IPL 2024: ಭಾರತದಲ್ಲಿ ಐಪಿಎಲ್ ನಡೆಯುವುದು ಬಹುತೇಕ ಡೌಟ್? ಈ ಬಗ್ಗೆ ಅಧ್ಯಕ್ಷರು ಹೇಳಿದ್ದಿಷ್ಟು

Untitled design - 2024-02-17T193817.173
Published on

ಮುಂಬೈ: ಕ್ರಿಕೆಟ್ ಲೋಕದಲ್ಲಿ ಅದರಲ್ಲೂ ಟಿ-20 ಪಂದ್ಯಗಳನ್ನು ನೋಡುವ ಹಾಗೂ ಹುಚ್ಚೆದ್ದು ಪ್ರೋತ್ಸಾಹಿಸುವ ದೊಡ್ಡ ಅಭಿಮಾನಿಗಳನ್ನು ಹೊಂದಿರುವ ಲೀಗ್ ಯಾವುದಾದರೂ ಇದೆ ಎಂದಾದರೆ ಅದು ಕೇವಲ ಭಾರತದಲ್ಲಿ ನಡೆಯುವ ಇಂಡಿಯನ್ ಪ್ರೀಮಿಯರ್​ ಲೀಗ್ ಮಾತ್ರ. ಹೌದು, ಕ್ರಿಕೆಟ್​ ಫ್ಯಾನ್ಸ್​ಗಳ ನೆಚ್ಚಿನ-ಅಚ್ಚುಮೆಚ್ಚಿನ ಲೀಗ್ ಇದಾಗಿದೆ. ಬಹಳ ಇಷ್ಟಪಟ್ಟು, ಸಮಯ ಮೀಸಲಿಟ್ಟು, ಬೆಂಬಲಿಸುವ ತಂಡ ಈ ಬಾರಿಯ ಆವೃತ್ತಿಯನ್ನು ಗೆದ್ದು, ಐಪಿಎಲ್ ಪಟ್ಟವನ್ನು ಅಲಂಕರಿಸಲೇಬೇಕು ಎಂಬುದು ಪ್ರತಿ ತಂಡದ ಅಭಿಮಾನಿಗಳ ಮಹದಾಸೆ.

ಪ್ರತ್ಯೇಕವಾಗಿ ಭಾರತದಲ್ಲಿ ನಡೆಯುವ ಐಪಿಎಲ್ ಸೀಸನ್​ಗೆ ಅಪಾರ ವೀಕ್ಷಕರಿದ್ದು, ಜಾಗತಿಕ ಮಟ್ಟದಲ್ಲಿ ಇಲ್ಲಿನ ತಂಡಗಳಿಗೆ ಅಭಿಮಾನಿಗಳ ಬಳಗವಿದೆ. ಪ್ರತಿವರ್ಷ ಇಂಡಿಯಾದಲ್ಲಿ ನೆಡೆಯುವ ಐಪಿಎಲ್ ಆವೃತ್ತಿಗಾಗಿ ಕಾತರ ವ್ಯಕ್ತಪಡಿಸುವಂತೆ, 2024ರ ಸೀಸನ್​ಗೂ ಕಾಯುತ್ತಿರುವ ಫ್ಯಾನ್ಸ್​ಗೆ ಇದೀಗ ಬೇಸರದ ಸುದ್ದಿಯೊಂದು ಎದುರಾಗಿದೆ.

