ಇಂದಿನಿಂದ ಟೋಕಿಯೊ ಪ್ಯಾರಾಲಿಂಪಿಕ್ಸ್, ಭಾರತಕ್ಕೆ ದಾಖಲೆ ಪದಕ ನಿರೀಕ್ಷೆ

paralympics web
Published on

ಟೋಕಿಯೊ: ಕರೊನಾ ಹಾವಳಿಯ ನಡುವೆ ಒಲಿಂಪಿಕ್ಸ್ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸುವ ಜಪಾನ್, ಇದೀಗ ಮತ್ತೊಂದು ಮಹಾ ಕ್ರೀಡಾಕೂಟದ ಆತಿಥ್ಯಕ್ಕೆ ಸಜ್ಜಾಗಿದೆ. ಅಂಗವಿಕಲ ಕ್ರೀಡಾಪಟುಗಳು ಸ್ಪರ್ಧಿಸಲಿರುವ ಪ್ಯಾರಾಲಿಂಪಿಕ್ಸ್‌ನ 16ನೇ ಆವೃತ್ತಿಗೆ ಮಂಗಳವಾರ ಚಾಲನೆ ಸಿಗಲಿದ್ದು, ನಿಜಜೀವನದ ಹೀರೋಗಳು ಜಗತ್ತಿಗೆ ಮತ್ತಷ್ಟು ಸ್ಫೂರ್ತಿ ತುಂಬಲಿದ್ದಾರೆ. ಸೆಪ್ಟೆಂಬರ್ 5ರವರೆಗೆ ಟೋಕಿಯೊದಲ್ಲಿ ನಡೆಯಲಿರುವ 13 ದಿನಗಳ ಕ್ರೀಡಾಕೂಟದಲ್ಲಿ 163 ದೇಶಗಳಿಂದ 4,500ಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. 22 ಕ್ರೀಡೆಗಳ 539 ವಿಭಾಗಗಳಲ್ಲಿ ಸ್ವರ್ಣ ಪದಕಗಳು ಪಣಕ್ಕಿವೆ. ಬ್ಯಾಡ್ಮಿಂಟನ್ ಮತ್ತು ಟೇಕ್ವಾಂಡೊ ಕ್ರೀಡೆಗಳನ್ನು ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ಗೆ ಸೇರ್ಪಡೆಗೊಳಿಸಲಾಗಿದೆ. ಒಲಿಂಪಿಕ್ಸ್‌ನಂತೆ ಪ್ಯಾರಾಲಿಂಪಿಕ್ಸ್ ಕೂಡ ಒಂದು ವರ್ಷ ತಡವಾಗಿ ಆಯೋಜನೆಗೊಳ್ಳುತ್ತಿದ್ದು, ಇದಕ್ಕೂ ಪ್ರೇಕ್ಷಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಒಲಿಂಪಿಕ್ಸ್ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭ ನಡೆದ ಒಲಿಂಪಿಕ್ ಸ್ಟೇಡಿಯಂನಲ್ಲೇ ಪ್ಯಾರಾಲಿಂಪಿಕ್ಸ್ ಆರಂಭೋತ್ಸವವೂ ನಡೆಯಲಿದ್ದು, ಜಪಾನ್‌ನ ಅಂಧ ಪಿಯಾನಿಸ್ಟ್ ನೊಬುಯುಕಿ ಸುಜಿ ಸಮಾರಂಭದ ಪ್ರಮುಖ ಆಕರ್ಷಣೆಯಾಗಿರುತ್ತಾರೆ. ‘ಮುಂದುವರಿಯೋಣ: ನಮಗೆ ರೆಕ್ಕೆಗಳಿವೆ’ ಎಂಬುದು ಸಮಾರಂಭದ ಧ್ಯೇಯವಾಕ್ಯವಾಗಿರುತ್ತದೆ. ಜಪಾನ್ ಚಕ್ರವರ್ತಿ ನರುಹಿಟೋ ಕೂಟದ ಆರಂಭವನ್ನು ಘೋಷಿಸುವ ನಿರೀಕ್ಷೆ ಇದೆ.

ಒಲಿಂಪಿಕ್ಸ್‌ಗಿಂತ ಅಧಿಕ ಚಿನ್ನ ಪಣಕ್ಕೆ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ 33 ಕ್ರೀಡೆಗಳಲ್ಲಿ 11 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು 339 ಸ್ವರ್ಣ ಪದಕಕ್ಕೆ ಸ್ಪರ್ಧಿಸಿದ್ದರೆ, ಪ್ಯಾರಾಲಿಂಪಿಕ್ಸ್‌ನಲ್ಲಿ 22 ಕ್ರೀಡೆಗಳಲ್ಲಿ 4,500 ಕ್ರೀಡಾಪಟುಗಳು 539 ಸ್ವರ್ಣ ಪದಕಕ್ಕೆ ಸ್ಪರ್ಧಿಸಲಿದ್ದಾರೆ. ಭಿನ್ನ ಅಂಗವೈಕಲ್ಯಕ್ಕೆ ತಕ್ಕಂತೆ ಒಂದೇ ಕ್ರೀಡೆಯಲ್ಲಿ ಹಲವು ವರ್ಗೀಕರಣಗಳಿರುವ ಕಾರಣ ಪ್ಯಾರಾಲಿಂಪಿಕ್ಸ್‌ನಲ್ಲಿ ಹೆಚ್ಚಿನ ಸ್ವರ್ಣ ಪದಕ ಸ್ಪರ್ಧೆಗಳು ನಡೆಯಲಿವೆ.

