ಟೀಮ್ ಇಂಡಿಯಾದ ಗಾಯಾಳು ಪಟ್ಟಿಗೆ ಬುಮ್ರಾ ಸೇರ್ಪಡೆ, ನೆಟ್ಸ್‌ನಲ್ಲಿ ಮಯಾಂಕ್‌ಗೂ ಏಟು

bumrah mayank web
Published on

ಬ್ರಿಸ್ಬೇನ್: ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಮ್ ಇಂಡಿಯಾದ ದಿಟ್ಟ ನಿರ್ವಹಣೆಯ ನಡುವೆ ಗಾಯದ ಸಮಸ್ಯೆ ಆಟಗಾರರಿಗೆ ಹೊಡೆತ ನೀಡುತ್ತಲೇ ಸಾಗಿದೆ. ಟೀಮ್ ಇಂಡಿಯಾದ ವೇಗದ ಬೌಲಿಂಗ್ ವಿಭಾಗದ ಸಾರಥಿ ಜಸ್‌ಪ್ರೀತ್ ಬುಮ್ರಾ ಗಾಯಾಳುಗಳ ಪಟ್ಟಿಗೆ ಹೊಸ ಸೇರ್ಪಡೆಯಾಗಿದ್ದು, ಅಂತಿಮ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಇದಲ್ಲದೆ, ಕನ್ನಡಿಗ ಮಯಾಂಕ್ ಅಗರ್ವಾಲ್ ಕೂಡ ನೆಟ್ಸ್‌ನಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದು, ಅಂತಿಮ ಟೆಸ್ಟ್‌ಗೆ ಫಿಟ್ ಆಗುವುದು ಅನುಮಾನವೆನಿಸಿದೆ.

ಬುಮ್ರಾ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಫೀಲ್ಡಿಂಗ್ ವೇಳೆ ಕಿಬ್ಬೊಟ್ಟೆಯ ಬಿಗಿತದ ಸಮಸ್ಯೆಗೆ ಸಿಲುಕಿದ್ದು, ಅವರ ಗಾಯ ಮತ್ತಷ್ಟು ಹೆಚ್ಚಾಗುವುದನ್ನು ತಪ್ಪಿಸಲು ಅಂತಿಮ ಟೆಸ್ಟ್‌ನಿಂದ ಹೊರಗಿಡಲು ಟೀಮ್ ಮ್ಯಾನೇಜ್‌ಮೆಂಟ್ ಬಯಸಿದೆ. ತವರಿನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಸರಣಿಗೆ ಫಿಟ್ ಆಗಿ ಉಳಿಸುವ ದೃಷ್ಟಿಯಿಂದ ಬುಮ್ರಾಗೆ ಅಂತಿಮ ಪಂದ್ಯದಿಂದ ವಿಶ್ರಾಂತಿ ನೀಡಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೇರುವ ದೃಷ್ಟಿಯಿಂದ ಇಂಗ್ಲೆಂಡ್ ವಿರುದ್ಧದ ಸರಣಿ ಭಾರತದ ಪಾಲಿಗೆ ನಿರ್ಣಾಯಕವೆನಿಸಿದೆ.

ಇನ್ನು ಮಯಾಂಕ್ ಅಗರ್ವಾಲ್ ನೆಟ್ಸ್‌ನಲ್ಲಿ ಕೈಗೆ ಏಟು ತಿಂದಿದ್ದು, ಮೂಳೆಯಲ್ಲಿ ಕೂದಲೆಳೆಯ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದೆ. ಆದರೆ ಸ್ಕಾೃನ್ ವರದಿ ಇನ್ನೂ ಬಹಿರಂಗಗೊಂಡಿಲ್ಲ. ಅಂತಿಮ ಟೆಸ್ಟ್‌ನಲ್ಲಿ ಹನುಮ ವಿಹಾರಿ ಸ್ಥಾನದಲ್ಲಿ ಮಯಾಂಕ್ ಆಡುವ ನಿರೀಕ್ಷೆ ಇತ್ತು. ಆದರೆ ಅವರು ಫಿಟ್ ಆಗದಿದ್ದರೆ, ಪೃಥ್ವಿ ಷಾ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯಲಿದ್ದಾರೆ.

