ಭಾರತದ ಕ್ರಿಕೆಟ್ ಆಟಗಾರರಿಗೂ, ಪಾಕ್​ ಆಟಗಾರರಿಗೂ ಇದೊಂದು ವ್ಯತ್ಯಾಸ ಇದೆಯೆಂದಿದ್ದಾರೆ ಇಂಜಮಾಮ್​ ‌ಉಲ್‌ ಹಕ್‌; ಇದು ಒಪ್ಪುವಂಥದ್ದಾ...? ನೀವೇ ಹೇಳಿ

Injaman 20 april 20
Published on

ಕರಾಚಿ: ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ನಾಯಕ, ಸದ್ಯ ಮುಖ್ಯ ಆಯ್ಕೆಗಾರನಾಗಿರುವ ಇಂಜಮಾಮ್​ ‌ಉಲ್‌ ಹಕ್ ಅವರು ಭಾರತ ಕ್ರಿಕೆಟ್​ ಆಟಗಾರರಿಗೂ ಮತ್ತು ಪಾಕ್​ ಆಟಗಾರರಿಗೂ ವ್ಯತ್ಯಾಸ ಇದೆ ಎಂದು ಹೇಳಿದ್ದಾರೆ. ಹಾಗೇ ಆ ವ್ಯತ್ಯಾಸ ಏನು ಎಂಬುದನ್ನೂ ಇಂಜಾಮಾನ್​ ತಿಳಿಸಿದ್ದಾರೆ.

ಭಾರತೀಯ ಕ್ರಿಕೆಟ್​ ಆಟಗಾರರು ತಂಡದಲ್ಲಿ ತಮ್ಮ ಸ್ಥಾನ ಗಟ್ಟಿ ಮಾಡಿಕೊಳ್ಳಲು, ವೈಯಕ್ತಿಕ ದಾಖಲೆ ಸೃಷ್ಟಿಸಲು ಆಡುತ್ತಾರೆ. ಆದರೆ ನಾವು ನಮ್ಮ ತಂಡಕ್ಕಾಗಿ, ದೇಶಕ್ಕಾಗಿ ಆಡುತ್ತೇವೆ. ಇದೇ ಭಾರತೀಯ ಕ್ರಿಕೆಟ್​ ಆಟಗಾರರಿಗೂ, ಪಾಕ್​ ಆಟಗಾರರಿಗೂ ಇರುವ ವ್ಯತ್ಯಾಸ ಎಂದಿದ್ದಾರೆ.

ಪಾಕಿಸ್ತಾನ ಆಟಗಾರರು ಯಾವತ್ತೂ ವೈಯಕ್ತಿಕ ದಾಖಲೆಗಾಗಿ ಆಡುವುದಿಲ್ಲ. ನಾವು ಆಡುತ್ತಿದ್ದ ಸಮಯದಿಂದಲೂ ಅಷ್ಟೇ. ಭಾರತೀಯ ಆಟಗಾರರ ತರಹ ನಾವು ಇಲ್ಲ ಎಂದು ಪಾಕ್​ ಮಾಜಿ ಕ್ರಿಕೆಟರ್​ ರಮಿಜ್​ ರಾಜಾ ಅವರ ಯೂಟ್ಯೂಬ್​ ಚಾನಲ್​ನಲ್ಲಿ ಆಯೋಜಿಸಿದ್ದ ಟಾಕಿಂಗ್​ ಶೋದಲ್ಲಿ ಮಾತನಾಡುತ್ತ ತಿಳಿಸಿದ್ದಾರೆ.

ಇಮ್ರಾನ್​ ಖಾನ್ ಕ್ಯಾಪ್ಟನ್​ ಆಗಿದ್ದಾಗ ಹೇಗಿತ್ತು ಎಂಬ ಬಗ್ಗೆ ಮಾತನಾಡಿದ ಇಂಜಮಾಮ್​ ‌ಉಲ್‌ ಹಕ್, ಸಾಮಾನ್ಯವಾಗಿ ಓರ್ವ ಆಟಗಾರ ಪದೇಪದೆ ವಿಫಲವಾದರೆ ಅವನನ್ನು ತಂಡದಿಂದ ಕೈಬಿಡಲಾಗುತ್ತದೆ. ಆದರೆ ಇಮ್ರಾನ್​ ಖಾನ್​ ಹಾಗೆ ಮಾಡುತ್ತಿರಲಿಲ್ಲ. ಸರಣಿ ಸೋತ ಬಳಿಕ, ಯಾರಾದರೂ ಕಳಪೆ ಆಟವಾಡಿದ್ದರೆ ಅವರನ್ನು ಕೈ ಬಿಡುತ್ತಿರಲಿಲ್ಲ. ಇದರಿಂದಾಗಿ ಫಾರ್ಮ್​ ಕಳೆದುಕೊಂಡ ಪ್ಲೇಯರ್​ಗೆ ಮತ್ತೊಮ್ಮೆ ಅವಕಾಶ ಸಿಗುತ್ತಿತ್ತು. ಆತ ಚೆನ್ನಾಗಿ ಆಡುತ್ತಿದ್ದ. ಇಮ್ರಾನ್ ಯಾವತ್ತೂ ಟೀಂ ಸದಸ್ಯರಿಗೆ ಬೆನ್ನೆಲುಬಾಗಿರುತ್ತಿದ್ದರು ಎಂದು ತಿಳಿಸಿದ್ದಾರೆ.

ನಮ್ಮ ಕಾಲದಲ್ಲಿ ಭಾರತದಲ್ಲಿ ತುಂಬ ಬಲಿಷ್ಠ ಬ್ಯಾಟ್ಸ್​ಮನ್​​ಗಳು ಇದ್ದರು. ಅವರಷ್ಟು ದಾಖಲೆಗಳನ್ನು ನಮಗೆ ಮಾಡಲು ಆಗಲಿಲ್ಲ. ಆದರೆ ನಾವು 30-40 ರನ್​​ ಗಳಿಸಿದರೂ ಅದನ್ನು ತಂಡದ ಗೆಲುವಿಗಾಗಿಯೇ ಗಳಿಸುತ್ತಿದ್ದೆವು. ಆದರೆ ಭಾರತೀಯ ಆಟಗಾರ ಶತಕ ಬಾರಿಸಿದರೆ ಅದು ಅವನ ವೈಯಕ್ತಿಕ ದಾಖಲೆಯಾಗುತ್ತಿತ್ತೇ ಹೊರತು ತಂಡಕ್ಕಾಗಿ ಆಗಿರಲಿಲ್ಲ ಎಂದು ಇಂಜಮಾಮ್​ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net