ಚೀನಾ ವಸ್ತು ಬಹಿಷ್ಕಾರಕ್ಕೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ ಸಿದ್ಧ

Indian-Olympic-Association-Taxscan
Published on

ನವದೆಹಲಿ: ಭಾರತೀಯ ಕ್ರೀಡೆಯನ್ನು ಚೀನಾ ವಸ್ತುಗಳು ಮತ್ತು ಪ್ರಾಯೋಜಕತ್ವದಿಂದ ಮುಕ್ತಗೊಳಿಸಲು ಸಿದ್ಧ ಎಂದು ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ತಿಳಿಸಿದೆ. ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರ ಬಲಿದಾನದ ಹಿನ್ನೆಲೆಯಲ್ಲಿ ಚೀನಾ ವಿರುದ್ಧ ಜನಾಕ್ರೋಶ ಹೆಚ್ಚುತ್ತಿರುವ ನಡುವೆ ಐಒಎ, ಚೀನಾವನ್ನು ಬಹಿಷ್ಕರಿಸಲು ಚಿಂತನೆ ನಡೆಸಿದೆ.

ನಾವು ದೇಶದ ಜತೆಗಿರುತ್ತೇವೆ ಎಂದು ಘೋಷಿಸಿರುವ ಐಒಎ ಕಾರ್ಯದರ್ಶಿ ರಾಜೀವ್ ಮೆಹ್ತಾ, ಚೀನಾ ಪ್ರಾಯೋಜಕತ್ವ ಕಂಪನಿಯಾದ ‘ಲೀ ನಿಂಗ್’ ಜತೆಗಿನ ಒಪ್ಪಂದವನ್ನು ಮುರಿದುಕೊಳ್ಳಲು ಸಿದ್ಧ ಎಂದಿದ್ದಾರೆ. ಮುಂದಿನ ಟೋಕಿಯೊ ಒಲಿಂಪಿಕ್ಸ್‌ವರೆಗೆ ಲೀ ನಿಂಗ್ ಕಂಪನಿ ಜತೆಗೆ ಐಒಎ ಒಪ್ಪಂದ ಹೊಂದಿದ್ದು, ಭಾರತ ತಂಡದ ಕಿಟ್‌ಗೆ ಪ್ರಾಯೋಜಕತ್ವ ನೀಡಿದೆ.

ಐಒಎ ಖಜಾಂಚಿ ಆನಂದೇಶ್ವರ್ ಪಾಂಡೆ ಕೂಡ ಚೀನಾ ಕಂಪನಿಗಳ ಪ್ರಾಯೋಜಕತ್ವ ಒಪ್ಪಂದ ಮುರಿದುಕೊಳ್ಳಲು ಸಿದ್ಧ ಎಂದಿದ್ದಾರೆ. ಐಒಎ 2018ರಲ್ಲಿ ಲೀ ನಿಂಗ್ ಕಂಪನಿ ಜತೆಗೆ ಒಪ್ಪಂದ ಮಾಡಿಕೊಂಡಿದ್ದು, ಭಾರತದ ಕ್ರೀಡಾಪಟುಗಳಿಗೆ 5-6 ಕೋಟಿ ರೂ. ಮೊತ್ತದ ಕಿಟ್ ಒದಗಿಸಲು ಲೀ ನಿಂಗ್ ಒಪ್ಪಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net