ಭಾರತದಿಂದ ದೊಡ್ಡ ತಂಡ ಟೋಕಿಯೊ ಒಲಿಂಪಿಕ್ಸ್‌ನಂತೆ ಪ್ಯಾರಾಲಿಂಪಿಕ್ಸ್‌ನಲ್ಲೂ ಭಾರತ ಬೃಹತ್ ತಂಡವನ್ನು ಕಣಕ್ಕಿಳಿಸುತ್ತಿದೆ. ರಿಯೋ ಪ್ಯಾರಾಲಿಂಪಿಕ್ಸ್‌ಗಿಂತ 3 ಪಟ್ಟು ದೊಡ್ಡ ಅಂದರೆ ಒಟ್ಟು 54 ಕ್ರೀಡಾಪಟುಗಳ ಭಾರತ ತಂಡ ಕಣಕ್ಕಿಳಿಯುತ್ತಿದ್ದು, ಆರ್ಚರಿ, ಅಥ್ಲೆಟಿಕ್ಸ್, ಶೂಟಿಂಗ್, ಟೇಬಲ್ ಟೆನಿಸ್, ಬ್ಯಾಡ್ಮಿಂಟನ್, ಈಜು, ಪವರ್‌ಲಿಫ್ಟಿಂಗ್ ಸಹಿತ 9 ಕ್ರೀಡೆಗಳಲ್ಲಿ ಸ್ಪರ್ಧಿಸಲಿದೆ. ಒಲಿಂಪಿಕ್ಸ್‌ನಂತೆ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳೂ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಯೋಜನೆಯಡಿ (ಟಾಪ್ಸ್) ಆರ್ಥಿಕ ಬೆಂಬಲ ಪಡೆದಿದ್ದು, ದಾಖಲೆಯ ಪದಕ ಜಯಿಸುವ ನಿರೀಕ್ಷೆ ಇಡಲಾಗಿದೆ. ಭಾರತ ತಂಡದ ಚೀಫ್​ ಡಿ ಮಿಷನ್ ಗುರುಶರಣ್ ಸಿಂಗ್ ಅವರ ಪ್ರಕಾರ, ಈ ಬಾರಿ 5 ಚಿನ್ನ ಸಹಿತ 15 ಪದಕಗಳನ್ನು ಜಯಿಸುವ ನಿರೀಕ್ಷೆ ಇದೆ. ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಇದುವರೆಗೆ 4 ಚಿನ್ನ ಸಹಿತ ಒಟ್ಟು 12 ಪದಕ ಜಯಿಸಿದೆ. ಭಾರತದ ಕ್ರೀಡಾಪಟುಗಳ ಪದಕ ಬೇಟೆ ಶುಕ್ರವಾರ ಆರಂಭಗೊಳ್ಳಲಿದೆ. ಅಥ್ಲೆಟಿಕ್ಸ್ ಸ್ಪರ್ಧೆಗಳು ಶನಿವಾರದಿಂದ ನಡೆಯಲಿವೆ.

