ಟೀಮ್​ ಇಂಡಿಯಾದ ಶ್ರೀಲಂಕಾ ಪ್ರವಾಸ ವೇಳಾಪಟ್ಟಿ ಪ್ರಕಟ

ind vs sl web
Published on

ನವದೆಹಲಿ: ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಮತ್ತು ಆತಿಥೇಯ ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯ ನಡುವೆ ಭಾರತ ತಂಡ ಶ್ರೀಲಂಕಾದಲ್ಲಿ ಆಡಲಿರುವ ಸೀಮಿತ ಓವರ್​ ಕ್ರಿಕೆಟ್​ ಸರಣಿಯ ವೇಳಾಪಟ್ಟಿ ಸೋಮವಾರ ಅಧಿಕೃತವಾಗಿ ಪ್ರಕಟಗೊಂಡಿದೆ. ವಿರಾಟ್​ ಕೊಹ್ಲಿ ಸಾರಥ್ಯದ ಟೀಮ್​ ಇಂಡಿಯಾದ ಈ ವೇಳೆ ಇಂಗ್ಲೆಂಡ್​ನಲ್ಲಿ ಬಯೋಬಬಲ್​ನಲ್ಲಿರುವ ಕಾರಣದಿಂದಾಗಿ ಲಂಕಾ ಪ್ರವಾಸಕ್ಕೆ ಭಾರತದ 2ನೇ ಸ್ತರದ ತಂಡವನ್ನು ಬಿಸಿಸಿಐ ಕಳುಹಿಸಿಕೊಡುವ ನಿರೀಕ್ಷೆ ಇದೆ.

ಪಂದ್ಯಗಳನ್ನು ನೇರಪ್ರಸಾರ ಮಾಡಲಿರುವ ಸೋನಿ ನೆಟ್​ವರ್ಕ್​ ಪ್ರಕಾರ ಜುಲೈ 13ರಂದು ಏಕದಿನ ಸರಣಿಯ ಮೂಲಕ ಪ್ರವಾಸಕ್ಕೆ ಚಾಲನೆ ಸಿಗಲಿದೆ. ಬಳಿಕ ಜುಲೈ 16 ಮತ್ತು 18ರಂದು 2 ಏಕದಿನ ಪಂದ್ಯಗಳು ನಡೆಯಲಿವೆ. ಜುಲೈ 21, 23 ಮತ್ತು 25ರಂದು 3 ಟಿ20 ಪಂದ್ಯಗಳು ನಡೆಯಲಿವೆ. ಸೋನಿ ಟೆನ್​ 1, ಸೋನಿ ಟೆನ್​ 3, ಸೋನಿ ಟೆನ್​ 4 ಮತ್ತು ಸೋನಿ ಸಿಕ್ಸ್​ ಚಾನಲ್​ಗಳಲ್ಲಿ ಪಂದ್ಯಗಳು ನೇರಪ್ರಸಾರ ಕಾಣಲಿವೆ ಎಂದು ತಿಳಿಸಲಾಗಿದೆ. ಆದರೆ ಪಂದ್ಯ ಆರಂಭಗೊಳ್ಳುವ ಸಮಯ ಮತ್ತು ಪಂದ್ಯ ನಡೆಯುವ ಸ್ಥಳಗಳನ್ನು ಖಚಿತಪಡಿಸಲಾಗಿಲ್ಲ.

ಕರೊನಾ ಕಾಲದ ಆಥಿರ್ಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾ ಕ್ರಿಕೆಟ್​ ಮಂಡಳಿಗೆ ನೆರವಾಗುವ ಸಲುವಾಗಿ ಭಾರತ ತಂಡ ಪ್ರವಾಸದಲ್ಲಿ ಹೆಚ್ಚಿನ ಟಿ20 ಪಂದ್ಯಗಳನ್ನು ಆಡಲಿದೆ ಎಂದು ಈ ಮುನ್ನ ವರದಿಯಾಗಿದ್ದರೂ, ಈ ಹಿಂದೆ ನಿಗದಿಯಾದಂತೆ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳಷ್ಟೇ ನಡೆಯಲಿದೆ.

ಪ್ರವಾಸಕ್ಕೆ ಶಿಖರ್​ ಧವನ್​ ಸಾರಥ್ಯದಲ್ಲಿ ಭಾರತ ತಂಡ ತೆರಳುವ ನಿರೀಕ್ಷೆ ಇದ್ದು, ಐಪಿಎಲ್​ನಲ್ಲಿ ಮಿಂಚಿದ ಹಲವು ಯುವ ಆಟಗಾರರು ಅವಕಾಶ ಪಡೆಯಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಪ್ರವಾಸಕ್ಕಾಗಿ ಭಾರತದ 2ನೇ ಸ್ತರದ ತಂಡಕ್ಕೆ ಹೊಸ ಕೋಚ್​ ಕೂಡ ನೇಮಕಗೊಳ್ಳಬೇಕಾಗಿದೆ. ಎನ್​ಸಿಎ ಮುಖ್ಯಸ್ಥ ರಾಹುಲ್​ ದ್ರಾವಿಡ್​ ಮುಖ್ಯ ಕೋಚ್​ ಆಗಿರುತ್ತಾರೆ ಎಂದೂ ಈಗಾಗಲೆ ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net