

ನ್ಯೂಯಾರ್ಕ್: ಮುಂಬರುವ ಟಿ20 ವಿಶ್ವಕಪ್ ಟೂರ್ನಿಗೆ ಪೂರ್ವಭಾವಿಯಾಗಿ ಆತಿಥೇಯ ಅಮೆರಿಕ ತಂಡ ಏಪ್ರಿಲ್ನಲ್ಲಿ ಕೆನಡ ವಿರುದ್ಧ ಆಡಲಿರುವ 5 ಪಂದ್ಯಗಳ ಟಿ20 ಸರಣಿಗೆ 15 ಆಟಗಾರರ ತಂಡವನ್ನು ಪ್ರಕಟಿಸಲಾಗಿದ್ದು, ಭಾರತ ಮೂಲದ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾನ ಪಡೆದಿದ್ದಾರೆ. ಮುಂಬೈ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳ ಮಾಜಿ ಎಡಗೈ ಸ್ಪಿನ್ನರ್ ಹಮೀರ್ತ್ ಸಿಂಗ್ ಮತ್ತು ಆರ್ಸಿಬಿಯ ಮಾಜಿ ಬ್ಯಾಟರ್ ಮಿಲಿಂದ್ ಕುಮಾರ್ ಇದರಲ್ಲಿ ಪ್ರಮುಖವಾದವರು. ಇವರಿಬ್ಬರು ಇತ್ತೀಚೆಗೆ ಭಾರತದಿಂದ ವಲಸೆ ಹೋಗಿ ಅಮೆರಿಕದಲ್ಲಿ ನೆಲೆಸಿದ್ದರು.
ಹಮೀರ್ತ್ ಸಿಂಗ್ 2012ರಲ್ಲಿ 19 ವಯೋಮಿತಿ ವಿಶ್ವಕಪ್ ಗೆದ್ದ ಭಾರತ ತಂಡದ ಪ್ರಮುಖ ಆಟಗಾರರೂ ಆಗಿದ್ದರು. ಆ ತಂಡದ ನಾಯಕರಾಗಿದ್ದ ಉನ್ಮುಕ್ ಚಂದ್ ಕೂಡ ಅಮೆರಿಕಕ್ಕೆ ವಲಸೆ ಹೋಗಿ ಮೇಜರ್ ಕ್ರಿಕೆಟ್ ಲೀಗ್ನಲ್ಲಿ ಆಡಿದ್ದರು. ಆದರೂ ಅಮೆರಿಕದ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ವಿಲರಾಗಿದ್ದಾರೆ. ನ್ಯೂಜಿಲೆಂಡ್ನ ಮಾಜಿ ಆಲ್ರೌಂಡರ್ ಕೋರಿ ಆಂಡರ್ಸನ್ ಅಮೆರಿಕ ಟಿ20 ತಂಡದಲ್ಲಿ ಸ್ಥಾನ ಪಡೆದಿರುವ ಮತ್ತೋರ್ವ ಪ್ರಮುಖರು.
2012ರಿಂದ 2018ರ ನಡುವೆ ಕಿವೀಸ್ ಪರ 13 ಟೆಸ್ಟ್, 49 ಏಕದಿನ ಮತ್ತು 31 ಟಿ20 ಪಂದ್ಯಗಳನ್ನು ಆಡಿರುವ ಕೋರಿ ಆಂಡರ್ಸನ್, 2014ರಲ್ಲಿ ವಿಂಡೀಸ್ ವಿರುದ್ಧ 36 ಎಸೆತಗಳಲ್ಲೇ ಶತಕ ಸಿಡಿಸಿದ್ದು, ಆಗ ಏಕದಿನ ಕ್ರಿಕೆಟ್ನಲ್ಲಿ ಅತಿವೇಗದ ಶತಕದ ವಿಶ್ವದಾಖಲೆ ಎನಿಸಿತ್ತು. 33 ವರ್ಷದ ಕೋರಿ ಆಂಡರ್ಸನ್ ಎರಡು ದೇಶಗಳ ಪರ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ ಅಪರೂಪದ ಆಟಗಾರರ ಸಾಲಿಗೂ ಸೇರಲಿದ್ದಾರೆ.
ಗುಜರಾತ್ ಮೂಲದ ವಿಕೆಟ್ ಕೀಪರ್-ಬ್ಯಾಟರ್ ಮೋನಂಕ್ ಪಟೇಲ್ ಅಮೆರಿಕ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ. ಗಜಾನಂದ್ ಸಿಂಗ್, ಜೆಸ್ಸಿ ಸಿಂಗ್, ನಿಸರ್ಗ್ ಪಟೇಲ್, ನಿತೀಶ್ ಕುಮಾರ್, ಸೌರಭ್ ನೇತ್ರವಲ್ಕರ್ ತಂಡದಲ್ಲಿರುವ ಇತರ ಭಾರತ ಮೂಲದ ಆಟಗಾರರಾಗಿದ್ದಾರೆ.