ಇಂದು ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡ ಪ್ರಕಟ; ಸುದ್ದಿಗೋಷ್ಠಿಗೆ ಬರಲಿದ್ದಾರೆ ಅಗರ್ಕರ್​, ರೋಹಿತ್​...

web champs
Published on

ನವದೆಹಲಿ: ಫೆಬ್ರವರಿ 19ರಿಂದ ನಡೆಯಲಿರುವ ಐಸಿಸಿ ಚಾಂಪಿಯನ್ಸ್​ ಟ್ರೋಫಿಗೆ ಭಾರತ ತಂಡ ಶನಿವಾರ ಪ್ರಕಟಗೊಳ್ಳಲಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮಧ್ಯಾಹ್ನ 12.30ರಿಂದ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ತಂಡವನ್ನು ಪ್ರಕಟಿಸಲಿದ್ದಾರೆ. ಟೀಮ್​ ಇಂಡಿಯಾ ನಾಯಕ ರೋಹಿತ್​ ಶರ್ಮ ಕೂಡ ಸುದ್ದಿಗೋಷ್ಠಿಯಲ್ಲಿ ಹಾಜರಿರಲಿದ್ದು, ಇಬ್ಬರೂ ತಂಡದ ಆಯ್ಕೆಗೆ ಸಂಬಂಧಿಸಿ ವಿವರಣೆ ನೀಡಲಿದ್ದಾರೆ.

ಚಾಂಪಿಯನ್ಸ್​ ಟ್ರೋಫಿಗೆ ಆಯ್ಕೆಯಾಗುವ ತಂಡವೇ ಫೆ.6ರಿಂದ ಪ್ರವಾಸಿ ಇಂಗ್ಲೆಂಡ್​ ವಿರುದ್ಧ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಆಡುವ ನಿರೀಕ್ಷೆ ಇದೆ. ಗಾಯದಿಂದ ಚೇತರಿಸಿಕೊಂಡಿರುವ ಮೊಹಮದ್​ ಶಮಿ, ಸ್ಪಿನ್ನರ್​ ಕುಲದೀಪ್​ ಯಾದವ್​, ಫಿಟ್ನೆಸ್​ ಕಳವಳದ ನಡುವೆಯೂ ಜಸ್​ಪ್ರೀತ್​ ಬುಮ್ರಾ ಮತ್ತು ವಿರಾಟ್​ ಕೊಹ್ಲಿ ಕೂಡ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆ ಇದೆ. ತಂಡದ ಮೊದಲ ಆದ್ಯತೆಯ ಕೀಪರ್​ ಸ್ಥಾನಕ್ಕೆ ಕೆಎಲ್​ ರಾಹುಲ್​ ಮತ್ತು ರಿಷಭ್​ ಪಂತ್​ ನಡುವೆ ಪೈಪೋಟಿ ಇದೆ. ಇದಲ್ಲದೆ ಎಡಗೈ ಆರಂಭಿಕ ಯಶಸ್ವಿ ಜೈಸ್ವಾಲ್​ ಸ್ಥಾನವೂ ಗೊಂದಲದಲ್ಲಿದೆ.

ಹಾರ್ದಿಕ್​ ಪಾಂಡ್ಯ ಫಿಟ್​ ಆಗಿ ತಂಡದಲ್ಲಿ ಸ್ಥಾನ ಪಡೆಯುವುದರಿಂದ ಮತ್ತೋರ್ವ ಆಲ್ರೌಂಡರ್​ ಆಗಿ ನಿತೀಶ್​ ಕುಮಾರ್​ ರೆಡ್ಡಿಗೆ ಸ್ಥಾನ ಲಭಿಸುವ ಬಗ್ಗೆ ಅನುಮಾನಗಳಿವೆ. ವಿಜಯ್​ ಹಜಾರೆ ಟ್ರೋಫಿಯಲ್ಲಿ ರನ್​ಮಳೆ ಹರಿಸಿರುವ ಕನ್ನಡಿಗ ಕರುಣ್​ ನಾಯರ್​ಗೆ ಆಯ್ಕೆಗಾರರು ಮಣೆ ಹಾಕುವರೇ ಎಂಬ ಕುತೂಹಲವಿದೆ. ಮತ್ತೋರ್ವ ಕನ್ನಡಿಗ ಹಾಗೂ ವೇಗಿ ಪ್ರಸಿದ್ಧ ಕೃಷ್ಣ ಕೂಡ ಸ್ಪರ್ಧೆಯಲ್ಲಿದ್ದಾರೆ.

ಸಂಭಾವ್ಯ ತಂಡ: ರೋಹಿತ್​ ಶರ್ಮ (ನಾಯಕ), ಶುಭಮಾನ್​ ಗಿಲ್​, ವಿರಾಟ್​ ಕೊಹ್ಲಿ, ರಿಷಭ್​ ಪಂತ್​, ಕೆಎಲ್​ ರಾಹುಲ್​, ಶ್ರೇಯಸ್​ ಅಯ್ಯರ್​, ಹಾರ್ದಿಕ್​ ಪಾಂಡ್ಯ, ವಾಷಿಂಗ್ಟನ್​ ಸುಂದರ್​, ಅಕ್ಷರ್​ ಪಟೇಲ್​, ಕುಲದೀಪ್​ ಯಾದವ್​, ಜಸ್​ಪ್ರೀತ್​ ಬುಮ್ರಾ, ಮೊಹಮದ್​ ಸಿರಾಜ್​, ಮೊಹಮದ್​ ಶಮಿ, ಅರ್ಷದೀಪ್​ ಸಿಂಗ್​, ನಿತೀಶ್​ ಕುಮಾರ್​ ರೆಡ್ಡಿ. ಸಂಭಾವ್ಯ ಮೀಸಲು ಆಟಗಾರರು: ತಿಲಕ್​ ವರ್ಮ, ಸಂಜು ಸ್ಯಾಮ್ಸನ್​, ಯಶಸ್ವಿ ಜೈಸ್ವಾಲ್​.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net