ಐಸಿಸಿ ಚಾಂಪಿಯನ್ಸ್​ ಟ್ರೋಫಿಯಲ್ಲಿ ಫಲಿಸಿದ ಭಾರತದ ವಿಶೇಷ ಕಾರ್ಯತಂತ್ರಗಳು...

web gam rohit
Published on

ಬೆಂಗಳೂರು: 2007ರಲ್ಲಿ ಆಟಗಾರರಾಗಿ ಜತೆಯಾಗಿ ಟಿ20 ವಿಶ್ವಕಪ್​ ಗೆದ್ದಿದ್ದ ಗೌತಮ್​ ಗಂಭೀರ್​ ಮತ್ತು ರೋಹಿತ್​ ಶರ್ಮ ಇದೀಗ 18 ವರ್ಷಗಳ ಬಳಿಕ ಕೋಚ್​-ಕ್ಯಾಪ್ಟನ್​ ಆಗಿ ಮತ್ತೊಂದು ಐಸಿಸಿ ಟ್ರೋಫಿ ಗೆಲುವಿನ ಸಾಧನೆ ತೋರಿದ್ದಾರೆ. ಇದಕ್ಕೆ ಅವರಿಬ್ಬರು ಕೆಲ ವಿಶೇಷ ಕಾರ್ಯತಂತ್ರಗಳನ್ನು ಅನುಸರಿಸಿ ದುಬೈ ವಾತಾವರಣದ ಸಂಪೂರ್ಣ ಲಾಭ ಎತ್ತಿದ್ದು ಪ್ರಮುಖ ಕಾರಣವಾಗಿದೆ. ಭಾರತ 12 ವರ್ಷಗಳ ಬಳಿಕ ಮತ್ತು 3ನೇ ಬಾರಿ ಚಾಂಪಿಯನ್ಸ್​ ಟ್ರೋಫಿ ಗೆಲ್ಲಲು ನೆರವಾದ ಅಂಥ ಕೆಲ ವಿಶೇಷ ಕಾರ್ಯತಂತ್ರಗಳ ವಿವರಣೆ ಇಲ್ಲಿದೆ...

ಐವರು ಸ್ಪಿನ್ನರ್​ಗಳ ಆಯ್ಕೆ

ಕಳೆದ ವರ್ಷ ಅಮೆರಿಕ&ವೆಸ್ಟ್​ ಇಂಡೀಸ್​ನಲ್ಲಿ ನಡೆದ ಟಿ20 ವಿಶ್ವಕಪ್​ಗೆ ನಾಲ್ವರು ಸ್ಪಿನ್ನರ್​ಗಳನ್ನು ಕರೆದೊಯ್ದು ಯಶಸ್ಸು ಕಂಡಿದ್ದ ಭಾರತ ಈ ಬಾರಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಐವರು ಸ್ಪಿನ್ನರ್​ಗಳನ್ನು ಆರಿಸಿತು. ಈ ಬಗ್ಗೆ ಟೂರ್ನಿಗೆ ಮುನ್ನ ಟೀಕೆಗಳು ವ್ಯಕ್ತವಾಗಿದ್ದರೂ, ಇದಕ್ಕೆ ಗಂಭೀರ್​-ರೋಹಿತ್​ ತಲೆಕೆಡಿಸಿಕೊಂಡಿರಲಿಲ್ಲ. ಅಲ್ಲದೆ ತಂಡದಲ್ಲಿ ಇಬ್ಬರಷ್ಟೇ (ಕುಲದೀಪ್​, ಚಕ್ರವರ್ತಿ) ಸ್ಪಿನ್ನರ್​ಗಳಿದ್ದಾರೆ. ಉಳಿದ ಮೂವರು (ಅಕ್ಷರ್​, ಜಡೇಜಾ, ವಾಷಿಂಗ್ಟನ್​) ಸ್ಪಿನ್​ ಬೌಲಿಂಗ್​ ಆಲ್ರೌಂಡರ್​ಗಳು ಎಂಬ ಸಮರ್ಥನೆಯನ್ನೂ ನೀಡಿದ್ದರು. ಅದರಲ್ಲೂ, ತವರಿನಲ್ಲಿ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಯಲ್ಲಿ ಮಿಂಚಿದ್ದ ಮಿಸ್ಟರಿ ಸ್ಪಿನ್ನರ್​ ವರುಣ್​ ಚಕ್ರವರ್ತಿಯನ್ನು ಕೊನೇಕ್ಷಣದಲ್ಲಿ ಬ್ಯಾಟರ್​ ಯಶಸ್ವಿ ಜೈಸ್ವಾಲ್​ ಬದಲಿಗೆ 15ರ ಬಳಗಕ್ಕೆ ಸೇರಿಸಿಕೊಂಡಿದ್ದು ಮಾಸ್ಟರ್​ ಸ್ಟ್ರೊಕ್​ ಎನಿಸಿತು. ನಾಲ್ವರು ಸ್ಪಿನ್ನರ್​ಗಳನ್ನು 11ರ ಬಳಗದಲ್ಲಿ ಆಡಿಸುವ ಮೂಲಕ ಭಾರತ ದುಬೈ ಪಿಚ್​ಅನ್ನು ಸಮರ್ಥವಾಗಿ ಬಳಸಿಕೊಂಡಿತು.

