ಟೆಸ್ಟ್​ ಪಂದ್ಯಕ್ಕೂ ಮುನ್ನವೇ ಕಿವಿ ಪಡೆಗೆ ಖಡಕ್ ವಾರ್ನಿಂಗ್ ಕೊಟ್ಟ ರೋಹಿತ್ ಶರ್ಮ | INDvsNZ Test

Rohit Sharma
Published on

ನವದೆಹಲಿ: 17 ವರ್ಷಗಳ ಬಳಿಕ ಭಾರತಕ್ಕೆ ಟಿ20 ವಿಶ್ವಕಪ್ ಗೆದ್ದುಕೊಟ್ಟ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಟೀಮ್ ಇಂಡಿಯಾದ ಕ್ಯಾಪ್ಟನ್ ರೋಹಿತ್ ಶರ್ಮ (Rohit Sharma), ಅಖಾಡಕ್ಕಿಳಿದಾಗ ತಮ್ಮ ಬ್ಯಾಟ್​ನಿಂದ ಹಾಗೂ ಪತ್ರಿಕಾಗೋಷ್ಠಿಯಲ್ಲಿ ಕುಳಿತಾಗ ಮೈಕ್​ನಿಂದ ತಮ್ಮ ಎದುರಾಳಿಗಳಿಗೆ ಸರಿಯಾದ ಟಕ್ಕರ್​ ಕೊಡುವುದನ್ನು ಚೆನ್ನಾಗಿ ಅರಿತಿದ್ದಾರೆ. ಈ ಹಿಂದೆ ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿ ಗೆದ್ದ ಖುಷಿಯಲ್ಲಿ ಸೊಕ್ಕಿನ ಮಾತುಗಳನ್ನಾಡಿದ್ದ ಬಾಂಗ್ಲಾ ಆಟಗಾರರಿಗೆ ಪಂದ್ಯ ಆರಂಭಕ್ಕೂ ಮುನ್ನವೇ ವಾರ್ನಿಂಗ್ ರವಾನಿಸಿದ್ದ ರೋಹಿತ್​, ತಮ್ಮ ಮಾತಿನಂತೆಯೇ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಟೆಸ್ಟ್ ಹಾಗೂ ಟಿ20 ಸರಣಿಯನ್ನು ಭಾರತದ ಎದುರು ವಶಪಡಿಸಿಕೊಳ್ಳುವಲ್ಲಿ ವಿಫಲವಾದ ಬಾಂಗ್ಲಾದೇಶಕ್ಕೆ 'ಹಿಟ್​ಮ್ಯಾನ್'​ ಕೊಟ್ಟಿದ್ದ ಖಡಕ್ ವಾರ್ನಿಂಗ್​ ನೆನಪಾಗಿರುವುದರಲ್ಲಿ ಅನುಮಾನವೇ ಇಲ್ಲ ಎಂದೇ ಹೇಳಬಹುದು. ಸದ್ಯ ಇದೇ ರೀತಿ ನ್ಯೂಜಿಲೆಂಡ್ (New Zealand) ಟೀಮ್​ಗೂ ಶರ್ಮ ಒಂದು ಸಣ್ಣ ಸಂದೇಶವೊಂದನ್ನು (INDvsNZ Test) ರವಾನಿಸಿದ್ದಾರೆ.

ಇದೇ ಬುಧವಾರದಿಂದ (ಅ.16) ಪ್ರಾರಂಭವಾಗಲಿರುವ ನ್ಯೂಜಿಲೆಂಡ್​ ಮತ್ತು ಟೀಮ್ ಇಂಡಿಯಾ ವಿರುದ್ಧದ ಟೆಸ್ಟ್ ಪಂದ್ಯ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೂರು ಪಂದ್ಯಗಳನ್ನು ಒಳಗೊಂಡಿರುವ ಟೆಸ್ಟ್ ಸರಣಿ ಪ್ರಾರಂಭಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮ, "ಪ್ರತಿ ತಂಡವೂ ಹೊಸ ಸವಾಲಿನ ಜತೆಗೆ ಬರುತ್ತದೆ. ಕಿವಿ ಪಡೆ ಕೂಡ ಹಾಗೆಯೇ. ನಾವು ಯಾವುದೇ ತಂಡವನ್ನು ಆಡಿದರೂ ವಿಭಿನ್ನ ಸವಾಲುಗಳು ಇದ್ದೇ ಇರುತ್ತವೆ" ಎಂದಿದ್ದಾರೆ.

"ನಾವು ಈ ಹಿಂದೆ ನ್ಯೂಜಿಲೆಂಡ್ ವಿರುದ್ಧ ಅನೇಕ ಪಂದ್ಯಗಳನ್ನು ಆಡಿದ್ದೇವೆ. ಆ ತಂಡದ ಆಟಗಾರರ ಬಲಾಬಲವೇನು ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅವರ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ನಮಗೆ ಉತ್ತಮ ತಿಳುವಳಿಕೆ ಇದೆ. ಅದಕ್ಕೆ ತಕ್ಕಂತೆಯೇ ನಾವು ನಮ್ಮ ಆಟವನ್ನು ಆಡಲಿದ್ದೇವೆ" ಎಂದು ರೋಹಿತ್ ತಮ್ಮದೇ ಶೈಲಿಯಲ್ಲಿ ಎದುರಾಳಿ ತಂಡಕ್ಕೆ ಖಡಕ್ ಸಂದೇಶ ರವಾನಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net