ಆರ್ಟಿಎಂ ಬಳಸಬಹುದಾಗಿದೆ. 4 ಆಟಗಾರರ ರಿಟೇನ್ ಮಾಡಿದರೆ 2 ಆರ್ಟಿಎಂ ಬಳಸಬಹುದು. ಆರ್ಟಿಎಂ ಪ್ರಕಾರ ಹರಾಜಿನಲ್ಲಿ ಆಟಗಾರನೊಬ್ಬನಿಗೆ ತಂಡವೊಂದು ಗರಿಷ್ಠ ಮೊತ್ತದ ಬಿಡ್ ಸಲ್ಲಿಸಿದಾಗ ಆತನ ಮೂಲ ತಂಡ ಆರ್ಟಿಎಂ ಮೂಲಕ ಅದೇ ಮೊತ್ತಕ್ಕೆ ತನ್ನಲ್ಲಿಯೇ ಉಳಿಸಿಕೊಳ್ಳಬಹುದಾಗಿದೆ.
5+1 ಆಟಗಾರರ ರಿಟೇನ್ಗೆ ಬಿಸಿಸಿಐ ಅವಕಾಶ ಕಲ್ಪಿಸಿರುವುದರಿಂದ, ಇದು ಐಪಿಎಲ್ ಇತಿಹಾಸದಲ್ಲೇ ಗರಿಷ್ಠ ಆಟಗಾರರ ರಿಟೇನ್ ಅವಕಾಶವಾಗಿದೆ. 2018ರ ಮೆಗಾ ಹರಾಜಿಗೆ ಮುನ್ನ 5 ಆಟಗಾರರ ರಿಟೇನ್ಗೆ ಅವಕಾಶ ನೀಡಿದ್ದು ಇದುವರೆಗಿನ ಗರಿಷ್ಠವಾಗಿತ್ತು. ಆಟಗಾರರ ಹರಾಜು ಪ್ರಕ್ರಿಯೆ ನವೆಂಬರ್ 2ನೇ ವಾರ ನಡೆಯುವ ನಿರೀಕ್ಷೆ ಇದೆ. (ಏಜೆನ್ಸೀಸ್)