

ಹೈದರಾಬಾದ್: ಕಳೆದ 12 ವರ್ಷಗಳಿಂದ ತವರಿನಲ್ಲಿ ಅಜೇಯವಾಗಿರುವ ಭಾರತ ಮತ್ತು ಆಕ್ರಮಣಕಾರಿ ಬಜ್ಬಾಲ್ ಕಾರ್ಯತಂತ್ರದ ಮೂಲಕ ಟೆಸ್ಟ್ ಕ್ರಿಕೆಟ್ನಲ್ಲಿ ಹೊಸ ಕ್ರಾಂತಿ ಎಬ್ಬಿಸಿರುವ ಇಂಗ್ಲೆಂಡ್ ತಂಡಗಳ ನಡುವಿನ ಬಹುನಿರೀತ 5 ಪಂದ್ಯಗಳ ಟೆಸ್ಟ್ ಸರಣಿಗೆ ಗುರುವಾರ ಚಾಲನೆ ಸಿಗಲಿದೆ. ಹೈದರಾಬಾದ್ನ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಸ್ಪಿನ್ಸ್ನೇಹಿ ಪಿಚ್ನಲ್ಲಿ ಮೊದಲ ಮುಖಾಮುಖಿ ನಡೆಯಲಿದೆ. ಹೀಗಾಗಿ ಆಂಗ್ಲರ "ಬಜ್ಬಾಲ್' ಕಾರ್ಯತಂತ್ರಕ್ಕೆ ಭಾರತದ "ಸ್ಪಿನ್ಬಾಲ್' ಯಾವ ರೀತಿಯಲ್ಲಿ ಸವಾಲೊಡ್ಡಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ 3ನೇ ಆವೃತ್ತಿಯ ಭಾಗವಾಗಿರುವ ಈ ಸರಣಿಯಲ್ಲಿ ಶುಭಾರಂಭ ಕಾಣುವ ಮೂಲಕ ತವರಿನ ಪ್ರಾಬಲ್ಯ ಮುಂದುವರಿಸುವುದು ರೋಹಿತ್ ಶರ್ಮ ಬಳಗದ ಹಂಬಲವಾಗಿದೆ.
ಆಂಗ್ಲರು ಬಜ್ಬಾಲ್ ಕಾರ್ಯತಂತ್ರದ ಮೂಲಕ ಈಗಾಗಲೆ ತವರಿನಲ್ಲಿ ಮಾತ್ರವಲ್ಲದೆ, ಪಾಕಿಸ್ತಾನ, ನ್ಯೂಜಿಲೆಂಡ್ ಮತ್ತು ಆಸ್ಟ್ರೆಲಿಯಾದಲ್ಲೂ ಉತ್ತಮ ಯಶಸ್ಸು ಸಾಧಿಸಿದ್ದಾರೆ. ಆದರೆ ಭಾರತದ ಸ್ಪಿನ್ ಸ್ನೇಹಿ ವಾತಾವರಣದಲ್ಲೂ ಆಂಗ್ಲರಿಗೆ ಅಂಥದ್ದೇ ಯಶಸ್ಸು ಸಾಧಿಸಲು ಸಾಧ್ಯವಾಗುವುದೇ ಎಂಬ ಕೌತುಕ ಸರಣಿಯ ರೋಚಕತೆ ಹೆಚ್ಚಿಸಿದೆ. ಕಳೆದೊಂದು ದಶಕದಿಂದ ಭಾರತ ಪ್ರವಾಸ ಕೈಗೊಂಡ ಎಲ್ಲ ತಂಡಗಳನ್ನೂ ಸ್ಪಿನ್ ಜೋಡಿಯಾದ ಆರ್. ಅಶ್ವಿನ್ ಮತ್ತು ರವೀಂದ್ರ ಜಡೇಜಾ ಕಟ್ಟಿಹಾಕಿದ್ದಾರೆ. ಕೆಲ ಸರಣಿಗಳಲ್ಲಿ ಅವರಿಗೆ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಕೂಡ ಉತ್ತಮ ಸಾಥ್ ನೀಡಿದ್ದಾರೆ. ಹೀಗಾಗಿ ಈ ಅನುಭವಿ ಸ್ಪಿನ್ ಜೋಡಿಯ ಎದುರು ಬಜ್ಬಾಲ್ ಕಾರ್ಯಗತವಾಗುವುದೇ ಎಂಬ ಪ್ರಶ್ನೆ ಎಲ್ಲರಲ್ಲಿದೆ.