ದಾಖಲೆ ಪದಕ ನಿರೀಕ್ಷೆ

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ 1 ಚಿನ್ನ ಸಹಿತ ಒಟ್ಟು 7 ಪದಕ ಗೆದ್ದು ಹೊಸ ಇತಿಹಾಸ ಸೃಷ್ಟಿಸಿತ್ತು. ಪ್ಯಾರಾಲಿಂಪಿಕ್ಸ್‌ನಲ್ಲೂ ಇದೀಗ ಅಂಥದ್ದೇ ಅಪೂರ್ವ ದಾಖಲೆ ನಿರ್ಮಾಣವಾಗುವ ನಿರೀಕ್ಷೆ ಇದ್ದು, ಇದೇ ಮೊದಲ ಬಾರಿಗೆ 10ಕ್ಕಿಂತ ಹೆಚ್ಚಿನ ಪದಕ ಜಯಿಸುವತ್ತ ಭಾರತ ಕಣ್ಣಿಟ್ಟಿದೆ. 2016ರಲ್ಲಿ ಭಾರತ 2 ಚಿನ್ನ, 1 ಬೆಳ್ಳಿ, 1 ಕಂಚಿನೊಂದಿಗೆ ಪದಕ ಪಟ್ಟಿಯಲ್ಲಿ 43ನೇ ಸ್ಥಾನ ಗಳಿಸಿದ್ದರೆ, ಈ ಬಾರಿ ಅಗ್ರ 25ರೊಳಗೆ ಸ್ಥಾನ ಪಡೆಯುವ ಹಂಬಲದಲ್ಲಿದೆ. 2016ರಲ್ಲಿ ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಜಾವೆಲಿನ್ ಥ್ರೋ ಪಟು ದೇವೇಂದ್ರ ಜಜಾರಿಯಾ (ಎಫ್​-46) ಮತ್ತು ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಈ ಬಾರಿಯೂ ಅದೇ ನಿರ್ವಹಣೆ ಪುನರಾವರ್ತಿಸುವ ನಿರೀಕ್ಷೆ ಇದೆ. ಇತರ ಜಾವೆಲಿನ್ ಥ್ರೋ ಸ್ಪರ್ಧಿಗಳಾದ ಸಂದೀಪ್ ಚೌಧರಿ (ಎಫ್​-64), ಸುಂದರ್ ಸಿಂಗ್ ಗುಜ್ರಾರ್, ಅಜೀತ್ ಸಿಂಗ್ (ಎಫ್​-46) ಮತ್ತು ನವದೀಪ್ ಸಿಂಗ್ (ಎಫ್​-41) ಕೂಡ ಚಿನ್ನದ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಹಾಲಿ ವಿಶ್ವ ನಂ. 1 ಪ್ರಮೋದ್ ಭಗತ್ (ಎಸ್‌ಎಲ್-3), ನಂ. 2 ಕೃಷ್ಣನಗರ್ (ಎಸ್‌ಎಚ್6 ಮತ್ತು ತರುಣ್ ದಿಲ್ಲೋನ್ (ಎಸ್‌ಎಲ್4) ಚಿನ್ನದ ನಿರೀಕ್ಷೆ ಹೊಂದಿದ್ದಾರೆ. ಶೂಟಿಂಗ್, ಆರ್ಚರಿಯಲ್ಲೂ ಭಾರತಕ್ಕೆ ಪದಕ ನಿರೀಕ್ಷೆಗಳಿವೆ.

ಕರ್ನಾಟಕದ ಮೂವರು ಸ್ಪರ್ಧೆ

ಕರ್ನಾಟಕದ ಮೂವರು ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿದ್ದಾರೆ. ನಿರಂಜನ್ ಮುಕುಂದನ್ ಈಜು ಮತ್ತು ಸಕಿನಾ ಖತುನ್ ಪವರ್‌ಲಿಫ್ಟಿಂಗ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಉತ್ತರ ಪ್ರದೇಶದಲ್ಲಿ ಐಎಎಸ್ ಅಧಿಕಾರಿಯಾಗಿರುವ ಕನ್ನಡಿಗ ಸುಹಾಸ್ ಯತಿರಾಜ್ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಬೆಂಗಳೂರಿನ ನಿರಂಜನ್ ಈ ಮುನ್ನ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಹಲವಾರು ಪದಕಗಳನ್ನು ಜಯಿಸಿದ್ದಾರೆ. ಬಂಗಾಳ ಮೂಲದ ಸಕಿನಾ 2018ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಬೆಳ್ಳಿ ಮತ್ತು 2014ರ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದರು. ಶಿವಮೊಗ್ಗ ಮೂಲದ ಸುಹಾಸ್, ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಹಾಲಿ ವಿಶ್ವ ನಂ. 2 ಆಟಗಾರರಾಗಿದ್ದು, 2018ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದರು.

ಮರಿಯಪ್ಪನ್ ಧ್ವಜಧಾರಿ

ರಿಯೋ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಜಯಿಸಿದ್ದ ಹೈಜಂಪ್ ಪಟು ಮರಿಯಪ್ಪನ್ ತಂಗವೇಲು ಉದ್ಘಾಟನಾ ಸಮಾರಂಭದಲ್ಲಿ ಧ್ವಜಧಾರಿಯಾಗಿ ಭಾರತ ತಂಡವನ್ನು ಮುನ್ನಡೆಲಿದ್ದಾರೆ. 5 ಕ್ರೀಡಾಪಟುಗಳು ಮತ್ತು 6 ಅಧಿಕಾರಿಗಳ ಸಹಿತ ಒಟ್ಟು 11 ಸದಸ್ಯರ ಭಾರತ ತಂಡವಷ್ಟೇ ಸಮಾರಂಭದಲ್ಲಿ ಭಾಗವಹಿಸಲಿದೆ. ಪಥಸಂಚಲನದಲ್ಲಿ 17ನೇ ತಂಡವಾಗಿ ಭಾರತ ಕ್ರೀಡಾಂಗಣ ಪ್ರವೇಶಿಸಲಿದೆ.