ಅಕ್ಷರ್​ಗೆ ಬಡ್ತಿ, ರಾಹುಲ್​ ಕೀಪರ್​

ಅಕ್ಷರ್​ ಪಟೇಲ್​ಗೆ 5ನೇ ಕ್ರಮಾಂಕಕ್ಕೆ ಬಡ್ತಿ ನೀಡಿದ ಕ್ರಮಕ್ಕೆ ಆರಂಭದಲ್ಲಿ ಟೀಕೆಗಳು ವ್ಯಕ್ತವಾದರೂ, ಭಾರತ ಈ ಕಾರ್ಯತಂತ್ರವನ್ನು ಮುಂದುವರಿಸಿತು. ಇದರಿಂದ ಭಾರತಕ್ಕೆ 2 ಪ್ರಮುಖ ಲಾಭಗಳಾದವು. ಮೊದಲನೆಯದಾಗಿ ಮಧ್ಯಮ ಕ್ರಮಾಂಕದಲ್ಲಿ ಎಡಗೈ ಬ್ಯಾಟರ್​ ಕೊರತೆ ನೀಗಿತು. ಎರಡನೆಯದಾಗಿ 3ನೇ ಆಲ್ರೌಂಡರ್​ ಬಳಕೆಯಿಂದ 6ನೇ ಬೌಲರ್​ ಕೊರತೆಯೂ ಕಾಡಲಿಲ್ಲ. ಇನ್ನು ಕನ್ನಡಿಗ ಕೆಎಲ್​ ರಾಹುಲ್​ ಅವರನ್ನು ಮೊದಲ ಆದ್ಯತೆಯ ವಿಕೆಟ್​ ಕೀಪರ್​ ಆಗಿ ಬಳಸಿಕೊಳ್ಳುವ ಮೂಲಕ, ಕೆಲವೊಮ್ಮೆ ಅನಗತ್ಯವಾಗಿ ವಿಕೆಟ್​ ಕೈಚೆಲ್ಲುವ ಚಾಳಿಯ ರಿಷಭ್​ ಪಂತ್​ರನ್ನು ಹೊರಗಿಟ್ಟಿತು. ರಾಹುಲ್​ ಸೆಮಿಫೈನಲ್​, ಫೈನಲ್​ನಲ್ಲಿ ಫಿನಿಷರ್​ ಪಾತ್ರವನ್ನು ಪಕ್ವತೆಯಿಂದ ನಿಭಾಯಿಸಿ ತನ್ನ ಆಯ್ಕೆಗೆ ಸಮರ್ಥನೆಯನ್ನೂ ನೀಡಿದರು.

