ಐಪಿಎಲ್​ ಆಯೋಜನೆಗೆ ಅರಬ್​ ದೇಶವನ್ನು ಬಿಸಿಸಿಐ ಆಯ್ಕೆ ಮಾಡಿಕೊಂಡಿದ್ದು ಯಾಕೆ ಗೊತ್ತೇ?

ipl 2020
Published on

ಬೆಂಗಳೂರು: ಕರೊನಾ ಹಾವಳಿಯ ನಡುವೆ ಐಪಿಎಲ್​ ಆಯೋಜನೆಗಾಗಿ ಬಿಸಿಸಿಐ ಅರಬ್​ ರಾಷ್ಟ್ರ ಯುಎಇಯನ್ನು ಆಯ್ಕೆ ಮಾಡಿಕೊಂಡಿದೆ. ಯುಎಇಯಲ್ಲಿ ಸೆಪ್ಟೆಂಬರ್​ 19ರಂದು ಐಪಿಎಲ್​ ಟೂರ್ನಿ ಆರಂಭಗೊಳ್ಳಲಿದೆ ಮತ್ತು ನವೆಂಬರ್​ 8 ಅಥವಾ 10ರಂದು ಫೈನಲ್​ ಪಂದ್ಯ ನಡೆಯಲಿದೆ ಎಂದು ಐಪಿಎಲ್​ ಚೇರ್ಮನ್​ ಬ್ರಿಜೇಶ್​ ಪಟೇಲ್​ ಶುಕ್ರವಾರ ಖಚಿತಪಡಿಸಿದ್ದಾರೆ. ಹಾಗಾದರೆ, ಕರೊನಾ ಭೀತಿಯ ನಡುವೆ ಶ್ರೀಮಂತ ಟಿ20 ಟೂರ್ನಿಯ ಆಯೋಜನೆಗಾಗಿ ಬಿಸಿಸಿಐ, ಅರಬ್​ ದೇಶವನ್ನು ಆಯ್ಕೆ ಮಾಡಿಕೊಂಡಿದ್ದು ಯಾಕೆ ಗೊತ್ತೇ? ಅದಕ್ಕೆ ಸಂಕ್ಷಿಪ್ತವಾದ ವಿವರಗಳು ಇಲ್ಲಿವೆ.

*ಯುಎಇಯಲ್ಲಿ 3 ಸುಸಜ್ಜಿತ ಕ್ರಿಕೆಟ್​ ಮೈದಾನಗಳಿವೆ. ದುಬೈನಲ್ಲಿ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ, ಅಬುಧಾಬಿಯಲ್ಲಿ ಶೇಕ್​ ಜಯೆದ್​ ಸ್ಟೇಡಿಯಂ ಮತ್ತು ಶಾರ್ಜಾದಲ್ಲಿ ಶಾರ್ಜಾ ಗ್ರೌಂಡ್​ ಇದೆ. ಇದಲ್ಲದೆ ಈ 3 ಮೈದಾನ ಅಥವಾ ನಗರಗಳ ನಡುವೆ ಹೆಚ್ಚಿನ ಅಂತರವಿಲ್ಲ.

*ದುಬೈನ ಹಾಲಿ ನಿಯಮಾವಳಿ ಪ್ರಕಾರ ಅಲ್ಲಿ, ಕೋವಿಡ್​-19 ಪರೀಕ್ಷೆಯ ನೆಗೆಟಿವ್​ ವರದಿ ಹೊಂದಿರುವ ವಿದೇಶಿ ಪ್ರವಾಸಿಗರು ಕ್ವಾರಂಟೈನ್​ಗೆ ಒಳಪಡುವ ಅಗತ್ಯವಿಲ್ಲ. ಕ್ರಿಕೆಟಿಗರು ಭಾರತದಲ್ಲೇ ಕರೊನಾ ಪರೀಕ್ಷೆಗೆ ಒಳಪಟ್ಟು ಯುಎಇಗೆ ತೆರಳುವ ಕಾರಣ ಕ್ವಾರಂಟೈನ್​ ತೊಂದರೆ ಇರುವುದಿಲ್ಲ.