ಇಂಗ್ಲೆಂಡ್ ಬಜ್ಬಾಲ್ ಮೂಲಕವೇ 2022ರಲ್ಲಿ ಪಾಕಿಸ್ತಾನದಲ್ಲಿ 3-0ಯಿಂದ ಟೆಸ್ಟ್ ಸರಣಿ ಗೆದ್ದಿತ್ತು. ಆದರೆ ಆಗ ಪಾಕ್ ಬಹುತೇಕ ನಿರ್ಜೀವ ಪಿಚ್ಗಳನ್ನು ಸಿದ್ಧಪಡಿಸಿತ್ತು ಮತ್ತು ಅದು ಗುಣಮಟ್ಟದ ಸ್ಪಿನ್ನರ್ಗಳನ್ನು ಹೊಂದಿರಲಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ಕಂಡ ಗೆಲುವು ಉಪಖಂಡದಲ್ಲೂ ಬಜ್ಬಾಲ್ ಯಶಸ್ಸು ಕಾಣುತ್ತದೆ ಎಂಬ ಗ್ಯಾರಂಟಿ ನೀಡುವುದಿಲ್ಲ.
ಇಂಗ್ಲೆಂಡ್ ತಂಡ ಸರಣಿಗೆ ಕೇವಲ 3 ದಿನ ಮೊದಲಷ್ಟೇ ಭಾರತಕ್ಕೆ ಆಗಮಿಸಿದ್ದರೂ, ಅದಕ್ಕೆ ಮುನ್ನ 10 ದಿನ ಅಬುಧಾಬಿಯಲ್ಲಿ ಏಷ್ಯಾದ ವಾತಾವರಣಕ್ಕೆ ಸಿದ್ಧತೆ ನಡೆಸಿದೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣದಿಂದಾಗಿ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿರುವುದು ಸರಣಿಗೆ ಮುನ್ನ ಭಾರತಕ್ಕೆ ಪ್ರಮುಖ ಹಿನ್ನಡೆ ಎನಿಸಿದೆ.
ತವರಿನ ಪ್ರಾಬಲ್ಯ ಉಳಿಸುವ ತವಕ
ಭಾರತ ತಂಡ ಕಳೆದ 12 ವರ್ಷಗಳಿಂದ ತವರಿನಲ್ಲಿ ಅಜೇಯವಾಗಿದೆ. ತವರಿನಲ್ಲಿ 7 ಸರಣಿ ಕ್ಲೀನ್ಸ್ವೀಪ್ ಸಹಿತ ಸತತ 16 ಟೆಸ್ಟ್ ಸರಣಿ ಗೆದ್ದ ದಾಖಲೆ ಹೊಂದಿದೆ. ಆದರೆ ಭಾರತ ತಂಡ ಕೊನೆಯದಾಗಿ ತವರಿನಲ್ಲಿ ಸೋತಿದ್ದು ಇಂಗ್ಲೆಂಡ್ ವಿರುದ್ಧವೇ ಆಗಿದೆ ಎಂಬುದು ಗಮನಾರ್ಹ ಸಂಗತಿ. 2012ರಲ್ಲಿ ಅಲಸ್ಟೈರ್ ಕುಕ್ ವಿರುದ್ಧದ ಭಾರತ ತಂಡ 1&2ರಿಂದ ಸರಣಿ ಸೋತಿತ್ತು. ನಂತರದಲ್ಲಿ ತವರಿನಲ್ಲಿ ಆಂಗ್ಲರ ವಿರುದ್ಧ ಆಡಿದ 2 ಸರಣಿಗಳಲ್ಲಿ ಭಾರತ ಗೆದ್ದಿದೆ. 2016-17ರಲ್ಲಿ 4-1ರಿಂದ ಮತ್ತು 2020-21ರಲ್ಲಿ 3-1ರಿಂದ ಗೆದ್ದಿತ್ತು. ಕಳೆದ 12 ವರ್ಷಗಳಲ್ಲಿ ತವರಿನಲ್ಲಿ ಆಡಿದ 44 ಟೆಸ್ಟ್ಗಳಲ್ಲಿ ಭಾರತ ಕೇವಲ 3ರಲ್ಲಿ ಮಾತ್ರ ಸೋತಿದೆ.
