ಪ್ಲೇಆಫ್​ಗೆ ಏರುವುದಲ್ಲ ನಮ್ಮ ಗುರಿ ಬೇರೆಯೇ ಇದೆ ಎಂದ ಆರ್​ಸಿಬಿ ನಾಯಕ ರಜತ್​ ಪಾಟೀದಾರ್​

web patidar
Published on

ನವದೆಹಲಿ: ತವರಿನಾಚೆ ಆಡಿರುವ 6 ಪಂದ್ಯಗಳಲ್ಲೂ ಗೆದ್ದಿರುವುದಲ್ಲದೆ, ಒಟ್ಟು 10 ಪಂದ್ಯಗಳಲ್ಲಿ 7 ಜಯ ದಾಖಲಿಸುವ ಮೂಲಕ ಆರ್​ಸಿಬಿ ತಂಡ ಈಗಾಗಲೆ ಪ್ಲೇಆಫ್​ ಸನಿಹ ತಲುಪಿದೆ. ಉಳಿದ 4 ಪಂದ್ಯಗಳಲ್ಲಿ 1ರಲ್ಲಿ ಗೆದ್ದರೂ ಆರ್​ಸಿಬಿ ಪ್ಲೇಆಫ್​​ ಪ್ರವೇಶ ಖಚಿತವಾಗಲಿದೆ. ಹೀಗಾಗಿ ಆರ್​ಸಿಬಿ ತಂಡದ ಮುಂದಿನ ಗುರಿ ಪ್ಲೇಆಫ್​ ಪ್ರವೇಶ ಮಾತ್ರವಲ್ಲ, ಅಂಕಪಟ್ಟಿಯಲ್ಲಿ ಅಗ್ರ 2ರೊಳಗಿನ ಸ್ಥಾನ ಪಡೆಯುವುದಾಗಿದೆ ಎಂದು ನಾಯಕ ರಜತ್​ ಪಾಟೀದಾರ್​ ಹೇಳಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ 6 ವಿಕೆಟ್​ ಗೆಲುವಿನ ಬಳಿಕ ಮಾತನಾಡಿರುವ ಪಾಟೀದಾರ್​, "ಇನ್ನು ನಮಗೆ ಪ್ರತಿ ಪಂದ್ಯವೂ ಪ್ರಮುಖವಾದುದು. ಯಾಕೆಂದರೆ ಇನ್ನು ನಮ್ಮ ಗುರಿ ಪ್ಲೇಆಫ್​ ಅರ್ಹತೆಯಲ್ಲ, ಅಗ್ರ 2ರೊಳಗಿನ ಸ್ಥಾನ ಸಂಪಾದಿಸುವುದಾಗಿದೆ' ಎಂದಿದ್ದಾರೆ.

ಡೆಲ್ಲಿ ತಂಡದ 163 ರನ್​ ಸವಾಲಿಗೆ ಪ್ರತಿಯಾಗಿ ಆರ್​ಸಿಬಿ, ಜೇಕಬ್​ ಬೆಥೆಲ್​ (12), ದೇವದತ್​ ಪಡಿಕ್ಕಲ್​ (0) ಮತ್ತು ಪಾಟೀದಾರ್​ (6) ವಿಕೆಟ್​ಗಳನ್ನು 4 ಓವರ್​ನೊಳಗೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಗ ವಿರಾಟ್​ ಕೊಹ್ಲಿ (51) ಜತೆಗೂಡಿದ ಕೃನಾಲ್​ ಪಾಂಡ್ಯ (73*) 4ನೇ ವಿಕೆಟ್​ಗೆ 84 ಎಸೆತಗಳಲ್ಲಿ 119 ರನ್​ ಸೇರಿಸಿ ಗೆಲುವಿನ ಹಾದಿ ಸುಗಮಗೊಳಿಸಿದರು. ಕೊನೆಯಲ್ಲಿ ಟಿಮ್​ ಡೇವಿಡ್​ 5 ಎಸೆತಗಳಲ್ಲೇ 19 ರನ್​ ಸಿಡಿಸಿ 9 ಎಸೆತ ಬಾಕಿ ಇರುವಂತೆಯೇ ಆರ್​ಸಿಬಿ ಗೆಲ್ಲಿಸಿದರು.

"ಬೇಗನೆ ವಿಕೆಟ್​ ಬಿದ್ದಾಗ ನಾವು ಒತ್ತಡಕ್ಕೆ ಒಳಗಾಗಿದ್ದೆವು. ಆದರೆ ಕೊಹ್ಲಿ&ಕೃನಾಲ್​ ಲೆಕ್ಕಾಚಾರದ ಇನಿಂಗ್ಸ್​ ಆಡಿದರು. ಅವರ ಆಟ ಖುಷಿ ನೀಡಿತು. ನಮ್ಮ ಬೌಲರ್​ಗಳೂ ಕಾರ್ಯತಂತ್ರಕ್ಕೆ ತಕ್ಕಂತೆ ಬೌಲಿಂಗ್​ ಮಾಡಿದರು' ಎಂದು ಪಾಟೀದಾರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net