ಮಿಶ್ರ ರಿಲೇ ನಡಿಗೆ ಸ್ಪರ್ಧೆಯಲ್ಲಿ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸಿದ ಅಕ್ಷದಿಪ್​-ಪ್ರಿಯಾಂಕಾ

web oly walk
Published on

ಅಂಟಾಲ್ಯ (ಟರ್ಕಿ): ಅಕ್ಷದಿಪ್​ ಸಿಂಗ್​ ಮತ್ತು ಪ್ರಿಯಾಂಕಾ ಗೋಸ್ವಾಮಿ ಒಳಗೊಂಡ ಭಾರತದ ಮಿಶ್ರ ರಿಲೇ ತಂಡ ನಡಿಗೆ ಸ್ಪರ್ಧೆಯಲ್ಲಿ ಮುಂಬರುವ ಪ್ಯಾರಿಸ್​ ಒಲಿಂಪಿಕ್ಸ್​ಗೆ ಅರ್ಹತೆ ಸಂಪಾದಿಸಿದೆ. ಅಕ್ಷದಿಪ್​-ಪ್ರಿಯಾಂಕಾ ಜೋಡಿ ಭಾನುವಾರ ನಡೆದ ವಿಶ್ವ ಅಥ್ಲೆಟಿಕ್ಸ್​ ರೇಸ್​ ವಾಕಿಂಗ್​ ಟೀಮ್​ ಚಾಂಪಿಯನ್​ಷಿಪ್​ನಲ್ಲಿ 18ನೇ ಸ್ಥಾನ ಸಂಪಾದಿಸುವ ಮೂಲಕ ಈ ಸಾಧನೆ ಮಾಡಿದೆ.

ಅಗ್ರ 22 ತಂಡಗಳಿಗೆ ಒಲಿಂಪಿಕ್ಸ್​ ಅರ್ಹತೆ ಸಂಪಾದಿಸುವ ಅವಕಾಶವಿದ್ದ ಸ್ಪರ್ಧೆಯಲ್ಲಿ ಭಾರತದ ಜೋಡಿ 3 ಗಂಟೆ 5.03 ಸೆಕೆಂಡ್​ಗಳಲ್ಲಿ 42.195 ಕಿಲೋಮೀಟರ್​ ದೂರವನ್ನು ಕ್ರಮಿಸಿತು. ಇದು ಅವರಿಬ್ಬರ ಅತ್ಯುತ್ತಮ ವೈಯಕ್ತಿಕ ನಿರ್ವಹಣೆಯೂ ಆಗಿದೆ. ಮಿಶ್ರ ರಿಲೇ ನಡಿಗೆ ಸ್ಪರ್ಧೆಯಲ್ಲಿ ಪುರುಷ ಮತ್ತು ಮಹಿಳಾ ಸ್ಪರ್ಧಿ ಪರ್ಯಾಯವಾಗಿ ನಡೆದು ದೂರವನ್ನು ಕ್ರಮಿಸಲು ಅವಕಾಶ ನೀಡಲಾಗುತ್ತದೆ.

ಮೊದಲ 12.195 ಕಿಮೀ ಪುರುಷ ನಡೆದರೆ, ನಂತರದ 10 ಕಿಮೀ ಮಹಿಳೆ ನಡೆಯಬೇಕು. ಮತ್ತೆ ತಲಾ 10 ಕಿಮೀ ಪುರುಷ ಮತ್ತು ಮಹಿಳೆ ನಡೆಯಬೇಕು. ನಡಿಗೆಯನ್ನು ಪರಸ್ಪರ ಬದಲಾಯಿಸಿಕೊಳ್ಳಲು 20 ಮೀಟರ್​ಗಳ ಅಂತರ ನೀಡಲಾಗುತ್ತದೆ. ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಮೊದಲ ಬಾರಿಗೆ ಈ ಸ್ಪರ್ಧೆಯನ್ನು ಪರಿಚಯಿಸಲಾಗುತ್ತಿದೆ. 50 ಕಿಲೋಮೀಟರ್​ ನಡಿಗೆ ಸ್ಪರ್ಧೆಯ ಬದಲಾಗಿ ಇದನ್ನು ಒಲಿಂಪಿಕ್ಸ್​ಗೆ ಸೇರ್ಪಡೆಗೊಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net