

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಮತ್ತು ಆತಿಥೇಯ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ನಡುವೆ ಭಾರತ ತಂಡ ಶ್ರೀಲಂಕಾದಲ್ಲಿ ಆಡಲಿರುವ ಸೀಮಿತ ಓವರ್ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಸೋಮವಾರ ಅಧಿಕೃತವಾಗಿ ಪ್ರಕಟಗೊಂಡಿದೆ. ವಿರಾಟ್ ಕೊಹ್ಲಿ ಸಾರಥ್ಯದ ಟೀಮ್ ಇಂಡಿಯಾದ ಈ ವೇಳೆ ಇಂಗ್ಲೆಂಡ್ನಲ್ಲಿ ಬಯೋಬಬಲ್ನಲ್ಲಿರುವ ಕಾರಣದಿಂದಾಗಿ ಲಂಕಾ ಪ್ರವಾಸಕ್ಕೆ ಭಾರತದ 2ನೇ ಸ್ತರದ ತಂಡವನ್ನು ಬಿಸಿಸಿಐ ಕಳುಹಿಸಿಕೊಡುವ ನಿರೀಕ್ಷೆ ಇದೆ.
ಪಂದ್ಯಗಳನ್ನು ನೇರಪ್ರಸಾರ ಮಾಡಲಿರುವ ಸೋನಿ ನೆಟ್ವರ್ಕ್ ಪ್ರಕಾರ ಜುಲೈ 13ರಂದು ಏಕದಿನ ಸರಣಿಯ ಮೂಲಕ ಪ್ರವಾಸಕ್ಕೆ ಚಾಲನೆ ಸಿಗಲಿದೆ. ಬಳಿಕ ಜುಲೈ 16 ಮತ್ತು 18ರಂದು 2 ಏಕದಿನ ಪಂದ್ಯಗಳು ನಡೆಯಲಿವೆ. ಜುಲೈ 21, 23 ಮತ್ತು 25ರಂದು 3 ಟಿ20 ಪಂದ್ಯಗಳು ನಡೆಯಲಿವೆ. ಸೋನಿ ಟೆನ್ 1, ಸೋನಿ ಟೆನ್ 3, ಸೋನಿ ಟೆನ್ 4 ಮತ್ತು ಸೋನಿ ಸಿಕ್ಸ್ ಚಾನಲ್ಗಳಲ್ಲಿ ಪಂದ್ಯಗಳು ನೇರಪ್ರಸಾರ ಕಾಣಲಿವೆ ಎಂದು ತಿಳಿಸಲಾಗಿದೆ. ಆದರೆ ಪಂದ್ಯ ಆರಂಭಗೊಳ್ಳುವ ಸಮಯ ಮತ್ತು ಪಂದ್ಯ ನಡೆಯುವ ಸ್ಥಳಗಳನ್ನು ಖಚಿತಪಡಿಸಲಾಗಿಲ್ಲ.
ಕರೊನಾ ಕಾಲದ ಆಥಿರ್ಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿಗೆ ನೆರವಾಗುವ ಸಲುವಾಗಿ ಭಾರತ ತಂಡ ಪ್ರವಾಸದಲ್ಲಿ ಹೆಚ್ಚಿನ ಟಿ20 ಪಂದ್ಯಗಳನ್ನು ಆಡಲಿದೆ ಎಂದು ಈ ಮುನ್ನ ವರದಿಯಾಗಿದ್ದರೂ, ಈ ಹಿಂದೆ ನಿಗದಿಯಾದಂತೆ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳಷ್ಟೇ ನಡೆಯಲಿದೆ.
ಪ್ರವಾಸಕ್ಕೆ ಶಿಖರ್ ಧವನ್ ಸಾರಥ್ಯದಲ್ಲಿ ಭಾರತ ತಂಡ ತೆರಳುವ ನಿರೀಕ್ಷೆ ಇದ್ದು, ಐಪಿಎಲ್ನಲ್ಲಿ ಮಿಂಚಿದ ಹಲವು ಯುವ ಆಟಗಾರರು ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಪ್ರವಾಸಕ್ಕಾಗಿ ಭಾರತದ 2ನೇ ಸ್ತರದ ತಂಡಕ್ಕೆ ಹೊಸ ಕೋಚ್ ಕೂಡ ನೇಮಕಗೊಳ್ಳಬೇಕಾಗಿದೆ. ಎನ್ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಆಗಿರುತ್ತಾರೆ ಎಂದೂ ಈಗಾಗಲೆ ವರದಿಯಾಗಿದೆ.