ಐಪಿಎಲ್ 2024ರ ಸೀಸನ್​ಗೆ ಆಟಗಾರರ ಹರಾಜು ಪ್ರಕ್ರಿಯೆ ನಡೆದ ನಂತರ ಕ್ರಿಕೆಟ್​ ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಿತು. ಇದರ ಬೆನ್ನಲ್ಲೇ ಗುಜರಾತ್ ಟೈಟನ್ಸ್​ ತಂಡ ತೊರೆದು ಮುಂಬೈ ಇಂಡಿಯನ್ಸ್​ ಟೀಮ್​ ನಾಯಕನಾಗಿ ಮರಳಿ ಬಂದ ಹಾರ್ದಿಕ್ ಪಾಂಡ್ಯ ಐಪಿಎಲ್ ಅಭಿಮಾನಿಗಳಿಗೆ ದೊಡ್ಡ ಶಾಕ್ ನೀಡಿದರು. ಈ ವಿಚಾರ ಹಾರ್ದಿಕ್ ಮತ್ತು ರೋಹಿತ್ ಹಾಗೂ ಎಂಐ ತಂಡದ ಮಧ್ಯೆ ದೊಡ್ಡ ಬಿರುಕು ಮೂಡಿಸಿದೆ ಎಂದೆಲ್ಲಾ ಹೇಳಲಾಯಿತು. ಸದ್ಯ ಈ ಸುದ್ದಿಗಳ ಮಧ್ಯೆ ಇದೀಗ ಐಪಿಎಲ್ ಪಂದ್ಯಗಳು ನಮ್ಮ ರಾಷ್ಟ್ರದಲ್ಲಿ ನಡೆಯುವುದು ಕೊಂಚ ಕಷ್ಟ ಎಂದು ವರದಿಯಾಗಿದೆ. ಈ ಬಗ್ಗೆ ಸ್ವತಃ ಐಪಿಎಲ್ ಅಧ್ಯಕ್ಷರು ಪ್ರತಿಕ್ರಿಯಿಸಿದ್ದಾರೆ.

ಐಪಿಎಲ್ ಅಧ್ಯಕ್ಷರಾದ ಅರುಣ್ ಧಾಮಲ್ ಮಾತನಾಡಿ, "ಈ ಸೀಸನ್​ನ ಪಂದ್ಯಗಳು ಭಾರತದಲ್ಲೇ ನಡೆಯುವುದರ ಬಗ್ಗೆ ಸರ್ಕಾರದೊಂದಿಗೆ ಹಾಗೂ ಏಜೆನ್ಸಿ ಜತೆಗೆ ಮಾತುಕತೆ ನಡೆಯುತ್ತಿವೆ. ಪಂದ್ಯಗಳು ಭಾರತದಲ್ಲೇ ನಡೆಯಬೇಕೋ ಅಥವಾ ಮುಂದೇನು ಎಂಬುದರ ಕುರಿತು ನಾವು ಸರ್ಕಾರ ಮತ್ತು ಏಜೆನ್ಸಿಯೊಟ್ಟಿಗೆ ಚರ್ಚೆಯಲ್ಲಿದ್ದೇವೆ. ಚುನಾವಣೆಯ ವೇಳಾಪಟ್ಟಿಗೆ ಕಾಯುತ್ತಿದ್ದು, ಅದು ಹೊರಬಿದ್ದ ಕೂಡಲೇ ಅದರ ಅನುಗುಣವಾಗಿ ನಾವು ಯೋಜಿಸುತ್ತೇವೆ" ಎಂದರು.

"ಚುನಾವಣೆ ನಡೆಯುವ ವೇಳೆ ಯಾವ ರಾಜ್ಯ ಪಂದ್ಯಗಳನ್ನು ಆಡಿಸಲಿದೆ ಎಂಬುದನ್ನು ನಿರ್ಧರಿಸುತ್ತೇವೆ. ಇದೇ ಮಾರ್ಚ್​ ತಿಂಗಳ ಕಡೆಯ ವಾರದಲ್ಲಿ ಐಪಿಎಲ್ ಶುರುವಾಗಲಿದ್ದು, ಚುನಾವಣೆ ಏಪ್ರಿಲ್​ನಲ್ಲಿ ಸಂಭವಿಸಲಿದೆ. ಹಾಗಾಗಿ, ಆದಷ್ಟು ಸರ್ಕಾರದೊಂದಿಗೆ ಮಾತನಾಡಿ ಈ ಗೊಂದಲಗಳನ್ನು ಪರಿಹರಿಸುತ್ತೇವೆ" ಎಂದಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net