

ದುಬೈ: ಇಂದು (ಅ.25) ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 8 ವಿಕೆಟ್ಗಳ ಭರ್ಜರಿ ಜಯ ದಾಖಲಿಸಿದೆ. ಇದರ ಬೆನ್ನಲ್ಲೇ ಸಿಎಸ್ಕೆ ಕ್ಯಾಪ್ಟನ್ ಎಂ.ಎಸ್. ಧೋನಿ ಅವರನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದಾರೆ. ಅದಕ್ಕೆ ಕಾರಣ ಧೋನಿ ಅವರು ಈ ಹಿಂದೆ ನೀಡಿದ್ದ ಒಂದು ಹೇಳಿಕೆ.
ಈ ಹಿಂದೆ ರಾಜಸ್ಥಾನ ವಿರುದ್ಧ ಸಿಎಸ್ಕೆ ಹೀನಾಯ ಸೋಲು ಕಂಡಿತ್ತು. ಪಂದ್ಯದ ಬೆನ್ನಲ್ಲೇ ಮಾತನಾಡಿದ್ದ ಧೋನಿ, ಈ ಸೀಸನ್ನಲ್ಲಿ ಕೆಲ ಯುವ ಕ್ರಿಕೆಟಿಗರಲ್ಲಿ ನಾವು ತುಡಿತ ಕಾಣಲಿಲ್ಲ. ಅವರ ಆಟದಲ್ಲಿ ಯಾವುದೇ ಸ್ಪಾರ್ಕ್ ಇರಲಿಲ್ಲ ಎಂದು ಯುವ ಕ್ರಿಕೆಟಿಗರನ್ನು ಅಣುಕಿಸಿದ್ದರು.
ಧೋನಿಯ ಮಾತನ್ನು ನೆನಪಿನಲ್ಲಿಟ್ಟುಕೊಂಡಿದ್ದ ಅಭಿಮಾನಿಗಳು ಇಂದು ಆರ್ಸಿಬಿ ವಿರುದ್ಧ ಪಂದ್ಯ ಗೆಲ್ಲುತ್ತಲೇ ಟ್ರೋಲ್ ಮಾಡಿದ್ದಾರೆ. ಇಂದಿನ ಪಂದ್ಯದಲ್ಲಿ ಯುವ ಕ್ರಿಕೆಟಿಗ ರುತುರಾಜ್ ಗಾಯ್ಕ್ವಾಡ್ ಅದ್ಭುತ ಬ್ಯಾಟಿಂಗ್ ಮಾಡಿದರು. ಕೇವಲ 51 ಎಸೆತದಲ್ಲಿ 3 ಸಿಕ್ಸರ್, 4 ಬೌಂಡರಿ ನೆರವಿನಿಂದ ಅಜೇಯ 65 ರನ್ ಕಲೆಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, ಯುವಕರಲ್ಲಿ ಕ್ರಿಕೆಟ್ ಸ್ಪಾರ್ಕ್ ಇದೆ ಎಂಬುದನ್ನು ನಿರೂಪಿಸಿದರು. ವಿಶೇಷವೆಂದರೆ ರುತುರಾಜ್ ಅವರಿಗೆ ಐಪಿಎಲ್ನ ಮೊದಲನೇ ಅರ್ಧಶತಕ ಇದಾಗಿದೆ.
ಪಂದ್ಯದ ಬೆನ್ನಲ್ಲೇ ವಿವಿಧ ಮೀಮ್ಸ್ಗಳನ್ನು ಹರಿಬಿಟ್ಟು ಅಭಿಮಾನಿಗಳು ಧೋನಿ ಕಾಲೆಳೆದಿದ್ದಾರೆ. ಇದು ಸ್ಪಾರ್ಕ್ ಅಂದ್ರೆ ಎಂದು ಧೋನಿಯನ್ನು ಕಿಚಾಯಿಸಿದ್ದಾರೆ. ಯುವ ಕ್ರಿಕೆಟಿಗರಿಗೆ ಅವಕಾಶ ನೀಡಬೇಕೆಂಬುದನ್ನು ರುತುರಾಜ್ ನಿರೂಪಿಸಿಬಿಟ್ಟರು. ಸ್ಪಾರ್ಕ್ ಏನೆಂಬುದನ್ನು ರುತುರಾಜ್, ಧೋನಿಗೆ ತೋರಿಸಿಕೊಟ್ಟರು. ಇನ್ನಾದರೂ ಯುವಕರಿಗೆ ಅವಕಾಶ ನೀಡಿ ಅವಮಾನದಿಂದ ಪಾರಾಗಿ ಎಂದು ಹಿಗ್ಗಾಮುಗ್ಗಾ ಧೋನಿಯನ್ನು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಅಚ್ಚರಿಯೆಂದರೆ ಸ್ಪಾರ್ಕ್ (Spark) ಎಂಬ ಪದ ಟ್ವಿಟರ್ನಲ್ಲಿ ಟ್ರೆಂಡ್ ಸೃಷ್ಟಿ ಮಾಡಿದೆ. ಯುವ ಕ್ರಿಕೆಟಿಗರ ಬಗ್ಗೆ ಕಮೆಂಟ್ ಮಾಡಿದ ಧೋನಿಗೆ ಇದೀಗ ಮುಖಭಂಗ ಅನುಭವಿಸುವಂತಾಗಿದೆ.
