

ಮುಂಬೈ: ಭಾನುವಾರ ನಡೆದ ಟಾಟಾ ಮುಂಬೈ ಮ್ಯಾರಥಾನ್ನಲ್ಲಿ 10 ಸಾವಿರ ಓಟಗಾರರು ಭಾಗವಹಿಸಿದ್ದರು. ಈ ಪೈಕಿ 42.195 ಕಿಕೋಮೀಟರ್ಗಳ ಮ್ಯಾರಥಾನ್ ಓಟವನ್ನು ಪೂರ್ಣಗೊಳಿಸಿದ 500ಕ್ಕೂ ಅಧಿಕ ಓಟಗಾರರು ಪದಕ ಲಭಿಸದೆ ಬರಿಗೈಯಲ್ಲಿ ಹಿಂದಿರುಗಿದ್ದರು. ಯಾಕೆಂದರೆ, ಸಂಘಟಕರು ಸ್ಪರ್ಧಿಗಳಿಗೆ ನೀಡಲು ಸಿದ್ಧಪಡಿಸಿದ್ದ ಪದಕಗಳ ಪೈಕಿ ಸುಮಾರು 2,200 ಪದಕಗಳು ಕಳ್ಳತನವಾಗಿದ್ದವು! ಕೊನೆಗೂ ಈ ಕಳ್ಳರನ್ನು ಮಂಗಳವಾರ ಬಂಧಿಸುವಲ್ಲಿ ಮುಂಬೈ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಂಬೆ ಜಿಮ್ಖಾನಾ ಮೈದಾನದಲ್ಲಿ ಹಾಕಿದ್ದ ಟೆಂಟ್ಗಳಲ್ಲಿ ಸಂಘಟಕರು ವಿವಿಧ ಬಾಕ್ಸ್ಗಳಲ್ಲಿ ಪದಕಗಳನ್ನು ಇರಿಸಿದ್ದರು. ಅಲ್ಲೇ ಕೆಲಸ ಮಾಡುತ್ತಿದ್ದ ಕೆಲ ಕಾರ್ಮಿಕರ ಪೈಕಿ ಆರು ಮಂದಿ, ಅವು ಚಿನ್ನದ ಪದಕಗಳು ಎಂದು ತಿಳಿದು ಅವುಗಳಲ್ಲಿ ಸಾಧ್ಯವಾದಷ್ಟನ್ನು ಚೀಲಗಳಲ್ಲಿ ತುಂಬಿ ಅಲ್ಲಿಂದ ಕದ್ದೊಯ್ದಿದ್ದರು. ಆದರೆ ಅವು ಚಿನ್ನದ ಬಣ್ಣ ಲೇಪಿತ ಪದಕಗಳಷ್ಟೇ ಆಗಿದ್ದವು. ಸಂಘಟಕರಿಂದ ದೂರು ದಾಖಲಾದ ಬಳಿಕ ಸಿಸಿಟಿವಿಯನ್ನು ಪರಿಶೀಲಿಸಿದ ಪೊಲೀಸರು ಕಳ್ಳರನ್ನು ಪತ್ತೆ ಹಚ್ಚಿದ್ದಾರೆ. ಅವರಿಂದ 1.38 ಲಕ್ಷ ರೂ. ಮೌಲ್ಯದ ಸುಮಾರು 620 ಪದಕಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮ್ಯಾರಥಾನ್ಗೆ ಟೆಂಟ್ ಮತ್ತು ಬ್ಯಾನರ್ಗಳನ್ನು ಹಾಕಲು ಬಂದಿದ್ದ ವಿಘ್ನೇಶ್ ತೆವರ್ (20 ವರ್ಷ), ನಸೀರ್ ಶೇಕ್ (24), ಪರಿಮಾಲ್ (25), ಗಣೇಶ್ ಸಾಲುಂಖೆ (24), ರೋಹಿತ್ ವಿಜಯ್ ಸಿಂಗ್ (23) ಮತ್ತು ಆಮೀರ್ ಶೇಕ್ (26) ಬಂಧಿತರಾಗಿದ್ದಾರೆ.