ಬುಮ್ರಾ ಗೈರಿನಲ್ಲಿ 2 ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿರುವ ಮೊಹಮದ್ ಸಿರಾಜ್ ವೇಗದ ಬೌಲಿಂಗ್ ವಿಭಾಗದ ಸಾರಥ್ಯ ವಹಿಸಲಿದ್ದಾರೆ. ಅವರಿಗೆ ಸಿಡ್ನಿಯಲ್ಲಷ್ಟೇ ಟೆಸ್ಟ್ ಪದಾರ್ಪಣೆ ಮಾಡಿರುವ ನವದೀಪ್ ಸೈನಿ ಜತೆಗೆ ಮತ್ತೋರ್ವ 1 ಟೆಸ್ಟ್ ಪಂದ್ಯದ ಅನುಭವಿ ಶಾರ್ದೂಲ್ ಠಾಕೂರ್ ಅಥವಾ ಇನ್ನಷ್ಟೇ ಟೆಸ್ಟ್ ಆಡಬೇಕಿರುವ ಟಿ. ನಟರಾಜನ್ ಕಣಕ್ಕಿಳಿಯಲಿದ್ದಾರೆ.

ಅಶ್ವಿನ್‌ಗೂ ಫಿಟ್ನೆಸ್ ಸಮಸ್ಯೆ

ಬೆನ್ನುನೋವಿನ ನಡುವೆಯೂ ಸಿಡ್ನಿ ಟೆಸ್ಟ್ ಪಂದ್ಯದ ಅಂತಿಮ ದಿನದಾಟದಲ್ಲಿ ಮೂರು ಗಂಟೆಗಳ ಕಾಲ ದಿಟ್ಟ ಬ್ಯಾಟಿಂಗ್ ಮಾಡಿದ್ದ ಸ್ಪಿನ್ನರ್ ಆರ್. ಅಶ್ವಿನ್ ಕೂಡ ಅಂತಿಮ ಟೆಸ್ಟ್‌ಗೆ ಲಭ್ಯರಾಗುವುದು ಅನುಮಾನವೆನಿಸಿದೆ. ಅಶ್ವಿನ್ ಫಿಟ್ ಆಗದಿದ್ದರೆ ಅವರ ಸ್ಥಾನವನ್ನು ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ತುಂಬಲಿದ್ದಾರೆ.

ಟೀಮ್ ಇಂಡಿಯಾ ಗಾಯಾಳು ಪಟ್ಟಿ

*ಮೊಹಮದ್ ಶಮಿ: ಬಲ ಮಣಿಕಟ್ಟು ಗಾಯ

*ಉಮೇಶ್ ಯಾದವ್: ಮೀನಖಂಡದ ಗಾಯ

*ಕೆಎಲ್ ರಾಹುಲ್: ಮಣಿಕಟ್ಟಿನ ಗಾಯ

*ರವೀಂದ್ರ ಜಡೇಜಾ: ಎಡಗೈ ಹೆಬ್ಬೆರಳು ಗಾಯ

*ಹನುಮ ವಿಹಾರಿ: ಕಾಲಿನ ಸ್ನಾಯು ಸೆಳೆತ

*ಜಸ್‌ಪ್ರೀತ್ ಬುಮ್ರಾ: ಕಿಬ್ಬೊಟ್ಟೆಯ ಬಿಗಿತ

*ಮಯಾಂಕ್ ಅಗರ್ವಾಲ್, ಆರ್. ಅಶ್ವಿನ್ ಫಿಟ್ನೆಸ್ ಸಮಸ್ಯೆ

*ಇಶಾಂತ್ ಶರ್ಮ, ಭುವನೇಶ್ವರ್, ವರುಣ್ ಚಕ್ರವರ್ತಿ ಪ್ರವಾಸಕ್ಕೆ ಮುನ್ನವೇ ಗಾಯಾಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net