

ಹೈದರಾಬಾದ್: ಟೂರ್ನಿಯಲ್ಲಿ ಗರಿಷ್ಠ ಮೊತ್ತ ದಾಖಲಿಸಿದರೂ, ಚೇಸಿಂಗ್‌ನಲ್ಲಿ ಎಡವುತ್ತಿರುವ ಆತಿಥೇಯ ಸನ್‌ರೈಸರ್ಸ್ ಹೈದರಾಬಾದ್ ತಂಡ ಜಯದ ಹಳಿಗೇರುವ ತವಕದಲ್ಲಿದೆ. 17ನೇ ಆವೃತ್ತಿಯ ಐಪಿಎಲ್ 50ನೇ ಮಹತ್ವದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಸನ್‌ರೈಸರ್ಸ್ ಹೈದರಾಬಾದ್ ನಾಯಕ ಕಮಿನ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ. ಸಂಜು ಸ್ಯಾಮ್ಸನ್ ಪಡೆ ಇನ್ನೊಂದು ಗೆಲುವಿನೊಂದಿಗೆ ಪ್ಲೇಆಪ್ ಸ್ಥಾನ ಅಧಿಕೃತಗೊಳಿಸುವ ಗುರಿ ಹೊಂದಿದೆ.
ಉಭಯ ತಂಡಗಳ ನಡುವಿನ ಜಿದ್ದಾಜಿದ್ದಿನ ಕದನಕ್ಕೆ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣ ವೇದಿಕೆ ವಹಿಸಲಿದೆ. ಸಂಜು ಸ್ಯಾಮ್ಸನ್ ನಾಯಕತ್ವದ ತಂಡವು ಈ ಪಂದ್ಯದಲ್ಲಿ ಗೆದ್ದರೆ, ಅಧಿಕೃತವಾಗಿ ಪ್ಲೇಆಫ್ ಪ್ರವೇಶಿಸಲಿದೆ.
ಸತತ 4 ಪಂದ್ಯಗಳಲ್ಲಿ ಗೆದ್ದು ಬೀಗುತ್ತಿರುವ ರಾಜಸ್ಥಾನ ರಾಯಲ್ಸ್ ಇದುವರೆಗೆ ಆಡಿರುವ 9 ಪಂದ್ಯಗಳಲ್ಲಿ 8 ಗೆಲುವು, 1ರಲ್ಲಿ ಸೋತು 16 ಅಂಕ ಕಲೆಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಭದ್ರಪಡಿಸಿಕೊಂಡಿದೆ. ಸತತ 2 ಸೋಲಿನ ಬಳಿಕ ಅಗ್ರ 4ರಿಂದ ಹೊರಬಿದ್ದಿರುವ ಸನ್‌ರೈಸರ್ಸ್ ಹೈದರಾಬಾದ್, ಆಡಿರುವ 9 ಪಂದ್ಯಗಳಲ್ಲಿ 5 ಗೆಲುವು, 4 ಸೋಲಿನೊಂದಿಗೆ 10 ಅಂಕ ಹೊಂದಿದೆ.