ಆಲ್ರೌಂಡರ್​ಗಳಿಗೆ ಆದ್ಯತೆ

2023ರ ತವರಿನ ಏಕದಿನ ವಿಶ್ವಕಪ್​ ವೇಳೆ ಹಾರ್ದಿಕ್​ ಪಾಂಡ್ಯ ಗಾಯದಿಂದಾಗಿ ಟೂರ್ನಿಯ ನಡುವೆ ಹೊರಬಿದ್ದ ಬಳಿಕ ಭಾರತಕ್ಕೆ 6ನೇ ಬೌಲರ್​ ಕೊರತೆ ಕಾಡಿತ್ತು ಮತ್ತು ಸಂಪೂರ್ಣವಾಗಿ ಐವರು ತಜ್ಞ ಬೌಲರ್​ಗಳನ್ನೇ ನೆಚ್ಚಿಕೊಳ್ಳುವಂತಾಯಿತು. ಭಾರತದ ಪ್ರಮುಖ ಬ್ಯಾಟರ್​ಗಳು ಅರೆಕಾಲಿಕ ಬೌಲರ್​ಗಳಾಗಿರದೆ ಇರುವುದು ಇದಕ್ಕೆ ಕಾರಣವಾಗಿತ್ತು. ಹೀಗಾಗಿ ಭಾರತ ಈ ಬಾರಿ ಮೂವರು ಆಲ್ರೌಂಡರ್​ಗಳಿಗೆ (ಹಾರ್ದಿಕ್​, ಅಕ್ಷರ್​, ಜಡೇಜಾ) ಆಡುವ 11ರ ಬಳಗದಲ್ಲಿ ಸ್ಥಾನ ಕಲ್ಪಿಸುವ ಮೂಲಕ ಆರನೇ ಬೌಲರ್​ ಕೊರತೆ ನೀಗಿಸಿಕೊಂಡಿತು. ಇನ್ನು ಹಾರ್ದಿಕ್​ ಪಾಂಡ್ಯ 2ನೇ ವೇಗಿಯಾಗಿ ಹೊಸ ಚೆಂಡಿನಲ್ಲೇ ದಾಳಿಗೆ ಇಳಿದಿದ್ದರಿಂದ ಭಾರತ ನಾಲ್ವರು ಸ್ಪಿನ್ನರ್​ಗಳ ಕಾರ್ಯತಂತ್ರವನ್ನು ಯಶಸ್ವಿಗೊಳಿಸಲು ನೆರವಾಯಿತು.

ತಂಡ ಆಯ್ಕೆಯಲ್ಲಿ ದಿಟ್ಟ ನಡೆ

ಈ ಸಲ ಚಾಂಪಿಯನ್ಸ್​ ಟ್ರೋಫಿಗೆ 15ರ ಬಳಗವನ್ನು ಆರಿಸುವಾಗಲೇ ಭಾರತ ತಂಡದ ಮ್ಯಾನೇಜ್​ಮೆಂಟ್​ ಕೆಲ ಬೋಲ್ಡ್​ ಹೆಜ್ಜೆ ಇಟ್ಟಿತು. ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ತನಗೆ ಏನು ಬೇಕೋ ಅದನ್ನು ಆಯ್ದುಕೊಳ್ಳುವುದಕ್ಕೆ ಆದ್ಯತೆ ನೀಡಿತು. ಕಳೆದ 2 ವರ್ಷಗಳಿಂದ ಭಾರತ ಪರ ಏಕದಿನ ಕ್ರಿಕೆಟ್​ನಲ್ಲಿ ಗರಿಷ್ಠ ವಿಕೆಟ್​ ಕಬಳಿಸಿದ ವೇಗಿ ಆಗಿದ್ದರೂ, ಹಳೆಯ ಚೆಂಡಿನಲ್ಲಿ ಪರಿಣಾಮಕಾರಿ ಎನಿಸದ ಕಾರಣ ಮೊಹಮದ್​ ಸಿರಾಜ್​ರನ್ನು ಹೊರಗಿಡಲಾಯಿತು. ಜಸ್​ಪ್ರೀತ್​ ಬುಮ್ರಾ ಫಿಟ್​ ಆಗದೆ ಟೂರ್ನಿಯಿಂದ ಹೊರಬಿದ್ದಾಗ ಯುವವೇಗಿ ಹರ್ಷಿತ್​ ರಾಣಾಗೆ ಸ್ಥಾನ ಕಲ್ಪಿಸಲಾಯಿತು. ಇನ್ನು ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ರನ್ನು ಕೊನೇಕ್ಷಣದಲ್ಲಿ ಕೈಬಿಟ್ಟು, ತವರಿನ ಇಂಗ್ಲೆಂಡ್​ ವಿರುದ್ಧ ಟಿ20 ಸರಣಿಯಲ್ಲಿ ಮಿಂಚಿದ್ದ ವರುಣ್​ ಚಕ್ರವರ್ತಿಗೆ 5ನೇ ಸ್ಪಿನ್ನರ್​ ಆಗಿ ತಂಡಕ್ಕೆ ಪ್ರವೇಶ ನೀಡಲಾಯಿತು. ಅದುವರೆಗೆ ಏಕದಿನ ಪಂದ್ಯವನ್ನೇ ಆಡಿರದ ಚಕ್ರವರ್ತಿಯನ್ನು ಸೇರಿಸಿದ್ದು ಅತ್ಯಂತ ರಿಸ್ಕ್​ನಿಂದ ಕೂಡಿದ ನಡೆಯಾಗಿತ್ತು.