*ಶ್ರೀಲಂಕಾದಿಂದಲೂ ಐಪಿಎಲ್​ ಆತಿಥ್ಯಕ್ಕೆ ಆಹ್ವಾನ ಬಂದಿದ್ದರೂ, ಯುಎಇಗೆ ಈ ಹಿಂದೆ ಐಪಿಎಲ್​ ಆತಿಥ್ಯ ವಹಿಸಿದ ಅನುಭವವಿದೆ. 2014ರ ಐಪಿಎಲ್​ ಟೂರ್ನಿಯ ಮೊದಲ 20 ಪಂದ್ಯಗಳು ಯುಎಇಯಲ್ಲೇ ನಡೆದಿದ್ದವು.

*ಯುಎಇಗೆ ವಿಮಾನ ಪ್ರಯಾಣ ಸುಲಭವಾಗಿದೆ. ವಿದೇಶಿ ಆಟಗಾರರು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರವಾಗಿ ಬಂದಿಳಿಯಲು ಅವಕಾಶವಿದೆ. ಅಲ್ಲಿನ ಎಮಿರೇಟ್​​ ಏರ್​ಲೈನ್ಸ್​ ಮತ್ತು ಇತಿಹಾದ್​ ಏರ್​ವೇಸ್​ಗಳು ಈಗಾಗಲೆ ದೈನಂದಿನ ಪ್ರಯಾಣಗಳನ್ನು ಆರಂಭಿಸಿವೆ.

*ದುಬೈನಲ್ಲಿ ಐಸಿಸಿ ಅಕಾಡೆಮಿ ಕೂಡ ಇರುವುದರಿಂದ ಅಲ್ಲಿ ಎಲ್ಲ 8 ತಂಡಗಳಿಗೆ ಅಭ್ಯಾಸ ನಡೆಸಲು ಬೇಕಾಗುವಷ್ಟು ಪಿಚ್​ ವ್ಯವಸ್ಥೆಗಳಿವೆ. ಬಿಸಿಲಿನ ಭಯವಿದ್ದರೆ ಒಳಾಂಗಣದಲ್ಲೂ ಅಭ್ಯಾಸ ನಡೆಸಬಹುದಾಗಿದೆ.

*ಯುಎಇಯಲ್ಲಿ 57,988 ಕರೊನಾ ಪ್ರಕರಣ ದಾಖಲಾಗಿದ್ದು, 342 ಮಂದಿ ಮೃತಪಟ್ಟಿದ್ದಾರೆ ಮತ್ತು 50,848 ಸಾವಿರ ಮಂದಿ ಗುಣಮುಖರಾಗಿದ್ದಾರೆ. 7 ಸಾವಿರದಷ್ಟು ಸಕ್ರಿಯ ಪ್ರಕರಣಗಳಿದ್ದರೂ, ಯುಎಇಯಲ್ಲಿ ಸದ್ಯ ಕರೊನಾ ನಿಯಂತ್ರಣದಲ್ಲಿದೆ.

*ಕರೊನಾ ನಿಯಂತ್ರಣದಲ್ಲಿರುವ ಕಾರಣ ಕ್ರೀಡಾಂಗಣಕ್ಕೆ ಪ್ರೇಕ್ಷಕರಿಗೆ ಅವಕಾಶ ನೀಡುವ ಸಾಧ್ಯತೆಯೂ ಇದೆ. ಇದು ಫ್ರಾಂಚೈಸಿಗಳಿಗೆ ಟಿಕೆಟ್​ ಮಾರಾಟದ ಆದಾಯದಿಂದ ಹೆಚ್ಚಿನ ನಷ್ಟವಾಗದಂತೆ ತಪ್ಪಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net