

ನವದೆಹಲಿ: ನೆರೆರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಜತೆಗಿನ ಭಾರತದ ರಾಜತಾಂತ್ರಿಕ ಬಿಕ್ಕಟ್ಟಿನಿಂದಾಗಿ ಹಾಲಿ ವರ್ಷದ ಏಷ್ಯಾಕಪ್ ಕ್ರಿಕೆಟ್ ಟೂರ್ನಿ ರದ್ದುಗೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ಪೂರ್ವಸಿದ್ಧತೆಯಾಗಿ ಹಾಲಿ ವರ್ಷದ ಏಷ್ಯಾಕಪ್ ಟೂರ್ನಿ ಸೆಪ್ಟೆಂಬರ್ನಲ್ಲಿ ಚುಟುಕು ಕ್ರಿಕೆಟ್ ಮಾದರಿಯಲ್ಲೇ ನಿಗದಿಯಾಗಿದೆ. ಆದರೆ ಪಹಲ್ಗಾಮ್ ಉಗ್ರರ ದಾಳಿಯ ನಂತರ ಪಾಕಿಸ್ತಾನ ಜತೆಗಿನ ಸಂಬಂಧ ಮತ್ತಷ್ಟು ಹಳಸಿದ್ದು, ಭಾರತ ಸದ್ಯ ಸಾಂಪ್ರದಾಯಿಕ ಎದುರಾಳಿಯ ವಿರುದ್ಧ ಕ್ರಿಕೆಟ್ ಆಡುವ ಮನಸ್ಥಿತಿಯಲ್ಲಿ ಇಲ್ಲ. ಮತ್ತೊಂದೆಡೆ, ಹಿಂದುಗಳ ಮೇಲಿನ ದೌರ್ಜನ್ಯದಿಂದ ಸಂಬಂಧ ಕೆಡಿಸಿಕೊಂಡಿರುವ ಬಾಂಗ್ಲಾದ ನಿವೃತ್ತ ಸೇನಾ ಅಧಿಕಾರಿಯೊಬ್ಬ ಇತ್ತೀಚೆಗೆ ಭಾರತದ ವಿರುದ್ಧ ಹೇಳಿಕೆ ನೀಡಿದ್ದಾನೆ. ಇದರಿಂದಾಗಿ ಬಾಂಗ್ಲಾ ಜತೆಗಿನ ಕ್ರಿಕೆಟ್ ಸಂಬಂಧವೂ ಹಳಸುವ ಸಾಧ್ಯತೆ ಕಾಣಿಸಿದೆ.
ಪಾಕಿಸ್ತಾನ, ಬಾಂಗ್ಲಾದೇಶದ ಬಗ್ಗೆ ಕೇಂದ್ರ ಸರ್ಕಾರ ಸದ್ಯ ಕಠಿಣ ನಿಲುವು ತಳೆದಿದೆ. ಹೀಗಾಗಿ ಇವೆರಡು ದೇಶಗಳ ಜತೆಗೆ ಭಾರತ ಕ್ರಿಕೆಟ್ ಆಡಬೇಕಾದರೆ ಕೇಂದ್ರ ಸರ್ಕಾರದ ಅನುಮತಿ ಪಡೆಯುವುದು ಕಡ್ಡಾಯವೆನಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಬಿಸಿಸಿಐಗೆ ಕೇಂದ್ರ ಸರ್ಕಾರ ಅನುಮತಿ ನೀಡುವ ಸಾಧ್ಯತೆ ಇಲ್ಲವೆನಿಸಿದೆ.
