ದೇಶೀಯ ಕ್ರಿಕೆಟ್​ ಕಡೆಗಣಿಸಿದ್ದಕ್ಕೆ ಭಾರತೀಯ ಕ್ರಿಕೆಟಿಗರಿಗೆ ಕಿವೀಸ್​ ಎದುರು ಸೋಲಿನ ಶಿಕ್ಷೆ!

web domestic
Published on

ನವದೆಹಲಿ: 2007ರ ಜನವರಿಯಲ್ಲಿ ಸವಾಲಿನ ದಣ ಆಫ್ರಿಕಾ ಪ್ರವಾಸ ಮುಗಿದ ಬೆನ್ನಲ್ಲೇ ಭಾರತ ತಂಡ ಏಕದಿನ ವಿಶ್ವಕಪ್​ಗೆ ಪೂರ್ವಭಾವಿಯಾಗಿ ತವರಿನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಏಕದಿನ ಸರಣಿ ಆಡಿತ್ತು. ಜನವರಿ 21ರಿಂದ 31ರವರೆಗೆ ನಡೆದ 4 ಪಂದ್ಯಗಳ ಬೆನ್ನಲ್ಲೇ ಫೆಬ್ರವರಿ 2ರಿಂದ ಆಗಿನ ಭಾರತ ತಂಡದ ಪ್ರಮುಖ ಆಟಗಾರರಾದ ಸಚಿನ್​ ತೆಂಡುಲ್ಕರ್​, ಜಹೀರ್​ ಖಾನ್​, ಅಜಿತ್​ ಅಗರ್ಕರ್​ ಮತ್ತು ಸೌರವ್​ ಗಂಗೂಲಿ ರಣಜಿ ಟ್ರೋಫಿ ಫೈನಲ್​ನಲ್ಲಿ ಮುಂಬೈ-ಬಂಗಾಳ ಪರ ಕಣಕ್ಕಿಳಿದಿದ್ದರು. ಆ ಪಂದ್ಯದಲ್ಲಿ ಸಚಿನ್​ ಶತಕ, ಗಂಗೂಲಿ 90 ರನ್​ ಬಾರಿಸಿದ್ದರೆ, ಜಹೀರ್​ ಪ್ರಮುಖ ಕೆಲ ವಿಕೆಟ್​ ಕಬಳಿಸಿದ್ದರು. ರಣಜಿ ಫೈನಲ್​ ಮುಗಿದ ಬೆನ್ನಲ್ಲೇ ಸಚಿನ್​, ಗಂಗೂಲಿ, ಜಹೀರ್​ ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಆಡಲು ತೆರಳಿದ್ದರು. ಆದರೆ ಆಗ ಯಾರೂ ಕಾರ್ಯದೊತ್ತಡದ ಕಾರಣ ನೀಡಿರಲಿಲ್ಲ. ಆದರೆ ಈಗ ಕಿವೀಸ್​ ವಿರುದ್ಧದ ಟೆಸ್ಟ್​ ಸರಣಿಗೆ ಪೂರ್ವಭಾವಿಯಾಗಿ ಹಿರಿಯ ಆಟಗಾರರು ದುಲೀಪ್​ ಟ್ರೋಫಿಯಲ್ಲಿ ಆಡದೆ ಕಾರ್ಯದೊತ್ತಡದ ನೆಪ ನೀಡಿದರು.

ಟಿ20 ವಿಶ್ವಕಪ್​ ಬಳಿಕ ಬಾಂಗ್ಲಾದೇಶ ವಿರುದ್ಧ ಟೆಸ್ಟ್​ ಸರಣಿಗೆ ಮುನ್ನ 43 ದಿನಗಳ ಭರ್ಜರಿ ವಿರಾಮ ಸಿಕ್ಕರೂ ಅದು ಸಾಕೆನಿಸಲಿಲ್ಲ. ಈಗಿನ ಹಿರಿಯ ಆಟಗಾರರು ದೇಶೀಯ ಕ್ರಿಕೆಟ್​ನಲ್ಲಿ ಆಡುವುದನ್ನು ಕಡೆಗಣಿಸಿದ್ದರಿಂದಲೇ ಕಿವೀಸ್​ ವಿರುದ್ಧ ವೈಟ್​ವಾಷ್​ ಮುಖಭಂಗ ಎದುರಾಯಿತೇ ಎಂದು ವಿಶ್ಲೇಷಿಸಲಾಗುತ್ತಿದೆ.

ವಿರಾಟ್​ ಕೊಹ್ಲಿ 2013 ಮತ್ತು ರೋಹಿತ್​ ಶರ್ಮ 2015ರಲ್ಲಿ ಕೊನೆಯದಾಗಿ ರಣಜಿ ಟ್ರೋಫಿಯಲ್ಲಿ ಆಡಿದ್ದಾರೆ. ಸಚಿನ್​ ತೆಂಡುಲ್ಕರ್​ 200 ಟೆಸ್ಟ್​ ಜತೆಗೆ 110 ಪ್ರಥಮ ದರ್ಜೆ ಪಂದ್ಯಗಳನ್ನೂ ಆಡಿದ್ದರೆ, 117 ಟೆಸ್ಟ್​ ಆಡಿರುವ ಕೊಹ್ಲಿ ಆಡಿರುವುದು 32 ಪ್ರಥಮ ದರ್ಜೆ ಪಂದ್ಯ ಮಾತ್ರ. ರೋಹಿತ್​ ಶರ್ಮ 18 ವರ್ಷಗಳ ವೃತ್ತೀಜಿವನದಲ್ಲಿ 61 ಪ್ರಥಮ ದರ್ಜೆ ಪಂದ್ಯಗಳನ್ನಷ್ಟೇ ಆಡಿದ್ದಾರೆ.

ಆದರೆ ಸಚಿನ್​, ಲಕ್ಷ್ಮಣ್​, ದ್ರಾವಿಡ್​, ಗಂಗೂಲಿ ವೃತ್ತೀಜಿವನದ ಉತ್ತುಂಗ ಕಾಲದಲ್ಲಿ ಟಿ20, ಐಪಿಎಲ್​ ಪಂದ್ಯಗಳಿರಲಿಲ್ಲ ಎಂಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ರೋಹಿತ್​, ಕೊಹ್ಲಿ ಇದುವರೆಗೆ ಕ್ರಮವಾಗಿ 448 ಮತ್ತು 399 ಟಿ20 ಪಂದ್ಯಗಳನ್ನೂ ಆಡಿದ್ದಾರೆ. ಈ ನಿಟ್ಟಿನಲ್ಲಿ ನೋಡುವುದಾದರೆ, ಹಿರಿಯ ಆಟಗಾರರು ಕನಿಷ್ಠ ಉತ್ತಮ ಫಾಮ್​ರ್ನಲ್ಲಿಲ್ಲ ಎಂದು ಅನಿಸಿದಾಗಲಾದರೂ ದೇಶೀಯ ಕ್ರಿಕೆಟ್​ನಲ್ಲಿ ಆಡಿ ಲಯಕ್ಕೆ ಮರಳಲು ಪ್ರಯತ್ನಿಸುವುದು ಉತ್ತಮ ಎಂದು ಮಾಜಿ ಆಯ್ಕೆಗಾರ ದೇವಾಂಗ್​ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net