IPL 2024: ಪವರ್​ಪ್ಲೇನಲ್ಲೇ ಸೋತೆವು ಎಂದು ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ರಿಷಭ್​ ಪಂತ್​ ಬೇಸರ

web pant web
Published on

ನವದೆಹಲಿ: ಟ್ರಾವಿಡ್​ ಹೆಡ್​ ಮತ್ತು ಅಭಿಷೇಕ್​ ಶರ್ಮ ಜೋಡಿ ಪವರ್​ಪ್ಲೇನಲ್ಲೇ 125 ರನ್​ ಪೇರಿಸುವ ಮೂಲಕ ಹೊಸ ದಾಖಲೆ ನಿರ್ಮಿಸಿತು. ಇದರಿಂದಾಗಿ ಸನ್​ರೈಸರ್ಸ್​ ತಂಡ ಪವರ್​ಪ್ಲೇನಲ್ಲೇ ಪಂದ್ಯವನ್ನು ನಮ್ಮಿಂದ ಕಸಿದುಕೊಂಡಿತು ಎಂದು ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ರಿಷಭ್​ ಪಂತ್​ 67 ರನ್​ಗಳಿಂದ ಸೋಲುಂಡ ಬಳಿಕ ಬೇಸರಿಸಿದ್ದಾರೆ.

ಟೂರ್ನಿಯಲ್ಲಿ 3ನೇ ಬಾರಿಗೆ 250ರ ಗಡಿ ದಾಟಿದ ಸನ್​ರೈಸರ್ಸ್​ 267 ರನ್​ ಸವಾಲು ನೀಡಿತು. ಪ್ರತಿಯಾಗಿ ಡೆಲ್ಲಿ ಆರಂಭಿಕರಾದ ಡೇವಿಡ್​ ವಾರ್ನರ್​ (1) ಮತ್ತು ಪೃಥ್ವಿ ಷಾ (16) ವಿಕೆಟ್​ ಬೇಗನೆ ಕಳೆದುಕೊಂಡರೆ, ಜೇಕ್​ ಫ್ರೇಸರ್​ ಮೆಕ್​ಗುರ್ಕ್​ (65) ಮತ್ತು ಅಭಿಷೇಕ್​ ಪೊರೆಲ್​ (42) 3ನೇ ವಿಕೆಟ್​ಗೆ 30 ಎಸೆತಗಳಲ್ಲಿ 84 ರನ್​ ಸೇರಿಸಿ ಡೆಲ್ಲಿ ಹೋರಾಟ ಜೀವಂತವಿಟ್ಟರು. ಈ ಜೋಡಿಯನ್ನು ಸ್ಪಿನ್ನರ್​ ಮಯಾಂಕ್​ ಮಾರ್ಕಂಡೆ (26ಕ್ಕೆ 2) ಡಗೌಟ್​ಗೆ ಅಟ್ಟಿದರು. ಬಳಿಕ ವೇಗಿ ಟಿ. ನಟರಾಜನ್​ (19ಕ್ಕೆ 4) ಡೆಲ್ಲಿ ಮಧ್ಯಮ ಕ್ರಮಾಂಕಕ್ಕೆ ಕಡಿವಾಣ ಹೇರಿದರು. ನಾಯಕ ರಿಷಭ್​ ಪಂತ್​ (44) ಹೋರಾಟ ಸೋಲಿನ ಅಂತರವನ್ನಷ್ಟೇ ತಗ್ಗಿಸಿತು.

"ಪವರ್​ಪ್ಲೇ ಉಭಯ ತಂಡಗಳ ನಡುವೆ ವ್ಯತ್ಯಾಸ ತಂದಿತು. ಇಬ್ಬನಿ ಸಮಸ್ಯೆಯಿಂದಾಗಿ ಬೌಲಿಂಗ್​ ಆಯ್ದುಕೊಂಡೆ ಮತ್ತು 220&230 ರನ್​ಗಳಿಗೆ ನಿಯಂತ್ರಿಸಿದರೆ ಗೆಲ್ಲುವ ವಿಶ್ವಾಸವಿತ್ತು' ಎಂದು ರಿಷಭ್​ ಪಂತ್​ ವಿವರಿಸಿದ್ದಾರೆ.

ಬ್ಯಾಟಿಂಗ್​ನಿಂದ ಪ್ರಾಯೋಜಕರನ್ನು ಗೆಲ್ಲಬಹುದು. ಆದರೆ ಬೌಲಿಂಗ್​ನಿಂದ ಚಾಂಪಿಯನ್​ಷಿಪ್​ ಗೆಲ್ಲಬಹುದು ಎಂದು ಯಾರೋ ಹೇಳಿದ್ದ ನೆನಪು. ಸ್ಕೋರ್​ಕಾರ್ಡ್​ನಲ್ಲಿ ನಮ್ಮ ಬೌಲಿಂಗ್​ ಅಂಕಿ&ಅಂಶ ಕೆಟ್ಟದಾಗಿ ಕಾಣಿಸಬಹುದು. ಆದರೆ ನಾವು ಪಂದ್ಯ ಗೆಲ್ಲಿಸುತ್ತಿದ್ದೇವೆ ಎಂದು ಸನ್​ರೈಸರ್ಸ್​ ವೇಗಿ ಭುವನೇಶ್ವರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net