

ನವದೆಹಲಿ: ಕೋವಿಡ್‌ನಿಂದಾಗಿ ಮುಂದೂಡಿಕೆಯಾಗಿರುವ 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಸೆಪ್ಟೆಂಬರ್ 19ರಂದು ಪುನರಾರಂಭಗೊಳ್ಳಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಪ್ರಶಸ್ತಿ ಸುತ್ತಿನ ಕಾದಾಟ ಅಕ್ಟೋಬರ್ 15 ರಂದು ನಡೆಯಲಿದೆ ಎಂದೂ ವರದಿಯಾಗಿದೆ. ಆದರೆ ಸದ್ಯದ ವೇಳಾಪಟ್ಟಿ ಪ್ರಕಾರ, ಟಿ20 ವಿಶ್ವಕಪ್ ಅಕ್ಟೋಬರ್ 18ರಂದು ಭಾರತದಲ್ಲಿ ಆರಂಭಗೊಳ್ಳಬೇಕಾಗಿದೆ. ಐಸಿಸಿ ನಿಯಮ ಪ್ರಕಾರ, ಅದರ ಯಾವುದೇ ಪ್ರಮುಖ ಟೂರ್ನಿಗೆ 7 ದಿನ ಮುನ್ನ ಯಾವುದೇ ಪ್ರಮುಖ ಟೂರ್ನಿ ನಡೆಯುವಂತಿಲ್ಲ. ಹೀಗಾಗಿ ಐಪಿಎಲ್‌ಗಾಗಿ ಟಿ20 ವಿಶ್ವಕಪ್ ವೇಳಾಪಟ್ಟಿಯೂ ಬದಲಾಗಲಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಇದನ್ನೂ ಓದಿ: ಟೀಮ್ ಇಂಡಿಯಾದ ಶ್ರೀಲಂಕಾ ಪ್ರವಾಸ ವೇಳಾಪಟ್ಟಿ ಪ್ರಕಟ
ಐಪಿಎಲ್‌ನ ಎರಡನೇ ಭಾಗವನ್ನು ಯುಎಇಯಲ್ಲಿ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದ್ದು, ಉಳಿದ 31 ಪಂದ್ಯಗಳಿಗೆ ಅರಬ್‌ನಗರ ವೇದಿಕೆಯಾಗಲಿದೆ. ಬಿಸಿಸಿಐ ಹಾಗೂ ಎಮಿರೇಟ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ನಡುವೆ ಇತ್ತೀಚೆಗೆ ನಡೆದ ಸಭೆಯಲ್ಲಿ ವೇಳಾಪಟ್ಟಿ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ದುಬೈ, ಶಾರ್ಜಾ ಹಾಗೂ ಅಬಿಧಾಬಿಯಲ್ಲಿ ಪಂದ್ಯಗಳು ನಡೆಯಲಿವೆ. ಇತ್ತೀಚೆಗೆ ನಡೆದ ಬಿಸಿಸಿಐ ವಿಶೇಷ ಮಹಾಸಭೆಯಲ್ಲಿ ಟೂರ್ನಿ ವೇಳಾಪಟ್ಟಿ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲಾಗಿತ್ತು.
25 ದಿನಗಳ ಅಂತರದಲ್ಲಿ ಉಳಿದ 31 ಪಂದ್ಯಗಳನ್ನು ಆಯೋಜಿಸಲಾಗುತ್ತಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ವಿದೇಶಿ ಆಟಗಾರರ ಲಭ್ಯತೆ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಮಾತುಕತೆ ನಡೆಯುತ್ತಿದ್ದು, ಸಕಾರಾತ್ಮಕ ಪ್ರತಿಕ್ರಿಯೆಯ ನಿರೀಕ್ಷೆಯಲ್ಲಿದ್ದೇವೆ ಎಂದರು. ಬಹುತೇಕ ವಿದೇಶಿ ಆಟಗಾರರು ಲೀಗ್‌ನಲ್ಲಿ ಪಾಲ್ಗೊಳ್ಳುವ ವಿಶ್ವಾಸವಿದ್ದು, ಈ ಕುರಿತು ಶೀಘ್ರವೇ ತೀರ್ಮಾನ ಹೊರಬೀಳಲಿದೆ ಎಂದರು.