ಈ ಮೊದಲು ಧೋನಿ ಹೇಳಿಕೆಗೆ ಅಭಿಮಾನಿಗಳು ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿ, ಧೋನಿ ಹೇಳಿಕೆಯಿಂದ ನಿಜಕ್ಕೂ ಬೇಸರವಾಗಿದೆ. ಯುವಕರಿಗೆ ಅವಕಾಶವನ್ನು ನೀಡದೆ ಅವರಲ್ಲಿ ಯಾವುದೇ ತುಡಿತವಿಲ್ಲ ಎನ್ನುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನಿಸಿದ್ದರು. ಜಡೇಜಾ ರನ್ ಕದಿಯುವಲ್ಲಿ ತುಂಬಾ ಕಷ್ಟಪಡುತ್ತಿದ್ದಾರೆ. ಜಾಧವ್ ಈ ಸೀಸನ್ನಲ್ಲಿ ನಿರಂತರ ವೈಫಲ್ಯ ಅನುಭವಿಸುತ್ತಿದ್ದಾರೆ. ಆದರೆ, ಇವರಿಗೆ ಮತ್ತೆ ಮತ್ತೆ ಅವಕಾಶ ನೀಡಲಾಗುತ್ತಿದೆ. ಇಂತವರನ್ನು ಪಕ್ಕಕ್ಕೆ ಇಟ್ಟು ಯುವಕರಿಗೆ ಅವಕಾಶ ಕೊಟ್ಟು ನೋಡಿ. ಆ ಬಳಿಕ ಯುವಕರಲ್ಲಿ ಸ್ಪಾರ್ಕ್ ಇದೆಯೋ? ಇಲ್ಲವೋ ನೋಡಿ ಎಂದು ಅಭಿಮಾನಿಗಳು ಕಿಡಿಕಾರಿದ್ದರು.
ಟೀಮ್ ಇಂಡಿಯಾದ ಮಾಜಿ ನಾಯಕ ಕ್ರಿಸ್ ಶ್ರೀಕಾಂತ್ ಸಹ ಆಕ್ರೋಶ ಹೊರಹಾಕಿದ್ದರು. ಧೋನಿ ಓರ್ವ ಅತ್ಯುತ್ತಮ ಕ್ರಿಕೆಟಿಗ ಎಂಬುದರಲ್ಲಿ ಸಂಶಯವೇ ಇಲ್ಲ. ಆದರೆ, ರಾಜಸ್ಥಾನ ರಾಯಲ್ಸ್ ವಿರುದ್ಧ ಸೋತ ಬಳಿಕ ಆಡಿದ ಮಾತುಗಳನ್ನು ಒಪ್ಪಲಾಗದು. ಕೇದರ್ ಜಾಧವ್ ನಿರಂತರ ವೈಫಲ್ಯ ಕಾಣುತ್ತಿದ್ದಾರೆ. 8 ಪಂದ್ಯಗಳಿಂದ ಕೇವಲ 62 ರನ್ಗಳನ್ನು ಮಾತ್ರ ಗಳಿಸಿದ್ದಾರೆ. 24 ವರ್ಷದ ಎನ್ ಜಗದೀಶನ್ಗೆ ಆರ್ಸಿಬಿ ವಿರುದ್ಧ ಒಂದು ಅವಕಾಶ ನೀಡಲಾಯಿತು. ಮೊದಲ ಪಂದ್ಯದಲ್ಲೇ 28 ಎಸೆತದಲ್ಲಿ 33 ರನ್ ಗಳಿಸಿದ್ದರು. ಅವರಿಗೆ ಈ ಪಂದ್ಯದಲ್ಲೂ ಅವಕಾಶ ನೀಡಬಹುದಾಗಿತ್ತು. ಯುವಕರಲ್ಲಿ ತುಡಿತ ಇಲ್ಲ ಎನ್ನುತ್ತೀರಿ, ಹಾಗಾದರೆ ಜಾಧವ್ರಲ್ಲಿ ತುಡಿತವಿದೆಯೇ? ಪಿಯುಷ್ ಚಾವ್ಲಾರಲ್ಲಿ ಇದೆಯಾ? ಧೋನಿ ಮಾತು ಇದೆಲ್ಲ ಹಾಸ್ಯಸ್ಪದವಾಗಿದ್ದು, ಅವರು ನೀಡಿದ ಹೇಳಿಕೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈಗಲಾದರೂ ಯುವಕರಿಗೆ ಅವಕಾಶ ನೀಡಿ ಎಂದಿದ್ದರು.
ಪಂದ್ಯದ ವಿಚಾರಕ್ಕೆ ಬಂದರೆ ಇಂದಿನ ಪಂದ್ಯದಲ್ಲಿ ಆರ್ಸಿಬಿ ನೀಡಿದ್ದ 146ರನ್ ಗುರಿ ಬೆನ್ನತ್ತಿದ ಸಿಎಸ್ಕೆ ರುತುರಾಜ್ ಗಾಯ್ಕ್ವಾಡ್ (65), ಅಂಬಾಟಿ ರಾಯುಡು (39), ಫಾಫ್ ಡುಪ್ಲೆಸಿಸ್ (25) ಮತ್ತು ನಾಯಕ ಎಂ ಎಸ್ ಧೋನಿ (19*) ಅಮೋಘ ಬ್ಯಾಟಿಂಗ್ ನೆರವಿನಿಂದ 18.4 ಓವರ್ನಲ್ಲಿ 2 ವಿಕೆಟ್ ನಷ್ಟಕ್ಕೆ 150 ರನ್ ಕಲೆ ಹಾಕುವ ಮೂಲಕ ಗೆಲುವಿನ ನಗೆಬೀರಿದೆ. (ಏಜೆನ್ಸೀಸ್)