ಟೀಮ್ ನ್ಯೂಸ್:
ಭಾರತ: ಕನ್ನಡಿಗ ಕೆಎಲ್ ರಾಹುಲ್ ಕೇವಲ ಬ್ಯಾಟರ್ ಆಗಿ ಆಡಲಿದ್ದಾರೆ ಎಂದು ಕೋಚ್ ದ್ರಾವಿಡ್ ಸ್ಪಷ್ಟಪಡಿಸಿರುವುದರಿಂದ ಕೆಎಸ್ ಭರತ್ ಕೀಪಿಂಗ್ ಮಾಡುವುದು ಬಹುತೇಕ ಖಚಿತವೆನಿಸಿದೆ. ವಿರಾಟ್ ಕೊಹ್ಲಿ ಗೈರಿನಲ್ಲಿ ಶುಭಮಾನ್ ಗಿಲ್&ಶ್ರೇಯಸ್ ಅಯ್ಯರ್ ಇಬ್ಬರಿಗೂ 11ರ ಬಳಗದಲ್ಲಿ ಸ್ಥಾನ ಲಭಿಸಲಿದೆ. ಆದರೆ 3ನೇ ಸ್ಪಿನ್ನರ್ ಬಗ್ಗೆ ಗೊಂದಲವಿದೆ. ಕುಲದೀಪ್-ಅಕ್ಷರ್ ಇಬ್ಬರಲ್ಲಿ ಯಾರು ಆಡಬಹುದೆಂದು ನಾಯಕ ರೋಹಿತ್ ಶರ್ಮ ಬುಧವಾರದ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿಲ್ಲ. ಆದರೆ ಬ್ಯಾಟಿಂಗ್ನಲ್ಲೂ ಉಪಯುಕ್ತರಾಗಬಲ್ಲ ಅಕ್ಷರ್ ಆಡುವ ಸಾಧ್ಯತೆ ಹೆಚ್ಚಿದೆ.
ಸಂಭಾವ್ಯ ತಂಡ: ರೋಹಿತ್ ಶರ್ಮ (ನಾಯಕ), ಯಶಸ್ವಿ ಜೈಸ್ವಾಲ್, ಶುಭಮಾನ್ ಗಿಲ್, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಕೆಎಸ್ ಭರತ್ (ವಿ.ಕೀ), ಅಕ್ಷರ್ ಪಟೇಲ್/ಕುಲದೀಪ್, ಆರ್. ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮದ್ ಸಿರಾಜ್.
