

ಬೆಂಗಳೂರು: ಭಾರತೀಯ ಕ್ರಿಕೆಟ್ ಚಿತ್ರಣವನ್ನೇ ಬದಲಾಯಿಸಿದ 1983ರ ಏಕದಿನ ವಿಶ್ವಕಪ್ ಗೆಲುವಿಗೆ ಗುರುವಾರ 37 ವರ್ಷ ಪೂರ್ಣಗೊಂಡಿದೆ. ಭಾರತ ತಂಡ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿಯೂ ಗುರುವಾರಕ್ಕೆ 88 ವರ್ಷ ಪೂರ್ಣಗೊಂಡಿದೆ ಎಂಬುದು ವಿಶೇಷ. 1932ರ ಜೂನ್ 25ರಿಂದ 28ರವರೆಗೆ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲೇ ಆತಿಥೇಯ ಇಂಗ್ಲೆಂಡ್ ವಿರುದ್ಧ ಭಾರತ ತಂಡ ತನ್ನ ಚೊಚ್ಚಲ ಟೆಸ್ಟ್ ಪಂದ್ಯವನ್ನೂ ಆಡಿತ್ತು. ಸಿಕೆ ನಾಯ್ಡು ಭಾರತ ತಂಡದ ನಾಯಕರಾಗಿದ್ದರು. ವೇಗಿ ಮೊಹಮದ್ ನಿಸಾರ್ ಭಾರತ ಪರ ಮೊದಲ ಎಸೆತ ಎಸೆದಿದ್ದರೆ, ವಿಕೆಟ್ ಕೀಪರ್-ಆರಂಭಿಕ ಜನಾರ್ದನ್ ನಾವ್ಲೆ ಮೊದಲ ಎಸೆತ ಎದುರಿಸಿದ್ದರು.
ಟಾಸ್ ಗೆದ್ದು ಬ್ಯಾಟಿಂಗ್‌ಗೆ ಇಳಿದಿದ್ದ ಇಂಗ್ಲೆಂಡ್ 250 ರನ್ ಗಳಿಸಿತ್ತು. ಪ್ರತಿಯಾಗಿ ಭಾರತ 189 ರನ್ ಗಳಿಸಿ 61 ರನ್ ಹಿನ್ನಡೆ ಕಂಡಿತು. ಇಂಗ್ಲೆಂಡ್ 2ನೇ ಇನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 275 ರನ್ ಗಳಿಸಿ ಭಾರತಕ್ಕೆ 346 ರನ್ ಸವಾಲೆಸೆದಿತ್ತು. ಪ್ರತಿಯಾಗಿ ಭಾರತ 187 ರನ್‌ಗೆ ಸರ್ವಪತನ ಕಂಡು 158 ರನ್‌ಗಳಿಂದ ಸೋಲು ಅನುಭವಿಸಿತ್ತು. ಪಂದ್ಯದ 2ನೇ ದಿನದಾಟ ವಿಶ್ರಾಂತಿ ದಿನವಾಗಿತ್ತು. ಭಾರತ ಒಟ್ಟಾರೆ ಮೂರೇ ದಿನಗಳ ಆಟದಲ್ಲಿ ಸೋತರೂ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸಂಭ್ರಮವೇ ಹೆಚ್ಚಾಗಿತ್ತು.
ಇದನ್ನೂ ಓದಿ: ಲಾರ್ಡ್ಸ್ ಮ್ಯಾಜಿಕ್ಗೆ 37 ವರ್ಷ
ಕರೊನಾ ಹಾವಳಿಗೆ ಮುನ್ನ ನ್ಯೂಜಿಲೆಂಡ್ ಪ್ರವಾಸದಲ್ಲಿ ಕ್ರೈಸ್ಟ್‌ಚರ್ಚ್‌ನಲ್ಲಿ ಭಾರತ ಕೊನೆಯ ಟೆಸ್ಟ್ ಪಂದ್ಯವಾಡಿದೆ. ಕಳೆದ 88 ವರ್ಷಗಳಲ್ಲಿ ಒಟ್ಟು 542 ಟೆಸ್ಟ್ ಪಂದ್ಯಗಳನ್ನು ಆಡಿರುವ ಭಾರತ ತಂಡ, 157ರಲ್ಲಿ ಜಯಿಸಿದ್ದು, 167ರಲ್ಲಿ ಸೋಲು ಕಂಡಿದೆ. 1 ಟೆಸ್ಟ್‌ದಲ್ಲಿ ಟೈ ಸಾಧಿಸಿದ್ದರೆ, 217 ಟೆಸ್ಟ್‌ಗಳಲ್ಲಿ ಡ್ರಾ ಕಂಡಿದೆ. ಭಾರತದ ಗೆಲುವಿನ ಶೇಕಡ 28.96.
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್: 250 (ಜಾರ್ಡಿನ್ 79, ಆಮಿಸ್ 65, ನಿಸಾರ್ 93ಕ್ಕೆ 5, ಅಮರ್ ಸಿಂಗ್ 75ಕ್ಕೆ 2, ಸಿಕೆ ನಾಯ್ಡು 40ಕ್ಕೆ 2) ಮತ್ತು 8 ವಿಕೆಟ್‌ಗೆ 275 ಡಿಕ್ಲೇರ್ (ಜಾರ್ಡಿನ್ 85, ಪೇನ್‌ಟರ್ 54, ಜಹಂಗೀರ್ ಖಾನ್ 60ಕ್ಕೆ 4, ಅಮರ್ ಸಿಂಗ್ 84ಕ್ಕೆ 2), ಭಾರತ: 189 (ಜಮೂಲ್ 33, ವಜಿರ್ ಅಲಿ 31, ಸಿಕೆ ನಾಯ್ಡು 40, ಕೊಲಾಹ್ 22, ಬೋವಿಸ್ 49ಕ್ಕೆ 4) ಮತ್ತು 187 (ಜಮೂಲ್ 25, ವಜಿರ್ ಅಲಿ 39, ಲಾಲ್ ಸಿಂಗ್ 29, ಅಮರ್ ಸಿಂಗ್ 51, ಬೋವಿಸ್ 30ಕ್ಕೆ 2, ಹಮ್ಮಂಡ್ 9ಕ್ಕೆ 3 ವೋಸ್ 29ಕ್ಕೆ 2).
ಇದನ್ನೂ ಓದಿ: ಸಹೋದರರೊಂದಿಗೆ ಕೇರಂ ಆಡಿದ ಹಾರ್ದಿಕ್ ಪಾಂಡ್ಯ.!
ಭಾರತದ ಮೊದಲ ಟೆಸ್ಟ್ ತಂಡ: ಸಿಕೆ ನಾಯ್ಡು (ನಾಯಕ), ಜನಾರ್ದನ್ ನಾವ್ಲೆ, ನೂಮಲ್ ಜೂಮಲ್, ಸಯ್ಯದ್ ವಜಿರ್ ಅಲಿ, ಸರಬ್‌ಜಿ ಕೋಲಹ್, ಲಾಲ್ ಸಿಂಗ್, ನಜಿರ್ ಅಲಿ, ಜಹಂಗೀರ್ ಖಾನ್, ಅಮರ್ ಸಿಂಗ್, ಮೊಹಮದ್ ನಿಸಾರ್, ಫಿರೋಜ್ ಪಲಿಯಾ.