

ನವದೆಹಲಿ: ನಿರೀಕ್ಷೆಯಂತೆಯೇ ಇಂಗ್ಲೆಂಡ್ ತಂಡದ ಮುಂಬರುವ ಭಾರತ ಪ್ರವಾಸದ ಸೀಮಿತ ಓವರ್ ಸರಣಿಗಳು ಮುಂದೂಡಿಕೆಯಾಗಿವೆ. ಈ ವರ್ಷ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಯಬೇಕಾಗಿದ್ದ ಪ್ರವಾಸ ಕರೊನಾ ಹಾವಳಿಯಿಂದಾಗಿ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿದೆ.
ಇಂಗ್ಲೆಂಡ್ ತಂಡ ಭಾರತ ಪ್ರವಾಸದಲ್ಲಿ ತಲಾ 3 ಏಕದಿನ ಮತ್ತು ಟಿ20 ಪಂದ್ಯಗಳನ್ನು ಆಡಬೇಕಾಗಿತ್ತು. ಈ ಸರಣಿಗಳು ಇನ್ನು ಮುಂದಿನ ವರ್ಷದ ಆರಂಭದಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸದಲ್ಲಿ ಆಡಲಿರುವ ಟೆಸ್ಟ್ ಸರಣಿಯ ವೇಳೆಯೇ ಮರುನಿಗದಿಯಾಗಲಿವೆ. ಸೆಪ್ಟೆಂಬರ್-ನವೆಂಬರ್‌ನಲ್ಲಿ ಐಪಿಎಲ್ ಟೂರ್ನಿ ನಿಗದಿಯಾಗಿರುವ ಹಿನ್ನೆಲೆಯಲ್ಲೂ ಈ ಸರಣಿ ಆಯೋಜನೆ ಅಸಾಧ್ಯವೆನಿಸಿತ್ತು.
ಬಿಸಿಸಿಐ ಮತ್ತು ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗಳ ಒಮ್ಮತದ ನಿರ್ಧಾರದ ಮೇರೆಗೆ ಪ್ರವಾಸ ಮುಂದೂಡಿಕೆಯಾಗಿದೆ. 2021ರ ಜನವರಿ ಅಂತ್ಯದಿಂದ ಮಾರ್ಚ್ ಅಂತ್ಯದವರೆಗೆ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಟೆಸ್ಟ್, ಏಕದಿನ, ಟಿ20 ಸರಣಿಗಳನ್ನು ಆಡಲಿದೆ ಎಂದು ಬಿಸಿಸಿಐ ತಿಳಿಸಿದೆ. ಆದರೆ ಪ್ರವಾಸದಲ್ಲಿ ಇಂಗ್ಲೆಂಡ್ ತಂಡ 5 ಟೆಸ್ಟ್‌ಗಳಿಗೆ ಬದಲಿಯಾಗಿ 4 ಟೆಸ್ಟ್‌ಗಳನ್ನಷ್ಟೇ ಆಡುವ ಸಾಧ್ಯತೆ ಇದೆ.
ಭಾರತ ತಂಡ ಕಳೆದ ಮಾರ್ಚ್‌ನಿಂದ ಯಾವುದೇ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿ ಆಡಿಲ್ಲ. ಆಗ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ನಿಗದಿಯಾಗಿದ್ದ ಏಕದಿನ ಸರಣಿ ಕರೊನಾ ಹಾವಳಿಯಿಂದಾಗಿ ಮೊಟಕುಗೊಂಡಿತ್ತು. ಬಳಿಕ ಜೂನ್-ಜುಲೈನಲ್ಲಿ ನಿಗದಿಯಾಗಿದ್ದ ಶ್ರೀಲಂಕಾ, ಜಿಂಬಾಬ್ವೆ ಪ್ರವಾಸಗಳು ರದ್ದುಗೊಂಡಿದ್ದವು.