ಇಂಗ್ಲೆಂಡ್: ಪಂದ್ಯಕ್ಕೆ ಮುನ್ನದಿನವೇ ಆಡುವ 11ರ ಬಳಗವನ್ನು ಬಹಿರಂಗಪಡಿಸಿರುವ ಇಂಗ್ಲೆಂಡ್, ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ರನ್ನು ಕೈಬಿಟ್ಟಿರುವುದು ಅಚ್ಚರಿ ಎನಿಸಿದೆ. ಸ್ಪಿನ್ ಸ್ನೇಹಿ ಪಿಚ್ನ ಲಾಭವೆತ್ತಲು ಮೂವರು ಸ್ಪಿನ್ನರ್ಗಳನ್ನು ಆಡಿಸಲಿದ್ದು, ಮಾರ್ಕ್ ವುಡ್ ಏಕೈಕ ವೇಗಿಯಾಗಿದ್ದಾರೆ. ಇತ್ತೀಚೆಗಷ್ಟೇ ಗಾಯದಿಂದ ಚೇತರಿಸಿಕೊಂಡಿರುವ ನಾಯಕ ಬೆನ್ ಸ್ಟೋಕ್ಸ್ ಸರಣಿಯಲ್ಲಿ ಬೌಲಿಂಗ್ ಮಾಡುವುದಿಲ್ಲವೆಂದು ಖಚಿತಪಡಿಸಿದ್ದಾರೆ. ಯುವ ಲೆಗ್ ಸ್ಪಿನ್ನರ್ ರೆಹನ್ ಅಹ್ಮದ್ ಜತೆಗೆ ಎಡಗೈ ಸ್ಪಿನ್ನರ್ಗಳಾದ ಜಾಕ್ ಲೀಚ್ ಮತ್ತು ಟಾಮ್ ಹಾರ್ಟ್ಲಿ ಭಾರತಕ್ಕೆ ಸವಾಲೊಡ್ಡಲಿದ್ದಾರೆ. ಬೆರ್ಸ್ಟೋ ಬ್ಯಾಟರ್ ಆಗಿ ಆಡಲಿದ್ದು, ಬೆನ್ ಫೋಕ್ಸ್ ಕೀಪರ್ ಆಗಿದ್ದಾರೆ.
ಸಂಭಾವ್ಯ ತಂಡ: ಜಾಕ್ ಕ್ರೌಲಿ, ಬೆನ್ ಡಾಕೆಟ್, ಒಲಿ ಪೋಪ್, ಜೋ ರೂಟ್, ಜಾನಿ ಬೇರ್ಸ್ಟೋ, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿ.ಕೀ), ರೆಹನ್ ಅಹ್ಮದ್, ಟಾಮ್ ಹಾರ್ಟ್ಲಿ, ಮಾರ್ಕ್ ವುಡ್, ಜಾಕ್ ಲೀಚ್.
ಅಶ್ವಿನ್ 500, ಜಡೇಜಾ 300ರ ಮೇಲೆ ಕಣ್ಣು
ಅಶ್ವಿನ್-ಜಡೇಜಾ ಸ್ಪಿನ್ ಜೋಡಿ ಸರಣಿಯಲ್ಲಿ ಆಂಗ್ಲರನ್ನು ಕಾಡುವ ಜತೆಗೆ ವೈಯಕ್ತಿಕ ಮೈಲಿಗಲ್ಲಿನ ಮೇಲೂ ಕಣ್ಣಿಟ್ಟಿದೆ. ಅಶ್ವಿನ್ಗೆ (490) ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಕಬಳಿಸಿದ 2ನೇ ಭಾರತೀಯರೆನಿಸಲು ಕೇವಲ 10 ವಿಕೆಟ್ ಬೇಕಿದ್ದರೆ, ಜಡೇಜಾಗೆ (275) 300 ವಿಕೆಟ್ ಪೂರೈಸಲು 25 ವಿಕೆಟ್ ಬೇಕಿದೆ.
