ಆಸೀಸ್​ ಪ್ರವಾಸ ನಂತರ ಟೀಮ್​ ಇಂಡಿಯಾದಲ್ಲಿ ಸ್ಥಿತ್ಯಂತರ ಶುರು? ಒಬ್ಬೊಬ್ಬರಾಗಿಯೇ ಹಿರಿಯ ಆಟಗಾರರಿಗೆ ಗೇಟ್​ಪಾಸ್​ ಸಾಧ್ಯತೆ

web seniors
Published on

ನವದೆಹಲಿ: ನ್ಯೂಜಿಲೆಂಡ್​ ವಿರುದ್ಧ ತವರಿನಲ್ಲೇ ಎದುರಾದ 0-3 ಸೋಲಿನಿಂದ ಗರಂ ಆಗಿರುವ ಬಿಸಿಸಿಐ, ಮುಂಬರುವ ಆಸ್ಟ್ರೆಲಿಯಾ ಪ್ರವಾಸದ ಬಳಿಕ ಭಾರತ ತಂಡದ ಹಿರಿಯ ಆಟಗಾರರ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಭಾರತ ತಂಡ ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ಗೇರದಿದ್ದರೆ, ಮುಂದಿನ 2025-27ರ ಆವೃತ್ತಿಗೆ ಹೊಸ ತಂಡವನ್ನು ಕಟ್ಟಲು ರಚನಾತ್ಮಕವಾಗಿ ಒಬ್ಬೊಬ್ಬರೇ ಹಿರಿಯ ಆಟಗಾರರನ್ನು ತಂಡದಿಂದ ಹೊರಹಾಕಲಾಗುವುದು ಎನ್ನಲಾಗಿದೆ.

ನಾಯಕ ರೋಹಿತ್​ ಶರ್ಮ (37 ವರ್ಷ), ವಿರಾಟ್​ ಕೊಹ್ಲಿ (36 ವರ್ಷ), ರವೀಂದ್ರ ಜಡೇಜಾ (36 ವರ್ಷ) ಮತ್ತು ಆರ್​. ಅಶ್ವಿನ್​ (38 ವರ್ಷ) ತಂಡದ ನಾಲ್ವರು ಪ್ರಮುಖ ಹಿರಿಯ ಆಟಗಾರರಾಗಿದ್ದು, ಇವರೆಲ್ಲರೂ ವೃತ್ತೀಜಿವನದ ಸಂಧ್ಯಾಕಾಲದಲ್ಲಿದ್ದಾರೆ. ಆಸೀಸ್​ ಪ್ರವಾಸದ ಸರಣಿ ಈ ನಾಲ್ವರು ಜತೆಯಾಗಿ ಆಡುವ ಕೊನೇ ಸರಣಿ ಆಗಿರಲಿದೆ ಎನ್ನಲಾಗಿದೆ.

"ಸದ್ಯಕ್ಕೆ ನಮ್ಮ ಗಮನ ಆಸೀಸ್​ ಪ್ರವಾಸದ ಸರಣಿ ಮೇಲೆ ಮಾತ್ರ ಇರಲಿದೆ. ಅನಂತರದ ಬಗ್ಗೆ ಇನ್ನೂ ಯೋಚಿಸಿಲ್ಲ' ಎಂದು ರೋಹಿತ್​ ಶರ್ಮ, ಟೆಸ್ಟ್​ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಆಸೀಸ್​ ಪ್ರವಾಸದ ನಂತರ ಭಾರತ ತಂಡ 2025ರ ಜೂನ್​&ಜುಲೈನಲ್ಲಿ ಇಂಗ್ಲೆಂಡ್​ನಲ್ಲಿ 5 ಪಂದ್ಯಗಳ ಟೆಸ್ಟ್​ ಸರಣಿ ಆಡಲಿದೆ. ಅದಕ್ಕೆ ಮುನ್ನ ಡಬ್ಲ್ಯುಟಿಸಿ ಫೈನಲ್​ನಲ್ಲಿ ಆಡುವ ಅರ್ಹತೆ ಒಲಿಯದಿದ್ದರೆ, ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ ಮತ್ತು ಮುಖ್ಯ ಕೋಚ್​ ಗೌತಮ್​ ಗಂಭೀರ್​ಗೆ ತಂಡದ ಸ್ಥಿತ್ಯಂತರವನ್ನು ನಿಭಾಯಿಸುವ ಹೊಣೆಯನ್ನು ಬಿಸಿಸಿಐ ನೀಡಲಿದೆ ಎನ್ನಲಾಗಿದೆ.

ಸಾಯಿ ಸುದರ್ಶನ್​, ದೇವದತ್​ ಪಡಿಕ್ಕಲ್​ರಂಥ ಯುವ ಬ್ಯಾಟರ್​ಗಳು ಆಸೀಸ್​ನಲ್ಲಿ ಈಗಾಗಲೆ ಮಿಂಚಿ ಗಮನಸೆಳೆದಿದ್ದಾರೆ. ಆರ್​. ಅಶ್ವಿನ್​ ಉತ್ತರಾಧಿಕಾರಿಯಾಗಿ ವಾಷಿಂಗ್ಟನ್​ ಸುಂದರ್​ ಈಗಾಗಲೆ ಭರವಸೆ ಮೂಡಿಸಿದ್ದಾರೆ. ಜಡೇಜಾ ಸ್ಥಾನವನ್ನೂ ತುಂಬಲು ಅಕ್ಷರ್​ ಪಟೇಲ್​ ತುದಿಗಾಲಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net