ಏಷ್ಯಾಕಪ್ ಈ ಬಾರಿ ಭಾರತದ ಆತಿಥ್ಯದಲ್ಲೇ ನಿಗದಿಯಾಗಿತ್ತು. ಆದರೆ ನಂತರ ಹೈಬ್ರಿಡ್ ಮಾದರಿಯಲ್ಲಿ ನಡೆಸುವುದಾಗಿ ಹೇಳಲಾಗಿತ್ತು. ಇತ್ತೀಚೆಗೆ ಟೂರ್ನಿಯನ್ನು ತಟಸ್ಥ ತಾಣದಲ್ಲಿ ನಡೆಸುವ ಸಾಧ್ಯತೆ ಕಾಣಿಸಿತ್ತು. ಆದರೆ ಈಗ ಟೂರ್ನಿ ನಿಗದಿಯಂತೆ ನಡೆಯುವುದೇ ಅನುಮಾನವೆನಿಸಿದೆ. ಯಾಕೆಂದರೆ ಭಾರತ-ಪಾಕಿಸ್ತಾನ ಪಂದ್ಯವಿಲ್ಲದಿದ್ದರೆ ಏಷ್ಯಾಕಪ್ ಆಯೋಜನೆಯೇ ಆಗುವುದಿಲ್ಲ. 8 ದೇಶಗಳ ಟೂರ್ನಿಯಲ್ಲಿ ಬಾಂಗ್ಲಾ ಜತೆಗೆ ಶ್ರೀಲಂಕಾ, ಅ್ಘಾನಿಸ್ತಾನ, ಹಾಂಕಾಂಗ್, ಓಮನ್, ಯುಎಇ ಆಡುವ ಇತರ ದೇಶಗಳಾಗಿವೆ.
ಪಹಲ್ಗಾಮ್ ಉಗ್ರರ ದಾಳಿಯ ನಂತರ ಭಾರತ, ಪಾಕಿಸ್ತಾನ ಜತೆಗಿನ ಬಹುತೇಕ ಎಲ್ಲ ಸಂಬಂಧಗಳನ್ನು ಕಡಿದುಕೊಂಡಿದೆ. ಕ್ರಿಕೆಟ್ ಕೂಡ ಇದರಿಂದ ಹೊರತಾಗುವುದಿಲ್ಲ. ಹೀಗಾಗಿ ಬಿಸಿಸಿಐ ಇತ್ತೀಚೆಗೆ ಐಸಿಸಿ ಟೂರ್ನಿಗಳಲ್ಲೂ ಭಾರತ-ಪಾಕಿಸ್ತಾನ ತಂಡಗಳನ್ನು ಒಂದೇ ಗುಂಪಿನಲ್ಲಿ ಹಾಕಬಾರದೆಂದು ಮನವಿ ಸಲ್ಲಿಸಿದೆ ಎಂದೂ ವರದಿಯಾಗಿತ್ತು.
ಆಗಸ್ಟ್ನಲ್ಲಿ ಬಾಂಗ್ಲಾ ಪ್ರವಾಸವೂ ಡೌಟ್
ಪಾಕಿಸ್ತಾನದ ಮೇಲೆ ಭಾರತ ದಾಳಿ ನಡೆಸಿದರೆ, ಚೀನಾದಿಂದ ಸಹಾಯವನ್ನು ಪಡೆದು ನಾವು ಭಾರತದ ಈಶಾನ್ಯದ 7 ರಾಜ್ಯಗಳನ್ನು ವಶಪಡಿಸಿಕೊಳ್ಳಲಿದ್ದೇವೆ ಎಂದು ಬಾಂಗ್ಲಾದ ಮಧ್ಯಂತರ ಸರ್ಕಾರಕ್ಕೆ ಆಪ್ತನಾಗಿರುವ ನಿವೃತ್ತ ಸೇನಾಧಿಕಾರಿ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾನೆ. ಇದರಿಂದ ಬಾಂಗ್ಲಾ ವಿರುದ್ಧದ ಭಾರತೀಯರ ಆಕ್ರೋಶ ಮತ್ತಷ್ಟು ಹೆಚ್ಚಾಗಿದೆ. ಇದರಿಂದಾಗಿ, ಆಗಸ್ಟ್ನಲ್ಲಿ ನಿಗದಿಯಾಗಿರುವ ತಲಾ 3 ಏಕದಿನ, ಟಿ20 ಪಂದ್ಯಗಳ ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡವನ್ನು ಬಿಸಿಸಿಐ ಕಳುಹಿಸಿರುವುದು ಅನುಮಾನವೆನಿಸಿದೆ. ಹಾಲಿ ಸನ್ನಿವೇಳದಲ್ಲಿ ಬಾಂಗ್ಲಾ ಪ್ರವಾಸವನ್ನು ರದ್ದುಗೊಳಿಸುವ ಸಾಧ್ಯತೆ ಹೆಚ್ಚಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.