ಟೆಸ್ಟ್ ಸರಣಿ ವೇಳಾಪಟ್ಟಿ
ಪಂದ್ಯ ದಿನಾಂಕ ಸ್ಥಳ
1. ಜ.25-29 ಹೈದರಾಬಾದ್
2. ಫೆ. 2-6 ವಿಶಾಖಪಟ್ಟಣ
3. ಫೆ.15-19 ರಾಜ್ಕೋಟ್
4. ಫೆ. 23-27 ರಾಂಚಿ
5. ಮಾ. 7-11 ಧರ್ಮಶಾಲಾ
ಪಂದ್ಯ ಆರಂಭ: ಬೆಳಗ್ಗೆ 9.30
ನೇರಪ್ರಸಾರ: ಸ್ಪೋರ್ಟ್ಸ್18, ಜಿಯೋಸಿನಿಮಾ
*ಹಿಂದಿನ ದಾಖಲೆಗಳು ಏನೇ ಇದ್ದರೂ ಅವು ನಾವು ಈ ಸರಣಿಯನ್ನೂ ಗೆಲ್ಲಲಿದ್ದೇವೆ ಎಂಬ ಗ್ಯಾರಂಟಿಯನ್ನು ನೀಡುವುದಿಲ್ಲ. ಅದಕ್ಕೆ ನಾವು ಈ ಸಲವೂ ಅತ್ಯುತ್ತಮ ಕ್ರಿಕೆಟ್ ಆಡುವುದು ಅಗತ್ಯ. ನಮ್ಮನ್ನು ತವರಿನಲ್ಲಿ ಕೊನೆಯದಾಗಿ ಸೋಲಿಸಿದ ತಂಡ ಇಂಗ್ಲೆಂಡ್. ನಮ್ಮದು ಸೋಲಿಸಲಾಗದ ತಂಡವೆಂದು ಹೇಳಲಾರೆ. ನಾವು ನಮ್ಮ ಶ್ರೇಷ್ಠ ನಿರ್ವಹಣೆ ತೋರದಿದ್ದರೆ ಖಂಡಿತವಾಗಿಯೂ ಸಂಕಷ್ಟಕ್ಕೆ ಸಿಲುಕಲಿದ್ದೇವೆ.
| ರೋಹಿತ್ ಶರ್ಮ, ಟೀಮ್ ಇಂಡಿಯಾ ನಾಯಕ
*ದಿಟ್ಟ ಅಥವಾ ಕೆಚ್ಚೆದೆಯ ನಿರ್ಧಾರ ಎನ್ನುವುದಕ್ಕಿಂತ ನಾವು ಪಿಚ್ ಗಮನದಲ್ಲಿಟ್ಟುಕೊಂಡು ನಮ್ಮ ಆಡುವ 11ರ ಬಳಗವನ್ನು ಆರಿಸಿದ್ದೇವೆ. ಇದು ನಮಗೆ ಗೆಲುವು ತಂದುಕೊಡುವ ಅವಕಾಶವಿರುವ ಅತ್ಯುತ್ತಮ ತಂಡವೆಂದು ಭಾವಿಸಿದ್ದೇವೆ. ಯಾವುದೇ ತಂಡಕ್ಕೆ ಭಾರತದಲ್ಲಿ ಆಡುವುದು ಕಠಿಣ ಸವಾಲು. ಇತಿಹಾಸ ನಿರ್ಮಿಸುವ ಈ ಅವಕಾಶವನ್ನು ನಾವು ಆನಂದಿಸುತ್ತೇವೆ.
| ಬೆನ್ ಸ್ಟೋಕ್ಸ್, ಇಂಗ್ಲೆಂಡ್ ನಾಯಕ
ಕೊಹ್ಲಿ ಸ್ಥಾನ ತುಂಬಿದ ಪಾಟೀದಾರ್
ವೈಯಕ್ತಿಕ ಕಾರಣ ನೀಡಿ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿರುವ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸ್ಥಾನವನ್ನು ಮಧ್ಯಪ್ರದೇಶದ ರಜತ್ ಪಾಟೀದಾರ್ ತುಂಬಿದ್ದಾರೆ. 30 ವರ್ಷದ ಪಾಟೀದಾರ್ ಇತ್ತೀಚೆಗೆ ಇಂಗ್ಲೆಂಡ್ ಲಯನ್ಸ್ ವಿರುದ್ಧದ ಚತುರ್ದಿನ ಪಂದ್ಯದಲ್ಲಿ ಭಾರತ ಎ ಪರ ಶತಕ ಸಿಡಿಸಿ ಮಿಂಚಿದ್ದರು.