ರೋಹಿತ್​ ಶರ್ಮ ಪವರ್​ಪ್ಲೇ

ತವರಿನ 2023ರ ಏಕದಿನ ವಿಶ್ವಕಪ್​ನಲ್ಲಿ ಆರಂಭದಲ್ಲೇ ಬಿರುಸಿನ ಆಟವಾಡುವ ಮೂಲಕ "ಪವರ್​ಪ್ಲೇ ಓವರ್​ಗಳ ಲಾಭವೆತ್ತಿದ್ದ ನಾಯಕ ರೋಹಿತ್​ ಶರ್ಮ ಹೆಚ್ಚಿನ ಪಂದ್ಯಗಳಲ್ಲಿ ಉಪಯುಕ್ತ ಕೊಡುಗೆ ನೀಡಿದ್ದರು. ಆಸ್ಟ್ರೆಲಿಯಾ ವಿರುದ್ಧದ ಫೈನಲ್​ನಲ್ಲೂ ಭಾರತಕ್ಕೆ ಬಿರುಸಿನ ಆರಂಭ ಒದಗಿಸಿದ್ದರು. ಆದರೆ ಆಗ ಅವರು ಔಟಾದ ಬಳಿಕ ಭಾರತ ಕುಸಿದು ಮುಗ್ಗರಿಸಿತ್ತು. ಈ ಬಾರಿ ಚಾಂಪಿಯನ್ಸ್​ ಟ್ರೋಫಿಯಲ್ಲೂ ಇದೇ "ಪವರ್​ಪ್ಲೇ' ಮುಂದುವರಿಸಿದ ರೋಹಿತ್​, ಕಿವೀಸ್​ ವಿರುದ್ಧದ ಫೈನಲ್​ನಲ್ಲಿ ಸ್ಪರ್ಧಾತ್ಮಕ ಮೊತ್ತದ ಚೇಸಿಂಗ್​ ವೇಳೆ ಎಲ್ಲಕ್ಕಿಂತ ಹೆಚ್ಚು ನಿರ್ಣಾಯಕ ಪಾತ್ರ ವಹಿಸಿದರು. ಆರಂಭದಲ್ಲೇ ವೇಗವಾಗಿ ರನ್​ ಗಳಿಸಿ ಕಿವೀಸ್​ ಬೌಲರ್​ಗಳ ಮೇಲೆ ಅವರು ಒತ್ತಡ ಹೇರಿದ್ದರಿಂದ ಭಾರತದ ಮಧ್ಯಮ ಕ್ರಮಾಂಕ ಹೆಚ್ಚಿನ ಒತ್ತಡವಿಲ್ಲದೆ ಯಶಸ್ವಿ ಚೇಸಿಂಗ್​ ಮಾಡುವಂತಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net