

ಜೈಪುರ: ರಾಜಸ್ಥಾನದ 186 ರನ್ ಸವಾಲಿಗೆ ಪ್ರತಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ 19 ಓವರ್ಗಳಲ್ಲಿ 5 ವಿಕೆಟ್ಗೆ 169 ರನ್ ಗಳಿಸಿತ್ತು ಮತ್ತು ಕೊನೇ ಓವರ್ನಲ್ಲಿ ಗೆಲುವಿಗೆ 17 ರನ್ ಅಗತ್ಯವಿತ್ತು. ಆಗ ದಾಳಿಗಿಳಿದ ವೇಗಿ ಆವೇಶ್ ಖಾನ್ 4 ರನ್ ಮಾತ್ರ ಬಿಟ್ಟುಕೊಟ್ಟು ರಾಜಸ್ಥಾನ ರಾಯಲ್ಸ್ಗೆ 12 ರನ್ಗಳಿಂದ ಗೆಲುವು ತಂದುಕೊಟ್ಟರು. "ಇದು ನಾನು ಎಸೆದ ಜೀವನದ ಅತ್ಯುತ್ತಮ ಕೊನೇ ಓವರ್ ಆಗಿದೆ' ಎಂದು ಆವೇಶ್ ಖಾನ್ ಪಂದ್ಯದ ಬಳಿಕ ಸಂಭ್ರಮಿಸಿದರು.
"ನಾನು ಕೊನೇ ಓವರ್ ಎಸೆದಿದ್ದು ಇದೇ ಮೊದಲೇನಲ್ಲ. ಕಳೆದ ವರ್ಷ ಲಖನೌ ತಂಡದಲ್ಲಿದ್ದಾಗ ರಾಜಸ್ಥಾನ ವಿರುದ್ಧವೂ ಕೊನೇ ಓವರ್ನಲ್ಲಿ ಗೆಲುವು ತಂದಿದ್ದೆ. ನಾನು ಡೆಲ್ಲಿ ತಂಡದಲ್ಲಿದ್ದಾಗಲೂ ಕೊನೇ ಓವರ್ ಎಸೆಯುತ್ತಿದ್ದೆ. ಆದರೆ ಅದೆಲ್ಲಕ್ಕಿಂತ ಇದೇ ನನ್ನ ಅತ್ಯುತ್ತಮ ಕೊನೇ ಓವರ್ ಎನ್ನುವೆ. ಎಲ್ಲ ಎಸೆತಗಳನ್ನೂ ವೈಡ್ ಯಾರ್ಕರ್ ಆಗಿ ಒಂದೇ ಕಡೆಗೆ ಎಸೆಯುವಲ್ಲಿ ಯಶಸ್ವಿಯಾದೆ' ಎಂದು ಆವೇಶ್ ಹೇಳಿದರು.
ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿದ ವೇಗಿ ನಾಂಡ್ರೆ ರ್ಬಗರ್ (29ಕ್ಕೆ 2), ಮಿಚೆಲ್ ಮಾರ್ಷ್ (23), ರಿಕಿ ಭುಯಿ (0) ವಿಕೆಟ್ ಕಬಳಿಸಿ ಡೆಲ್ಲಿಗೆ ಆರಂಭಿಕ ಆಘಾತ ನೀಡಿದರು. ಆಗ ಜತೆಗೂಡಿದ ಡೇವಿಡ್ ವಾರ್ನರ್ (49) ಮತ್ತು ನಾಯಕ ರಿಷಭ್ ಪಂತ್ (28) 3ನೇ ವಿಕೆಟ್ಗೆ 46 ಎಸೆತಗಳಲ್ಲಿ 67 ರನ್ ಸೇರಿಸಿ ಡೆಲ್ಲಿ ಚೇಸಿಂಗ್ಗೆ ಬಲ ತುಂಬಿದರು. ಆದರೆ 8 ರನ್ ಅಂತರದಲ್ಲಿ ಇವರಿಬ್ಬರ ವಿಕೆಟ್ ಕಬಳಿಸಿದ ರಾಜಸ್ಥಾನ ಮತ್ತೆ ಮೇಲುಗೈ ಸಾಧಿಸಿತು. ಕೊನೆಯಲ್ಲಿ ಟ್ರಿಸ್ಟಾನ್ ಸ್ಟಬ್ಸ್ (44*) ಮತ್ತು ಅಕ್ಷರ್ ಪಟೇಲ್ (15*) ಸೋಲಿನ ಅಂತರ ತಗ್ಗಿಸಲಷ್ಟೇ ಶಕ್ತರಾದರು.
ಅನ್ರಿಚ್ ನೋಕಿಯಾ ಎಸೆದ ರಾಜಸ್ಥಾನ ಇನಿಂಗ್ಸ್ನ ಕೊನೇ ಓವರ್ನಲ್ಲಿ ರಿಯಾನ್ ಪರಾಗ್ 2 ಸಿಕ್ಸರ್, 3 ಬೌಂಡರಿ ಸಹಿತ 25 ರನ್ ಸಿಡಿಸಿದ್ದರು. ಕೊನೆಯಲ್ಲಿ ರಾಯಲ್ಸ್ ಗೆಲುವಿನಲ್ಲಿ ಇದೇ ನಿರ್ಣಾಯಕವೆನಿಸಿತು.