

Champions Trophy 2025: ಫೆಬ್ರವರಿಯಿಂದ ಶುರುವಾಗಲಿರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಈಗಾಗಲೇ ಭರ್ಜರಿ ಸಿದ್ಧತೆಗಳು ನಡೆಯುತ್ತಿದ್ದು, ಆತಿಥೇಯ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಹೈಬ್ರಿಡ್ ಮಾದರಿಯಲ್ಲಿ ಆಡಲು ಸಜ್ಜಾಗಿದೆ. ಈ ಹಿಂದೆ ಪಾಕ್ ನೆಲದಲ್ಲಿ ಆಡಲು ನಿರಾಕರಿಸಿದ್ದ ಭಾರತಕ್ಕೆ ಹೈಬ್ರಿಡ್ ಮಾದರಿಯಲ್ಲಿ ಆಡುವ ಅವಕಾಶ ದೊರಕಿದೆ. ತನ್ನೆಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿರುವ ಟೀಮ್ ಇಂಡಿಯಾ, ಪಾಕಿಸ್ತಾನ, ನ್ಯೂಜಿಲೆಂಡ್, ಮತ್ತು ಬಾಂಗ್ಲಾದೇಶದ ಜತೆಗೆ 'ಗ್ರೂಪ್ ಎ'ನಲ್ಲಿ ಸೆಣಸಾಡಲಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅಲ್ಲಿ ಎರಡು ದೇಶಗಳ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಕಾತರ, ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ಇನ್ನು ಹೈವೋಲ್ಟೇಜ್ ಪಂದ್ಯದ ಟಿಕೆಟ್ ದರ ಇತರೆ ಪಂದ್ಯಗಳಿಗಿಂತ ದುಬಾರಿಯೇ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್ಗೆ ಸದ್ಯ ಭಾರೀ ಬೇಡಿಕೆ ಹೆಚ್ಚಿದೆ. 25 ಸಾವಿರ ಅಭಿಮಾನಿಗಳು ಸೇರುವ ಕ್ರೀಡಾಂಗಣದಲ್ಲಿ ಟಿಕೆಟ್ ಖರೀದಿಗೆ ಆನ್ಲೈನ್ನಲ್ಲಿ ಸಖತ್ ಪೈಪೋಟಿಯೇ ನಡೆದಿದೆ.
ಪ್ರತಿಬಾರಿಯೂ ಅಭಿಮಾನಿಗಳು ಐಸಿಸಿ ಅಧಿಕೃತ ವೆಬ್ಸೈಟ್ನಲ್ಲಿಯೇ ಆನ್‌ಲೈನ್ ಟಿಕೆಟ್‌ಗಳನ್ನು ಖರೀದಿಸುತ್ತಾರೆ. ಆದ್ರೆ, ಈ ಬಾರಿ ಟಿಕೆಟ್ ಮಾರಾಟ ಇನ್ನೂ ತೆರೆದಿಲ್ಲ. ಪ್ರಸ್ತುತ ಟಿಕೆಟ್ ಮಾರಾಟವನ್ನು xchangetickets.com ಎಂಬ ಪೋರ್ಟಲ್‌ನಿಂದ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ವರದಿಗಳ ಪ್ರಕಾರ, ಒಂದು ಟಿಕೆಟ್ ಬೆಲೆ 56,000 ರೂ.ನಿಂದ 2 ಲಕ್ಷದ 24 ಸಾವಿರ ರೂ. ವರೆಗೆ ಇದೆ ಎನ್ನಲಾಗಿದೆ. ಈ ಸಂಗತಿ ಕ್ರಿಕೆಟ್ ಪ್ರಿಯರಲ್ಲಿ ಅಚ್ಚರಿ ಮೂಡಿಸಿದ್ದು, ಟಿಕೆಟ್ ದರ ಬಲು ದುಬಾರಿ ಆಗಿರುವ ಬಗ್ಗೆ ಜಾಲತಾಣಗಳಲ್ಲಿ ಬೇಸರ ಹೊರಹಾಕಿದ್ದಾರೆ.
ಟಿಕೆಟ್ ದರಗಳನ್ನು ಸರಿಯಾಗಿ ಪರಿಶೀಲಿಸಿ ನೋಡುವುದಾದರೆ, ಜನರಲ್ ಸ್ಟ್ಯಾಂಡ್ ಟಿಕೆಟ್- 56,170 ರೂ.,
ಪ್ರೀಮಿಯಂ ಟಿಕೆಟ್- 1,18,498 ರೂ. (ಬುಕ್ಕಿಂಗ್ ಶುಲ್ಕ ಸೇರಿಸಿ), ಗ್ರ್ಯಾಂಡ್ ಲೌಂಜ್ (ಇಬ್ಬರಿಗೆ)- 2,88,150 ರೂ.,
ಪ್ಲಾಟಿನಂ ಟಿಕೆಟ್‌ಗಳು (ಇಬ್ಬರಿಗೆ)- 4,16,219 ರೂ.,(ಏಜೆನ್ಸೀಸ್).