ಟೀಮ್ ಇಂಡಿಯಾ ವೇಗಿ ಸಿರಾಜ್‌ಗೆ ಬೋಲ್ಡಾದ ಪಾಕ್ ಟಿವಿ ನಿರೂಪಕಿ!

siraj jainab web
Published on

ನವದೆಹಲಿ: ಟೀಮ್ ಇಂಡಿಯಾ ವೇಗಿ ಮೊಹಮದ್ ಸಿರಾಜ್ ಇಂಗ್ಲೆಂಡ್ ಪ್ರವಾಸದಲ್ಲಿ ತೋರಿಸುತ್ತಿರುವ ಅಮೋಘ ಬೌಲಿಂಗ್ ನಿರ್ವಹಣೆಯಿಂದ ಭಾರತದ ಅಭಿಮಾನಿಗಳ ಹೃದಯ ಗೆದ್ದಿರುವುದು ಮಾತ್ರವಲ್ಲದೆ, ಪಾಕಿಸ್ತಾನದಲ್ಲೂ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಪಾಕಿಸ್ತಾನದ ಜನಪ್ರಿಯ ಟಿವಿ ನಿರೂಪಕಿ ಮತ್ತು ಕ್ರೀಡಾ ಪತ್ರಕರ್ತೆ ಜೈನಾಬ್ ಅಬ್ಬಾಸ್ ಕೂಡ ಸಿರಾಜ್ ಆಟಕ್ಕೆ ಮನಸೋತಿದ್ದಾರೆ.

ಮೊಹಮದ್ ಸಿರಾಜ್ ಅವರನ್ನು ‘ವಿಶ್ವದರ್ಜೆಯ ಬೌಲರ್’ ಎಂದು ಜೈನಾಬ್ ಪ್ರಶಂಸಿಸಿದ್ದಾರೆ. ‘ಮೊಹಮದ್ ಸಿರಾಜ್ ಈಗ ವಿಶ್ವದರ್ಜೆಯ ಬೌಲರ್ ಆಗುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಈ ಹಿಂದೆ ಮತ್ತು ಈಗ ಲಾರ್ಡ್ಸ್‌ನಲ್ಲಿ ಅವರು ವಿಕೆಟ್ ಕಬಳಿಸಿರುವ ರೀತಿಯನ್ನು ನೋಡಿದರೆ ಚೆಂಡಿನ ಮೇಲೆ ಉತ್ತಮ ನಿಯಂತ್ರಣ ಹೊಂದಿದಂತೆ ಕಾಣಿಸುತ್ತಿದೆ. ಅವರ ಬೌಲಿಂಗ್ ಕೂಡ ಭಾರಿ ವೇಗವಾಗಿದೆ. ಅವರ ಲೈನ್ ಮತ್ತು ಲೆಂತ್ ಕೂಡ ಅಮೋಘವಾಗಿದೆ’ ಎಂದು ಜೈನಾಬ್ ಅಬ್ಬಾಸ್ ವಿಶ್ಲೇಷಿಸಿದ್ದಾರೆ.

ಯಾವುದೇ ಕಾರಣಕ್ಕೂ ಸೋಲೊಪ್ಪಿಕೊಳ್ಳದ ರೀತಿಯಲ್ಲಿ ಟೀಮ್ ಇಂಡಿಯಾ ತೋರಿರುವ ನಿರ್ವಹಣೆಯನ್ನು ಪ್ರಶಂಸಿಸಿರುವ ಜೈನಾಬ್ ಅಬ್ಬಾಸ್, ಇತರ ವೇಗಿಗಳಾದ ಜಸ್‌ಪ್ರೀತ್ ಬುಮ್ರಾ, ಇಶಾಂತ್ ಶರ್ಮ ಮತ್ತು ಮೊಹಮದ್ ಶಮಿ ನಿರ್ವಹಣೆಯನ್ನೂ ಹೊಗಳಿದ್ದಾರೆ. ಜೈನಾಬ್ ಸದ್ಯ ದಿ ಹಂಡ್ರೆಡ್ ಕ್ರಿಕೆಟ್ ಟೂರ್ನಿಯ ನಿರೂಪಣೆಗಾಗಿ ಇಂಗ್ಲೆಂಡ್‌ನಲ್ಲೇ ಇದ್ದಾರೆ. ಜೈನಾಬ್ ಅವರ ತಂದೆ ನಾಸಿರ್ ಅಬ್ಬಾಸ್ ಪಾಕಿಸ್ತಾನದ ದೇಶೀಯ ಕ್ರಿಕೆಟಿಗರಾಗಿದ್ದರು. ಹೀಗಾಗಿ 33 ವರ್ಷದ ಜೈನಾಬ್ ಅವರ ಕ್ರಿಕೆಟ್ ಜ್ಞಾನ ನಿರೂಪಣೆಯಲ್ಲಿ ಸಾಕಷ್ಟು ನೆರವಾಗಿದೆ. ಲಾಹೋರ್‌ನಲ್ಲಿ ಜನಿಸಿದ ಅವರು ಇಂಗ್ಲೆಂಡ್‌ನಲ್ಲಿ ಎಂಬಿಎ ವಿದ್ಯಾಭ್ಯಾಸ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net