ಉದ್ಘಾಟನಾ ಸಮಾರಂಭ:

ಎಲ್ಲಿ: ಒಲಿಂಪಿಕ್ ಸ್ಟೇಡಿಯಂ, ಟೋಕಿಯೊ

ಆರಂಭ: ಸಂಜೆ 4.30

ನೇರಪ್ರಸಾರ: ಯುರೋಸ್ಪೋರ್ಟ್, ಡಿಡಿ.

ನಿಜಜೀವನದ ಹೀರೋಗಳೆಂದ ಸಚಿನ್

ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲಿರುವ ಭಾರತದ ಕ್ರೀಡಾಪಟುಗಳಿಗೆ ಇಡೀ ದೇಶ ಒಟ್ಟಾಗಿ ಬೆಂಬಲಿಸಬೇಕೆಂದು ಹೇಳಿರುವ ಕ್ರಿಕೆಟ್ ಸಚಿನ್ ತೆಂಡುಲ್ಕರ್, ಅವರೆಲ್ಲರೂ ನಿಜಜೀವನದ ಹೀರೋಗಳು ಎಂದು ಬಣ್ಣಿಸಿದ್ದಾರೆ. ‘ಇದು ಪ್ಯಾರಾಲಿಂಪಿಕ್ಸ್ ಸಮಯ. ಎಲ್ಲ ಭಾರತೀಯರು ಟೋಕಿಯೊದಲ್ಲಿ ಸ್ಪರ್ಧಿಸಲಿರುವ ನಮ್ಮ 54 ಕ್ರೀಡಾಪಟುಗಳಿಗೆ ಬೆಂಬಲವಾಗಿ ನಿಲ್ಲಬೇಕು. ಈ ಪುರುಷ-ಮಹಿಳಾ ಸ್ಪರ್ಧಿಗಳು ಕೇವಲ ವಿಶೇಷ ಸಾಮರ್ಥ್ಯ ಹೊಂದಿರುವ ಕ್ರೀಡಾಪಟುಗಳಲ್ಲ, ಬದಲಾಗಿ ಇವರೆಲ್ಲರೂ ಅಸಾಧಾರಣ ಸಾಮರ್ಥ್ಯ ಹೊಂದಿರುವವರು ಮತ್ತು ನಮ್ಮೆಲ್ಲರಿಗೂ ನಿಜಜೀವನದ ಹೀರೋಗಳು’ ಎಂದು ಸಚಿನ್ ತೆಂಡುಲ್ಕರ್ ಹೇಳಿದ್ದಾರೆ. ಅವರೆಲ್ಲರ ಜೀವನ ನಮ್ಮ ಪಾಲಿಗೆ ಕಣ್ಣು ತೆರೆಸುವಂಥದ್ದು. ಅವರ ಉತ್ಸಾಹ, ಬದ್ಧತೆ ಮತ್ತು ದೃಢಸಂಕಲ್ಪ ನಮ್ಮೆಲ್ಲರಿಗೂ ಸ್ಫೂರ್ತಿದಾಯಕ. ನಮ್ಮ ಒಲಿಂಪಿಕ್ಸ್ ಹೀರೋಗಳು ಮತ್ತು ಕ್ರಿಕೆಟಿಗರಂತೆ ಇವರ ಸ್ಪರ್ಧೆಯನ್ನೂ ನಾವು ಸಂಭ್ರಮಿಸಿದರೆ ಉತ್ತಮ ಸಮಾಜ ನಿರ್ಮಾಣಗೊಳ್ಳಲಿದೆ ಎಂದು ಸಚಿನ್ ಹೇಳಿದ್ದಾರೆ.

ಅಫ್ಘಾನಿಸ್ತಾನದ ಧ್ವಜವಷ್ಟೇ ಭಾಗಿ!

ಅಫ್ಘಾನಿಸ್ತಾನ ಈಗ ತಾಲಿಬಾನ್ ಉಗ್ರರ ವಶವಾಗಿರುವುದರಿಂದ ಅಲ್ಲಿನ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುತ್ತಿಲ್ಲ. ಆದರೆ ಒಗ್ಗಟ್ಟು ಪ್ರದರ್ಶಿಸುವ ಸಲುವಾಗಿ ಅಫ್ಘಾನಿಸ್ತಾನದ ರಾಷ್ಟ್ರಧ್ವಜ ಉದ್ಘಾಟನಾ ಸಮಾರಂಭದಲ್ಲಿ ಹಾಜರಿರಲಿದೆ ಎಂದು ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿಯ ಮುಖ್ಯಸ್ಥ ಆಂಡ್ರೋ ಪರ್ಸನ್ಸ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net